ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ದಾವಣಗೆರೆಯ ಪ್ರಥಮ್‌, ಅಭಿಜ್ಞಾ ಆಯ್ಕೆ

ಚರಂಡಿ ನೀರಿನಲ್ಲಿ ಭಾರ ಲೋಹ ಕಡಿಮೆಗೊಳಿಸುವ ಸಂಶೋಧನೆ
Last Updated 17 ಡಿಸೆಂಬರ್ 2018, 13:45 IST
ಅಕ್ಷರ ಗಾತ್ರ

ದಾವಣಗೆರೆ: ಕಲಬುರ್ಗಿಯಲ್ಲಿ ನಡೆದ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ವಿದ್ಯಾರ್ಥಿಗಳು ತಮ್ಮ ಕಿರು ಸಂಶೋಧನಾ ಪ್ರಬಂಧಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಎಂಟನೇ ತರಗತಿ ವಿದ್ಯಾರ್ಥಿ ಕೆ.ಎಂ. ಪ್ರಥಮ್‌ ‘ರಾಜ್ಯ ಬಾಲ ವಿಜ್ಞಾನಿ’ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಚರಂಡಿ ನೀರಿನಲ್ಲಿರುವ ಭಾರಿ ಲೋಹಗಳ ಪ್ರಮಾಣವನ್ನು ಸ್ಥಳೀಯ ಶಿಲೀಂದ್ರ ಬಳಸಿ ಕಡಿಮೆ ಮಾಡುವ ಕುರಿತು ಪ್ರಥಮ್‌ ಜೊತೆಗೆ ಏಳನೇ ತರಗತಿ ವಿದ್ಯಾರ್ಥಿನಿ ಡಿ. ಅಭಿಜ್ಞಾ ತನ್ವಿ ಅವರು ಕೈಗೊಂಡ ಕಿರು ಸಂಶೋಧನಾ ಪ್ರಬಂಧಕ್ಕೆ ‘ನಗರ ಕಿರಿಯರ ವಿಭಾಗ’ದಲ್ಲಿ ಪ್ರಥಮ ಸ್ಥಾನ ಸಿಕ್ಕಿದೆ. ಈ ತಂಡಕ್ಕೆ ‘ಡಾ. ಸ.ಜ. ನಾಗಲೋಟಿಮಠ ಪ್ರಶಸ್ತಿ’ಯೂ ಲಭಿಸಿರುವುದು ಇನ್ನೊಂದು ವಿಶೇಷ.

ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಡಿಸೆಂಬರ್‌ 26ರಿಂದ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಈ ಇಬ್ಬರು ವಿದ್ಯಾರ್ಥಿಗಳ ತಂಡವು ಕರ್ನಾಟಕವನ್ನು ಪ್ರತಿನಿಧಿಸಲಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯೊಲಜಿ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ದೇವರಾಜ್‌ ಸಹಕಾರದೊಂದಿಗೆ ಶಾಲೆಯ ಶಿಕ್ಷಕರಾದ ಲೋಹಿತ್‌ ಹಾಗೂ ವಿಜಯಲಕ್ಷ್ಮಿ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಳ್ಳಲಾಗಿತ್ತು. ಈ ತಂಡದ ಶಿಕ್ಷಕರಿಗೆ ₹ 5,000 ನಗದು ಮತ್ತು ₹ 5,000 ಮೌಲ್ಯದ ಪುಸ್ತಕ ಒಳಗೊಂಡ ‘ಅತ್ಯುತ್ತಮ ಮಾರ್ಗದರ್ಶಿ ಶಿಕ್ಷಕ ಪ್ರಶಸ್ತಿ’ಯೂ ಲಭಿಸಿದೆ.

ದಾವಣಗೆರೆ ಜಿಲ್ಲೆಗೆ 6ನೇ ಬಾರಿ ‘ರಾಜ್ಯ ಬಾಲ ವಿಜ್ಞಾನಿ’ ಪ್ರಶಸ್ತಿ ಲಭಿಸಿದೆ.

ಏನಿದು ಸಂಶೋಧನೆ?: ಪಾಲಿಕೆ ವ್ಯಾಪ್ತಿಯ ಚರಂಡಿ ನೀರಿನಲ್ಲಿ ಆರ್ಸೆನಿಕ್‌ ಎಂಬ ಭಾರಿ ಲೋಹಗಳ ಪ್ರಮಾಣ ಅತಿ ಹೆಚ್ಚಿರುವುದು ಕಂಡು ಬಂತು. ತುಪ್ಪದ ಹೀರೇಕಾಯಿಯ ಸ್ಪಂಜಿನ ಮೇಲೆ ಆಸ್ಪರೆಜಿಲ್ಸ್‌ ಎಂಬ ಶಿಲೀಂದ್ರವನ್ನು ಬೆಳೆಸಿ ಚರಂಡಿ ನೀರಿನಲ್ಲಿ 24 ಗಂಟೆಗಳ ಕಾಲ ನೆನೆಸಿಡಲಾಗಿತ್ತು. ಬಳಿಕ ಐ.ಸಿ.ಪಿ.ಒ.ಇ.ಎಸ್‌ ವಿಶ್ಲೇಷಣೆ ಮಾಡಿದಾಗ ನೀರಿನಲ್ಲಿದ್ದ ಶೇ 53ರಿಂದ ಶೇ 54ರಷ್ಟು ಆರ್ಸೆನಿಕ್‌ ಅನ್ನು ಸ್ಪಂಜು ಹೀರಿಕೊಂಡಿರುವುದು ಪತ್ತೆಯಾಗಿತ್ತು. ಎಸ್‌.ಎ.ಎಂ. ವಿಶ್ಲೇಷಣೆ ಮಾಡಿದಾಗ ಸ್ಪಂಜಿನ ಯಾವ ಯಾವ ಭಾಗದಲ್ಲಿ ಆರ್ಸೆನಿಕ್‌ ಕಣಗಳನ್ನು ಹಿಡಿದಿಟ್ಟುಕೊಂಡಿದೆ ಎಂಬುದು ಕಂಡು ಬಂತು ಎಂದು ಪ್ರಥಮ್‌ ‘ಪ್ರಜಾವಾಣಿ’ಗೆ ತಮ್ಮ ಪ್ರಯೋಗದ ಮಾಹಿತಿಯನ್ನು ನೀಡಿದರು.

‘ಕಾರ್ಖಾನೆಯ ತ್ಯಾಜ್ಯ, ತಂಬಾಕು ಉತ್ಪನ್ನ, ಇಟ್ಟಿಗೆ, ವೈದ್ಯಕೀಯ ತ್ಯಾಜ್ಯ ಸೇರಿ ಹಲವು ಕಲುಷಿತ ನೀರು ಚರಂಡಿಯನ್ನು ಸೇರುತ್ತಿವೆ. ಚರಂಡಿಯಲ್ಲಿನ ಭಾರಿ ಲೋಹಗಳು ಅಂತರ್ಜಲ ಮಾಲಿನ್ಯ ಮಾಡುವುದರ ಜೊತೆಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಿಲೀಂದ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಚರಂಡಿ ನೀರನ್ನು ಶುದ್ಧೀಕರಿಸಿದರೆ ಅದನ್ನು ದಿನಬಳಕೆಗೆ ಹಾಗೂ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬಹುದು. ಆಗ ನೀರಿನ ಸಮಸ್ಯೆಯೂ ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ’ ಎಂದು ಮಾರ್ಗದರ್ಶಿ ಶಿಕ್ಷಕ ಲೋಹಿತ್‌ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಂಗಸ್ವಾಮಿ, ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಅಂಗಡಿ ಸಂಗಪ್ಪ ಅವರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT