ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮತದಾರರನ್ನು ಸೆಳೆಯಲು ‘ಸಾಂಸ್ಕೃತಿಕ ಸಂಜೆ’

ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ l ಜಾಗೃತಿಗೆ ‘ರೀಲ್ಸ್’ ಸ್ಪರ್ಧೆ
Published 15 ಏಪ್ರಿಲ್ 2024, 5:18 IST
Last Updated 15 ಏಪ್ರಿಲ್ 2024, 5:18 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಶೇ 85ಕ್ಕಿಂತ ಅಧಿಕ ಮತದಾನದ ಗುರಿ ಇಟ್ಟುಕೊಂಡಿರುವ ಜಿಲ್ಲಾಡಳಿತ, ಈ ಕುರಿತ ಜಾಗೃತಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಯುವಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ‘ಸಾಂಸ್ಕೃತಿಕ ಸಂಜೆ’ಯ ಜೊತೆಗೆ ‘ರೀಲ್ಸ್ ಸ್ಪರ್ಧೆ’ ಆಯೋಜಿಸಲು ಮುಂದಾಗಿದೆ.

‘ಈಗ ಸಾಮಾಜಿಕ ಮಾಧ್ಯಮ ಪ್ರಬಲವಾಗಿದೆ. ಆ ಮೂಲಕವೇ ಯುವಕರನ್ನು ಮತಗಟ್ಟೆಗಳತ್ತ ಸೆಳೆಯಲು ವಿಭಿನ್ನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೀಲ್ಸ್ ಸ್ಪರ್ಧೆಯ ಮೂಲಕ ಜಾಗೃತಿ ಮೂಡಿಸಲು ಸ್ಪರ್ಧೆ ಆಯೋಜಿಸಲಾಗುವುದು. ಜೊತೆಗೆ ಸಿನಿಮಾ ಹಾಡುಗಳ ಟ್ಯೂನ್‌ಗಳನ್ನು ಬಳಸಿ ಮತದಾನ ಜಾಗೃತಿ ಗೀತೆಗಳ ಕಾರ್ಯಕ್ರಮವನ್ನು ಏ.20ರಂದು ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗುವುದು’ ಎಂದು ಜಿಲ್ಲಾ ಸ್ವೀಪ್ ಅಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಪ್ರಜಾವಾಣಿಗೆ ತಿಳಿಸಿದರು.

‘ಕರಟಕ ದಮನಕ’ ಚಿತ್ರದ ‘ಹಿತ್ತಲಕ್ಕ ಕರೀಬ್ಯಾಡ ಮಾವ’ ಖ್ಯಾತಿಯ ಶೃತಿ ಪ್ರಹ್ಲಾದ್ ಹಾಗೂ ಜಿಲ್ಲಾ ಚುನಾವಣಾ ರಾಯಭಾರಿ ಪೃಥ್ವಿ ಶಾಮನೂರು ಅವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ತಾಲ್ಲೂಕು ಪಂಚಾಯಿತಿ ಅಧಿಕಾರಿ ರವಿಕುಮಾರ್ ಅಥರ್ಗಾ ಸೇರಿದಂತೆ ಅಧಿಕಾರಿಗಳೇ ರಚಿಸಿ ಹಾಡಿರುವ ಮತದಾನ ಜಾಗೃತಿ ಗೀತೆಗಳು ಮತದಾರರನ್ನು ಸೆಳೆಯಲಿವೆ’ ಎಂದು ಹೇಳಿದರು.

‘ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಹಾಟ್ ಏರ್ ಬಲೂನ್ ಸ್ಪರ್ಧೆ ಆಯೋಜಿಸಿದ್ದು, ಯುವಕರನ್ನು ಆಕರ್ಷಿಸಿತ್ತು. ಜೊತೆಗೆ ಪೋಸ್ಟರ್ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗುವುದು. ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರನ್ನು ಆಕರ್ಷಿಸಿಸಲು ಕಾರ್ಯಕ್ರಮ ರೂಪಿಸಲಾಗುವುದು. ಈಗಾಗಲೇ ಸೈಕಲ್, ಬೈಕ್ ರ‍್ಯಾಲಿಗಳು, ವಾಕಥಾನ್‌, ರಂಗೋಲಿ ಸ್ಪರ್ಧೆ, ನರೇಗಾ ಕೂಲಿ ಕಾರ್ಮಿಕರಿಗೂ ಮತದಾನದ ಮಹತ್ವ ತಿಳಿಸಲಾಗಿದೆ. ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರಿಂದ ಜಾಗೃತಿ ಮೂಡಿಸಲಾಗಿದೆ. ಕೈಗಾರಿಕೆಗಳು, ಹೋಟೆಲ್ ಸೇರಿದಂತೆ ವಿವಿಧ ಸಂಘ– ಸಂಸ್ಥೆಗಳ ಮಾಲೀಕರ ಜೊತೆ ಚರ್ಚಿಸಿದ್ದು, ಮತದಾನಕ್ಕೆ ಪ್ರೇರೇಪಿಸಲಾಗಿದೆ. ಚುನಾವಣಾ ಜಾಗೃತಿಗೆ ಪೆಟ್ರೋಲ್ ಬಂಕ್‌ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಹೋರ್ಡಿಂಗ್, ಫಲಕಗಳನ್ನು ಅಳವಡಿಸಲಾಗಿದೆ’ ಎಂದು ಸುರೇಶ್ ಇಟ್ನಾಳ್ ತಿಳಿಸಿದರು.

ನಗರ ಪ್ರದೇಶದ್ದೇ ಸವಾಲು: ‘ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ವಿಶೇಷವಾಗಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರದಲ್ಲಿ ಶೇ 65.71, ದಕ್ಷಿಣ ಶೇ 65.93 ರಷ್ಟು ಮತದಾನವಾಗಿದೆ. ಕೆಲವರು ಬಾಡಿಗೆ ಮನೆ ಬದಲಾವಣೆ ಮಾಡಿದರೂ ಗುರುತಿನ ಪತ್ರದಲ್ಲಿ ವಿಳಾಸ ಬದಲಾಯಿಸಿಕೊಂಡಿರುವುದಿಲ್ಲ. ಉದ್ಯೋಗ ಹಾಗೂ ಶಿಕ್ಷಣಕ್ಕೆ ನಗರ ಪ್ರದೇಶದ ನಿವಾಸಿಗಳು ಬೇರೆ ಕಡೆ ಹೋಗಿರುತ್ತಾರೆ. ಮಳೆಯ ಕಾರಣದಿಂದಲೂ ಕೆಲವರು ಮತದಾನ ಮಾಡಿಲ್ಲ ಎಂಬ ಅಂಶಗಳು ಗೊತ್ತಾಗಿದ್ದು, ಸಂಜೆಯವರೆಗೂ ಕಾಯದೇ ಎಲ್ಲರೂ ಬೇಳಿಗ್ಗೆಯೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಮತದಾರರ ಚೀಟಿಯಲ್ಲಿ ಕ್ಯೂ ಆರ್ ಕೋಡ್ ನಮೂದಿಸಲಾಗಿದೆ. ಇದು ಮತಗಟ್ಟೆ ಸ್ಥಳ, ಮತಗಟ್ಟೆ ಸಂಖ್ಯೆಯನ್ನು ತಿಳಿಸುತ್ತದೆ. ಪ್ರತಿ ಮನೆಗೂ ಈ ಚೀಟಿಯನ್ನು ವಿತರಿಸಲಾಗುವುದು. ಹಿಂದಿನ ಚುನಾವಣೆಗಳಲ್ಲಿ ನಗರದಲ್ಲಿ 43 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಆ ಮತಗಟ್ಟೆಗಳನ್ನೇ ಗುರಿಯಾಗಿರಿಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಮತಚೀಟಿ, ಮಾರ್ಗದರ್ಶಿ, ಸಂಕಲ್ಪ ಪತ್ರವನ್ನು ಎಲ್ಲ ಮತದಾರರಿಗೂ ತಲುಪಿಸುವ ಕೆಲಸ ಮಾಡಲಾಗುತ್ತದೆ. ಇದಕ್ಕಾಗಿ ಎಲ್ಲಾ ಬಿಎಲ್‍ಒಗಳ ಜೊತೆಗೆ ಪಾಲಿಕೆ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT