ಶನಿವಾರ, ಮೇ 15, 2021
25 °C
45 ವರ್ಷ ಮೇಲ್ಪಟ್ಟ 93 ಸಾವಿರ ಜನರಿಗೆ ವ್ಯಾಕ್ಸಿನ್: ಜಿಲ್ಲಾಧಿಕಾರಿ

ದಾವಣಗೆರೆ: 1.22 ಲಕ್ಷ ಮಂದಿಗೆ ಕೋವಿಡ್ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ನಗರದ ವಿವಿಧೆಡೆ ಶುಕ್ರವಾರ ಕೋವಿಡ್ ಲಸಿಕಾ ಅಭಿಯಾನ ನಡೆಯಿತು.

ಭಾಷಾನಗರ, ಬೀಡಿ ಲೇಔಟ್, ಆಜಾದ್‍ನಗರ, ಮೆಹಬೂಬ್ ನಗರ, ಶಿವನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜೊತೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಲಸಿಕೆ, ಮಾಸ್ಕ್, ಅಂತರ ಕಾಯ್ದುಕೊಳ್ಳುವ ಕುರಿತು ಅರಿವು ಮೂಡಿಸಿದರು.

ಈ ವೇಳೆ ಆಶಾ ಕಾರ್ಯಕರ್ತೆಯರು ‘ಜನಸಂದಣಿ ಪ್ರದೇಶದಿಂದ ದೂರವಿರಿ’, ‘ನಿಮ್ಮ ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ’, ‘1977ಕ್ಕೆ ಮೊದಲು ಹುಟ್ಟಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಘೋಷಣೆ ಕೂಗಿದರು.

ಜಾಥಾ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಂತೇಶ್ ಬೀಳಗಿ, ‘ಕಳೆದ ವರ್ಷ ಹಳೆ ದಾವಣಗೆರೆ ಕೊರೊನಾ ಗಂಡಾಂತರ ಎದುರಿಸಿದ್ದು, ಇದರಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಿ, ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುತ್ತಿದ್ದೇವೆ’ ಎಂದರು.    

‘ಜಿಲ್ಲೆಯಾದ್ಯಂತ ಈಗಾಗಲೇ 1.22 ಲಕ್ಷ ಜನರಿಗೆ ಲಸಿಕೆ ಹಾಕಿಸಿದ್ದು, 45 ವರ್ಷ ಮೇಲ್ಪಟ್ಟ 93 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕು. ಆದ್ದರಿಂದ ಈ ಭಾಗದ ಪಾಲಿಕೆ ಸದಸ್ಯರ ಸಮ್ಮುಖದಲ್ಲಿ ಲಸಿಕಾ ಅಭಿಯಾನ ಏರ್ಪಡಿಸಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

ಡಿಎಚ್‍ಒ ಡಾ.ನಾಗರಾಜ್ ಮಾತನಾಡಿ, ‘ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಈಗಾಗಲೇ 115 ಉಪಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಪ್ರತಿ ಒಂದು ಉಪಕೇಂದ್ರಕ್ಕೆ 50 ಜನರ ಗುರಿಯಂತೆ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಒಂದು ದಿನಕ್ಕೆ 10 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 6 ಸಾವಿರ ಜನರನ್ನು ತಲುಪುತ್ತಿದ್ದೇವೆ. ಕೋವಿಡ್ ಲಸಿಕೆ ಸಂಖ್ಯೆ ಹೆಚ್ಚಿಸಲು ಇಲಾಖೆಯ ಪ್ರತಿನಿಧಿಗಳು ಸಮೀಕ್ಷೆ ನಡೆಸುತ್ತಿದ್ದೇವೆ’ ಎಂದು
ತಿಳಿಸಿದರು. 

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್.ಎಲ್.ಡಿ, ಆರ್ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ, ಡಿಎಲ್‍ಒ ಡಾ.ಮುರುಳೀಧರ್, ಡಿಎಫ್‍ಒ ಡಾ. ರೇಣುಕಾರಾಧ್ಯ, ಡಿಎಂಒ ಡಾ. ನಟರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಡಾ.ಮಂಜುಳಾ, ಡಾ. ವೇದಮೂರ್ತಿ, ಡಾ. ಸುನಿತಾ, ಡಾ.ವೆಂಕಟೇಶ್, ಡಾ.ಉಮಾಪತಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.