ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಮತ್ತೆ ಪ್ರತಿಧ್ವನಿಸಿದ ನಾಮಕರಣ ವಿವಾದ

ಸದಸ್ಯರ ವಾಗ್ವಾದ
Last Updated 10 ಫೆಬ್ರುವರಿ 2023, 4:32 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಡಾವಣೆ, ಬಸ್‌ ನಿಲ್ದಾಣಕ್ಕೆ ನಾಯಕರ ಹೆಸರು ಇಡುವ ವಿವಾದ ಮತ್ತೊಮ್ಮೆ ಪ್ರತಿಧ್ವನಿಸಿತು. ನಾಮಕರಣ ವಿಷಯ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಹುತೇಕ ಕಲಾಪ ಈ ವಿವಾದಕ್ಕೆ ಬಲಿಯಾಯಿತು.

ಇಲ್ಲಿನ ಶಿವಪಾರ್ವತಿ ಬಡಾವಣೆಯ ಹೆಸರನ್ನು ಬದಲಾಯಿಸಿ ‘ಜಿ. ಮಲ್ಲಿಕಾರ್ಜುನಪ್ಪ’ ಬಡಾವಣೆ ಎಂದು ನಾಮಕರಣ ಮಾಡಲು ಪಾಲಿಕೆ ಬಿಜೆಪಿ ಆಡಳಿತ ಮುಂದಾಗಿದೆ. ಈಗಾಗಲೇ ಇರುವ ಹೆಸರನ್ನು ಬದಲಾಯಿಸುವುದು ಸರಿಯಲ್ಲ. ಅಲ್ಲಿನ ನಿವಾಸಿಗಳು ಆಧಾರ್‌ ಕಾರ್ಡ್‌ ಸಹಿತ ಎಲ್ಲ ದಾಖಲೆಗಳಿಗೆ ಅದೇ ಹೆಸರನ್ನು ನೀಡಿದ್ದಾರೆ. ಅವರಿಗೆ ತೊಂದರೆಯಾಗುತ್ತದೆ ಎಂದು ಸದಸ್ಯ ಎ. ನಾಗರಾಜ್‌ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್‌ ಮಂಜುನಾಥ್‌ ದನಿಗೂಡಿಸಿದರು.

ಆಗ ಪ್ರತಿಕ್ರಿಯಿಸಿದ ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌, ‘ಸರ್ಕಾರದ ಮಾರ್ಗಸೂಚಿಯ ಅನ್ವಯ ಬಡಾವಣೆಗೆ ನಾಮಕರಣ ಮಾಡಿದ್ದೇವೆ. ಸರ್ಕಾರದಿಂದ ಅನುಮೋದನೆ ಸಿಕ್ಕಿದೆ’ ಎಂದರು. ಇದಕ್ಕೆ ಮಾಜಿ ಮೇಯರ್‌ ಅಜಯ್‌ಕುಮಾರ್‌, ಸದಸ್ಯ ಪ್ರಸನ್ನಕುಮಾರ್‌ ದನಿಗೂಡಿಸಿದರು.

‘ಇಟ್ಟ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಹೊಸ ಬಡಾವಣೆಗಳಿಗೆ ನಿಮಗೆ ಬೇಕಾದವರ ಹೆಸರು ಇಡಿ. ಇರುವ ಹೆಸರು ಬದಲಾಯಿಸುವುದು ಏಕೆ’ ಎಂದು ನಾಗರಾಜ್‌ ಏರಿದ ದನಿಯಲ್ಲಿ ಪ್ರಶ್ನಿಸಿದರು.

‘ಜೀವಂತ ಇರುವ ವ್ಯಕ್ತಿಯ ಹೆಸರನ್ನು ಬಡಾವಣೆ, ರಸ್ತೆಗೆ ಇಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ಇದೆ. ಮಲ್ಲಿಕಾರ್ಜುನಪ್ಪ ಹೆಸರು ಇಡಬಾರದು ಎಂದರೆ ಪಾಲಿಕೆಯ ಈ ಸಭಾಂಗಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರು ಇಟ್ಟಿದ್ದೀರಿ, ಇದು ಸರಿಯೇ, ಒಬ್ಬರ ಹೆಸರನ್ನೇ ಎಷ್ಟು ಬಾರಿ ಇಡುತ್ತೀರಿ’ ಎಂದು ಅಜಯಕುಮಾರ್‌ ಪ್ರಶ್ನಿಸಿದರು.

ಬಡಾವಣೆ ನಿವಾಸಿಗಳಿಂದ ಮಾಹಿತಿ ಪಡೆಯಿರಿ ಎಂದು ಆಯುಕ್ತೆ ರೇಣುಕಾ ಅವರಿಗೆ ನಾಗರಾಜ್‌ ಸಲಹೆ ನೀಡಿದರು.

ಸರ್ಕಾರದಿಂದ ಅನುಮೋದನೆ ಆಗಿದ್ದರೆ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಆಯುಕ್ತರು ತಿಳಿಸಿದರು. ಅನುಮೋದನೆ ಆಗಿದ್ದರೆ ಆದೇಶದ ಪ್ರತಿ ತೋರಿಸಿ ಎಂದು ವಿರೋಧ ‍ಪಕ್ಷದವರು ಪಟ್ಟು ಹಿಡಿದರು.

ಆದೇಶದ ಪ್ರತಿ ತೋರಿಸುವುದಾಗಿ ಹೇಳಿದ ಪ್ರಸನ್ನಕುಮಾರ್‌ ಪ್ರತಿ ತೋರಿಸಿದರು. ಹಳೆ ಬಸ್‌ ನಿಲ್ದಾಣದ ನಾಮಕರಣ ವಿವಾದವೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಹಳೆ ಬಸ್‌ ನಿಲ್ದಾಣಕ್ಕೆ 2004–05ರಲ್ಲಿ ನಗರಸಭೆಯಲ್ಲಿ ‘ಶಾಮನೂರು ಶಿವಶಂಕರಪ್ಪ ಹೆಸರು ಇಡುವಂತೆ ಠರಾವು ‌ಆಗಿದೆ. ಈಗ ಬಿಜೆಪಿ ಬದಲಾಯಿಸಲು ಹೊರಟಿದೆ ಎಂದು ನಾಗರಾಜ್‌ ದೂರಿದರು.

‘ದ್ವೇಷ ರಾಜಕಾರಣ ಮಾಡುತ್ತಿಲ್ಲ. ದೇಶಕ್ಕಾಗಿ ದುಡಿದ ನಾಯಕರ ಹೆಸರು ಇಡುವ ಮೂಲಕ ಯುವ ಪೀಳಿಗೆಗೆ ಅವರ ಪರಿಚಯ ಮಾಡಿಕೊಡಲು ‌ಅಟಲ್‌ ಬಿಹಾರಿ ವಾಜಪೇಯಿ ಹೆಸರನ್ನು ಇಡಲು ಹಿಂದಿನ ಸಭೆಯಲ್ಲಿ ಅನುಮೋದಿಸಲಾಗಿದೆ’ ಎಂದು ಅಜಯ್‌ ಕುಮಾರ್‌ ಹೇಳಿದರು.

ಹೆಸರು ಇಟ್ಟ ಬಗ್ಗೆ ಆದೇಶ ಇದ್ದರೆ ಕೊಡಿ ಎಂದು ಪ್ರಸನ್ನಕುಮಾರ್‌ ಪಟ್ಟು ಹಿಡಿದರು. ಮೇಯರ್‌ ದನಿಗೂಡಿಸಿದರು. ಏಕಾಏಕಿ ಆದೇಶದ ಪ್ರತಿ ಕೊಡಲು ಆಗುವುದಿಲ್ಲ ಎಂದು ನಾಗರಾಜ್‌ ಗರಂ ಆದರು. ಮಧ್ಯಾಹ್ನದವರೆಗೂ ಇದೇ ವಿಷಯದಲ್ಲಿ ಸದಸ್ಯರು ಆರೋಪ–ಪ್ರತ್ಯಾರೋಪದಲ್ಲಿ ತೊಡಗಿದರು.

ಸಭೆ ಆರಂಭದಲ್ಲೇ ವಿರೋಧ ಪಕ್ಷದ ಸದಸ್ಯರು, ‘6 ತಿಂಗಳಿಗೊಮ್ಮೆ ಸಭೆ ಕರೆಯುತ್ತೀರಿ, ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡುವುದಿಲ್ಲ. ಶೂನ್ಯವೇಳೆಯಲ್ಲಿ ಸಮಸ್ಯೆ ಪ್ರಸ್ತಾಪಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘3 ವರ್ಷಗಳಾದರೂ ವಾರ್ಡ್‌ನ ಒಂದೇ ಒಂದು ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಜನ ಬಯ್ಯುತ್ತಿದ್ದಾರೆ’ ಎಂದು ಗಡಿಗುಡಾಳ್‌ ಮಂಜುನಾಥ್‌, ಅಬ್ದುಲ್‌ ಲತೀಫ್‌ ದೂರಿದರು.

‘ಎಲ್ಲ ವಾರ್ಡ್‌ಗಳಲ್ಲಿ ಯುಜಿಡಿ ಸಮಸ್ಯೆ ಇದೆ. ಅಧಿಕಾರಿಗಳಿಗೆ ಬರುವುದಿಲ್ಲ’ ಎಂದು ಬಿಜೆಪಿ ಸದಸ್ಯೆ ಉಮಾಪ್ರಕಾಶ್‌ ಸಭೆಗೆ ಗಮನಕ್ಕೆ ತಂದರು. ಇದಕ್ಕೆ ಬಹುತೇಕ ಎಲ್ಲ ಸದಸ್ಯರೂ ದನಿಗೂಡಿಸಿದರು.

‘ಬಹುತೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳಿಲ್ಲ. ಒಂದು ಬೀದಿ ದೀಪ ಹಾಕಲು ನಮಗೆ ಆಗಿಲ್ಲ‘ ಎಂದು ಗಡಿಗುಡಾಳ್‌, ಶಿವಲೀಲಾ ಆಕ್ರೋಶ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳುವುದಾಗಿ ಎಂಜಿನಿಯರ್‌ ಉದಯ್‌ಕುಮಾರ್‌ ಹೇಳಿದರು.

ಚರಂಡಿ, ನೀರಿನ ಸಮಸ್ಯೆ, ವಾರ್ಡ್‌ಗಳಲ್ಲಿ ಹಳೆಯ ಮರಗಳ ತೆರವು, ಫ್ಲೆಕ್ಸ್‌ ಹಾವಳಿ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾದವು. ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.

ಮೇಯರ್‌ ಜಯಮ್ಮ ಗೋಪಿನಾಯ್ಕ್, ಉಪ ಮೇಯರ್‌ ಗಾಯತ್ರಿಬಾಯಿ ಖಂಡೋಜಿರಾವ್‌ ಹಾಗೂ ಅಧಿಕಾರಿಗಳು
ಇದ್ದರು.

ಚರ್ಚೆಗೆ ಕಾರಣವಾದ ಜಲಸಿರಿ ಗುಂಡಿ
‘ಜಲಸಿರಿ ಕಾಮಗಾರಿಗಾಗಿ ಎಲ್ಲ ವಾರ್ಡ್‌ಗಳಲ್ಲಿ ಗುಂಡಿ ತೆಗೆಯಲಾಗಿದೆ. ನಮ್ಮ ವಾರ್ಡ್‌ನಲ್ಲಿ ಗುಂಡಿಯಲ್ಲಿ ಎರಡು ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ’ ಎಂದು ಸದಸ್ಯೆ ಮೀನಾಕ್ಷಿ ಜಗದೀಶ್‌ ಪ್ರಸ್ತಾಪಿಸಿದರು.

ಜಲಸಿರಿ ಕಾಮಗಾರಿ ಸಮಸ್ಯೆ ಹೆಚ್ಚಿದೆ. 6 ತಿಂಗಳಾದರೂ ಕೆಲಸ ಮಾಡುವುದಿಲ್ಲ. ಮೀಟರ್‌, ಬಕೆಟ್‌ ಕಳಪೆಯಾಗಿದೆ ಎಂದು ಸದಸ್ಯರು ಎಂಜಿನಿಯರ್‌ ಅನ್ನು ತರಾಟೆಗೆ ತೆಗೆದುಕೊಂಡರು.

ಕಾಮಗಾರಿಯಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ವಿಳಂಬವಾಗುತ್ತಿದೆ ಎಂದು ಎಂಜಿನಿಯರ್‌ ರವಿ ಸಿ.ಟಿ. ಹೇಳಿದರು.

ಜಲಸಿರಿ ಯೋಜನೆ ಸಂಬಂಧ ಪ್ರತ್ಯೇಕ ಸಭೆ ಕರೆಯೋಣ ಎಂದು ಆಯುಕ್ತರು ಹೇಳಿದರು.

ಸ್ಥಾಯಿ ಸಮಿತಿ ವಾಹನ ವಿಚಾರ ಚರ್ಚೆ: ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಓಡಾಡಲು ವಾಹನ ಕೊಟ್ಟಿದ್ದಿರಿ. ಆದರೆ ಸರ್ಕಾರ ಇದನ್ನು ರದ್ದು ಮಾಡಿದೆ. ವಾಹನದ ಬಾಡಿಗೆ, ಇಂಧನದ 8 ತಿಂಗಳ ಬಿಲ್‌ ಕಳಿಸಿದ್ದು, ಇದು ಸರ್ಕಾರದ ಆದೇಶದ ಉಲ್ಲಂಘನೆ. ಬಿಲ್‌ ಶುಲ್ಕವನ್ನು ಸ‌ದಸ್ಯರು ಕಟ್ಟಬೇಕಾಗುತ್ತದೆ ಎಂದು ಸದಸ್ಯ ನಾಗರಾಜ್‌ ಹೇಳಿದರು.

‘ಪಾಲಿಕೆ ಕೆಲಸ ಮಾಡಿದ ಕಾರಣ ನಮ್ಮ ಗೌರವಧನದಿಂದ ಕೊಡೋಣ’ ಎಂದು ಅಜಯ್‌ಕುಮಾರ್‌ ಹೇಳಿದಾಗ ವಿರೋಧ ಪಕ್ಷದವರು, ‘ನಾವು ಕೊಡುವುದಿಲ್ಲ, ನೀವು ಕೊಡಿ’ ಎಂದರು.

ಬೀದಿ ನಾಯಿ ಕಚ್ಚಿ ಮೃತಪಟ್ಟರೆ ₹ 10 ಲಕ್ಷ ಪರಿಹಾರ ನೀಡಿ
ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದೆ. ₹ 75 ಲಕ್ಷ ಖರ್ಚು ಮಾಡಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೂ ಹಾವಳಿ ನಿಂತಿಲ್ಲ. ನಾಯಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಿ ಎಂದು ನಾಗರಾಜ್‌ ವಿಷಯ ಪ್ರಸ್ತಾಪಿಸಿದರು.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾತ್ರ ಅವಕಾಶ ಇದೆ ಎಂದು ಆಯುಕ್ತರು ತಿಳಿಸಿದರು.

ಬೀದಿ ನಾಯಿ ಕಚ್ಚಿ ಮೃತಪಟ್ಟರೆ ₹ 10 ಲಕ್ಷ ಪರಿಹಾರ ನೀಡಿ, ಕಚ್ಚಿ ವ್ಯಕ್ತಿ ಗಾಯಗೊಂಡರೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಪಾಲಿಕೆಯಿಂದ ಭರಿಸಿ ಎಂದು ಚಮನ್‌ ಸಾಬ್‌ ಸಲಹೆ ನೀಡಿದರು.

ನಕಲಿ ಕಟ್ಟಡ ಪರವಾನಗಿ: ಕ್ರಮಕ್ಕೆ ಆಗ್ರಹ
ನಕಲಿ ಕಟ್ಟಡ ಪರವಾನಗಿ ನೀಡಿ ಹಣ ಮಾಡುವ ಅಧಿಕಾರಿಗಳು ಇದ್ದಾರೆ. ನಕಲಿ ಚಲನ್‌ ಮಾಡಿ ಪಾಲಿಕೆಯಲ್ಲಿ ₹ 25 ಕೋಟಿ ಹಣ ಲೂಟಿ ಮಾಡಿದ ಘಟನೆ ನಡೆದಿತ್ತು. ಆ ಬಗ್ಗೆ ತನಿಖೆ ಮಾಡಿ ಎಂದು ಗಡಿಗುಡಾಳ್‌ ಮಂಜುನಾಥ್‌, ಚಮನ್‌ಸಾಬ್‌ ಆಗ್ರಹಿಸಿದರು.

ಕಟ್ಟಡ ಪರವಾನಗಿಗೆ ಮಣ್ಣು ಪರೀಕ್ಷೆ ಮಾಡಿಸುವಂತೆ ಹೇಳುತ್ತಿದ್ದಾರೆ. ಅದಕ್ಕೆ ₹ 30,000 ಕೇಳುತ್ತಿದ್ದಾರೆ ಎಂದು ಸದಸ್ಯ ಜಯಪ್ರಕಾಶ್‌ ಪ್ರಸ್ತಾಪಿಸಿದಾಗ, ಜಿ–2 ಪ್ಲಸ್‌ ಮೇಲಿನ ಕಟ್ಟಡಕ್ಕೆ ಮಾತ್ರ ಮಣ್ಣು ಪರೀಕ್ಷೆ ಕಡ್ಡಾಯ ಇದೆ ಎಂದು ಎಂಜಿನಿಯರ್‌ ತಿಳಿಸಿದರು.

ಆಗ ವಿಜಯಕುಮಾರ್‌, ‘ವಾಣಿಜ್ಯ ಮಳಿಗೆಗೆ ಮಾತ್ರ ಮಣ್ಣು ಪರೀಕ್ಷೆ ಕಡ್ಡಾಯ ಮಾಡಿ. ಮನೆ ನಿರ್ಮಾಣಕ್ಕೆ ಬೇಡ. ಬೈಲಾಗೆ ತಿದ್ದು‍ಪಡಿ ತನ್ನಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT