ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಎರಡು ಇಲಾಖೆಗಳಿಗೆ ಪ್ರಭಾರಿಗಳೇ ಗತಿ!

ತಾ.ಪಂ. ಇ.ಒ, ಸಮಾಜ ಕಲ್ಯಾಣ ಇಲಾಖೆ ಎ.ಡಿ. ಹುದ್ದೆ ಖಾಲಿ; ತಿಂಗಳುಗಳಿಂದ ಮುಖ್ಯಸ್ಥರೇ ಇಲ್ಲ
Published 18 ನವೆಂಬರ್ 2023, 7:34 IST
Last Updated 18 ನವೆಂಬರ್ 2023, 7:34 IST
ಅಕ್ಷರ ಗಾತ್ರ

ಹರಿಹರ: ಸರ್ಕಾರದ ವಿವಿಧ ಯೋಜನೆಗಳ ಜಾರಿಯಲ್ಲಿ ಇಲಾಖಾ ಕಚೇರಿಗಳ ಮುಖ್ಯಸ್ಥರ ಪಾತ್ರ ಮಹತ್ವದ್ದು. ಆದರೆ, ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ತಿಂಗಳುಗಳಿಂದ ಮುಖ್ಯಸ್ಥರೇ ಇಲ್ಲ. 

ತಾಲ್ಲೂಕು ಪಂಚಾಯಿತಿ ಮುಖ್ಯಸ್ಥರ ಹುದ್ದೆ ಒಂದೂವರೆ ತಿಂಗಳಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುಖ್ಯಸ್ಥರ ಹುದ್ದೆ ಎರಡೂವರೆ ತಿಂಗಳಿಂದ ಖಾಲಿ ಇವೆ. ವರ್ಗಾವಣೆ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ (ಎ.ಡಿ.)ರ ಸ್ಥಾನ ತೆರವಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇ.ಒ.) ಹುದ್ದೆ ಆ ಬಳಿಕ ಭರ್ತಿಯಾಗಿಲ್ಲ.

ಈ ಎರಡೂ ಇಲಾಖೆಗಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಾರ್ಯ ಒತ್ತಡ ಇದೆ. ಗ್ರಾಮ ಪಂಚಾಯಿತಿಗಳ ಆಡಳಿತದ ಮೇಲೆ ನಿಗಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗೆ ತರಬೇತಿ, ಮಾರ್ಗದರ್ಶನ ನೀಡುವುದು, ನರೇಗಾ ಕಾಮಗಾರಿ ಪರಿಶೀಲಿಸುವುದೂ ಸೇರಿದಂತೆ ಹತ್ತಾರು ಮಹತ್ವದ ಜವಾಬ್ದಾರಿಗಳು ತಾ.ಪಂ. ಇ.ಒ ಮೇಲಿರುತ್ತವೆ. 

ಸೆ.30ರಂದು ಆಗಿನ ಇ.ಒ. ಲೋಕಾಯುಕ್ತ ಬಲೆಗೆ ಬಿದ್ದ ಬಳಿಕ ಈ ಸ್ಥಾನ ಖಾಲಿ ಉಳಿದಿದೆ. ಪ್ರೌಢಶಾಲೆ ಮುಖ್ಯ ಶಿಕ್ಷಕ ಹುದ್ದೆಗೆ ಸಮನಾಗಿರುವ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರನ್ನು ತಾತ್ಕಾಲಿಕವಾಗಿ ಪ್ರಭಾರಿ ಇ.ಒ ಆಗಿ ನೇಮಿಸಲಾಗಿದೆ. 

ಪ್ರಭಾರಿ ಇ.ಒ ಒಂದೆರಡು ವಾರ ತಾತ್ಕಾಲಿಕವಾಗಿ ಕಾರ್ಯ ನಿರ್ವಹಣೆ ಮಾಡಬಹುದು. ಆದರೆ, ತಿಂಗಳುಗಳ ಕಾಲ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವುದು ಒಂದೆಡೆ ತಾ.ಪಂ. ಆಡಳಿತ ಹಾಗೂ ಮತ್ತೊಂದೆಡೆ ಅಕ್ಷರ ದಾಸೋಹ ನಿರ್ವಹಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ. ತಾಂತ್ರಿಕವಾಗಿ, ಈ ಸ್ಥಾನಕ್ಕೆ ಅವರು ಸೂಕ್ತ ಅಭ್ಯರ್ಥಿ ಆಗಿರುವುದಿಲ್ಲ.

ಇನ್ನು ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕಾಲ್ಮೂರು ತಾಲ್ಲೂಕಿಗೆ ವರ್ಗಾವಣೆಯಾಗಿದ್ದಾರೆ. ಆಗಿನಿಂದ ಇಲಾಖೆಯ ಹರಿಹರ ತಾಲ್ಲೂಕಿನ ಪ್ರಭಾರಿ ಎ.ಡಿ. ಆಗಿ ಚೆನ್ನಗಿರಿಯ ಎ.ಡಿ. ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರು ಹರಿಹರ, ಚನ್ನಗಿರಿ ಜೊತೆಗೆ ದಾವಣಗೆರೆ ತಾಲ್ಲೂಕಿಗೂ ಪ್ರಭಾರಿ ಸಹಾಯಕ ನಿರ್ದೇಶಕರಾಗಿದ್ದಾರೆ. ಒಬ್ಬ ಸಹಾಯಕ ನಿರ್ದೇಶಕರು ಏಕಕಾಲದಲ್ಲಿ ಮೂರು ತಾಲ್ಲೂಕುಗಳ ಜವಾಬ್ದಾರಿ ನಿರ್ವಹಿಸುವುದು ಸುಲಭದ ಮಾತಲ್ಲ. ತಾಲ್ಲೂಕಿನ ಐದು ಪ್ರೀ ಮೆಟ್ರಿಕ್ ಹಾಗೂ ಮೂರು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳು ಈ ಇಲಾಖೆಯ ವ್ಯಾಪ್ತಿಯಲ್ಲಿವೆ. 

ನಿಯಮಿತವಾಗಿ ಹಾಸ್ಟೆಲ್‌ಗಳ ಭೇಟಿ, ವಿದ್ಯಾರ್ಥಿ ವೇತನ, ಅಂತರ್ಜಾತಿ ವಿವಾಹ ಆದವರಿಗೆ ಪ್ರೋತ್ಸಾಹ ಧನ ವಿತರಣೆ, ದೌರ್ಜನ್ಯ ಪ್ರಕರಣಗಳ ವಿಚಾರಣೆ ಸೇರಿದಂತೆ ಹತ್ತಾರು ಮಹತ್ವದ ಕೆಲಸ– ಕಾರ್ಯಗಳ ಜವಾಬ್ದಾರಿ ಈ ಅಧಿಕಾರಿಯದ್ದಾಗಿದೆ. ಆದರೆ, ಹುದ್ದೆ ಖಾಲಿ ಇರುವುದರಿಂದ ಕೆಳಹಂತದ ನೌಕರರಿಗೂ ಗೊಂದಲ ಎದುರಾಗಿದೆ.

ಬೇಗನೇ ಈ ಎರಡೂ ಇಲಾಖೆಗಳ ತಾಲ್ಲೂಕು ಅಧಿಕಾರಿಗಳ ಹುದ್ದೆಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆಗ್ರಹಿಸಿದರು.

ಹರಿಹರದ ಸಮಾಜ ಕಲ್ಯಾಣ ಇಲಾಖೆ ಕಚೇರಿ
ಹರಿಹರದ ಸಮಾಜ ಕಲ್ಯಾಣ ಇಲಾಖೆ ಕಚೇರಿ
ಹರಿಹರದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ನೇಮಕದ ಸಾಧ್ಯತೆ ಇದೆ. 
-ಸುರೇಶ್ ಬಿ.ಇಟ್ನಾಳ್ ಜಿ.ಪಂ. ಸಿಇಒ
ದಾವಣಗೆರೆ ಹಾಗೂ ಹರಿಹರಕ್ಕೆ ಸಹಾಯಕ ನಿರ್ದೇಶಕರ ನೇಮಕಕ್ಕೆ ಜಿ.ಪಂ. ಸಿಇಒ ಮೂಲಕ ಪತ್ರ ರವಾನಿಸಲಾಗಿದೆ. ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
-ನಾಗರಾಜ್ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಕಳೆದ ಏಳೆಂಟು ತಿಂಗಳಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿ ಎಸ್‌ಟಿ ವರ್ಗಗಳ ಕುಂದುಕೊರತೆ ಸಭೆ ನಡೆದಿಲ್ಲ. ತಾಲ್ಲೂಕು ಮಟ್ಟದ ಮುಖ್ಯಸ್ಥರಿಲ್ಲದ ಕಾರಣ ಅಧೀನ ಸಿಬ್ಬಂದಿ ಮೇಲೆ ಪ್ರಭಾರಿ ಅಧಿಕಾರಿಗೆ ಹಿಡಿತ ಇರುವುದಿಲ್ಲ. ಒಂದು ತಿಂಗಳ ಹಿಂದೆ ಇಲಾಖೆ ಸಚಿವರನ್ನು ಭೇಟಿಯಾಗಿ ಕೂಡಲೇ ಎ.ಡಿ. ನೇಮಕಕ್ಕೆ ಮನವಿ ನೀಡಲಾಗಿದೆ.
ಪಿ.ಜೆ.ಮಹಾಂತೇಶ್ ಹರಿಹರ ತಾಲ್ಲೂಕು ಸಂಚಾಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT