ಕಲಿಕೆಗೆ ಒತ್ತು: ಡಯಟ್‌ಗೆ ‘ಹೈಟೆಕ್‌’ ಸ್ಪರ್ಶ

7
ಮೇಲ್ದರ್ಜೆಗೇರಿದ ಗಣಿತ, ವಿಜ್ಞಾನ, ಭಾಷಾ ಕಲಿಕಾ ಕೇಂದ್ರ

ಕಲಿಕೆಗೆ ಒತ್ತು: ಡಯಟ್‌ಗೆ ‘ಹೈಟೆಕ್‌’ ಸ್ಪರ್ಶ

Published:
Updated:
ದಾವಣಗೆರೆಯ ಡಯಟ್‌ನ ಗಣಿತ ಪ್ರಯೋಗಾಲಯದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಸಿದ್ಧಪಡಿಸಿರುವ ಗಣಿತ ಮಾದರಿ ಬಗ್ಗೆ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜು ಮಾಹಿತಿ ನೀಡಿದರು

ದಾವಣಗೆರೆ: ಶಿಕ್ಷಕರ ಬೋಧನಾ ಮಟ್ಟವನ್ನು ಹೆಚ್ಚಿಸಲು ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಗಣಿತ, ವಿಜ್ಞಾನ, ಭಾಷೆ ಹಾಗೂ ಸಮಾಜ ವಿಜ್ಞಾನ ಕಲಿಕಾ ಕೊಠಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಸಂಸ್ಥೆಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ.

ಜಿಲ್ಲೆಯ ಸಾವಿರಾರು ಶಾಲೆಗಳ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳ ಕಲಿಕೆಗೆ ಪೂರಕವಾಗುವ ಮತ್ತು ಬೋಧನೆಗೆ ಸಹಾಯಕವಾಗುವ ಬೋಧನೋಪಕರಣಗಳು ಒಂದೇ ಸೂರಿನಡಿ ದೊರೆಯುವಂತೆ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ರಾಜ್ಯಕ್ಕೇ ಇದು ಮಾದರಿ ಡಯಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ  ಉಪ ನಿರ್ದೇಶಕರೂ (ಅಭಿವೃದ್ಧಿ) ಡಯಟ್‌ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜು ಮಂಗಳವಾರ ಸಂಸ್ಥೆಯ ಅಭಿವೃದ್ಧಿ ಚಟುವಟಿಕೆಗಳನ್ನು ಸುದ್ದಿಗಾರರ ಎದುರು ಅನಾವಣಗೊಳಿಸಿದರು.  ‘ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ಹಾಗೂ ಶಾಲೆಯ ವಾತಾವರಣವು ಗುಣಮಟ್ಟದಿಂದ ಕೂಡಿರದೇ ಇರುವುದು ಕಂಡು ಬಂತು. ಇದನ್ನು ನೀಡಲು ಸಂಸ್ಥೆ ಸಜ್ಜಾಗಿರಲಿಲ್ಲ. ಹೀಗಾಗಿ ಸಂಸ್ಥೆಯನ್ನು ಉತ್ಕೃಷ್ಟ ಹಾಗೂ ಉತ್ತಮ ಸಂಪನ್ಮೂಲ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಮುಂದಾಗಿದ್ದೇವೆ’ ಎಂದು ತಿಳಿಸಿದರು.

‘ಇಲಾಖೆಯಿಂದ ಅಂದಾಜು  ₹ 35 ಲಕ್ಷ ಅನುದಾನದಿಂದ ಎಲ್‌.ಸಿ.ಡಿ. ಪ್ರಾಜೆಕ್ಟರ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಪೀಠೋಪಕರಣ, ವಿಡಿಯೊ ಕಾನ್ಫರೆನ್ಸ್‌ ಸೇರಿ ಮೂಲಸೌಲಭ್ಯ ಕಲ್ಪಿಸಿದ್ದೇವೆ. ಉಪನ್ಯಾಸಕರು ಅಂದಾಜು ₹ 2 ಲಕ್ಷ ದೇಣಿಗೆ ಸಂಗ್ರಹಿಸಿ ಕಲಿಕೆಗೆ ಬೇಕಾಗಿದ್ದ ಉಪಕರಣಗಳನ್ನು ತಯಾರಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಗಣಿತ, ವಿಜ್ಞಾನ, ಭಾಷೆ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ಪ್ರತ್ಯೇಕವಾದ ಕೊಠಡಿಗಳನ್ನು ನಿಗದಿ ಗೊಳಿಸಲಾಗಿದ್ದು, ಆ ವಿಷಯಗಳಿಗೆ ಬೇಕಾದ ಬೋಧನೋಪಕರಣಗಳಿವೆ. ಗಣಿತ ಕಾರ್ನರ್‌ನಲ್ಲಿ ಅಂಕಗಣಿತ, ಬೀಜಗಣಿತ, ರೇಖಾಗಣಿತದ ಪ್ರಮೇಯಗಳ ಕಲಿಕಾ ಮಾದರಿಗಳಿವೆ. ಭಾಷೆ ಹಾಗೂ ಸಮಾಜ ವಿಜ್ಞಾನ ಕಾರ್ನರ್‌ನಲ್ಲಿ ಇಂಗ್ಲಿಷ್‌ ವ್ಯಾಕರಣ, ಭೂಪಟಗಳು, ದೇಶದ ಸಮಗ್ರ ಇತಿಹಾಸವನ್ನು ಹೇಳುವ ಬೃಹತ್‌ ಕಾಲಮಾನ ನಕ್ಷೆಯು ಗಮನ ಸೆಳೆಯುತ್ತವೆ. ವಿಜ್ಞಾನ ಕಾರ್ನರ್‌ನಲ್ಲಿ ಸುಸಜ್ಜಿತ ಪ್ರಯೋಗಾಲ ನಿರ್ಮಿಸಲಾಗಿದ್ದು, ಇದುವರೆಗಿನ ಪರಾವಲಂಬನೆಯಿಂದ ಮುಕ್ತಿ ಸಿಕ್ಕಿದೆ. ಚಾವಣಿಯಲ್ಲಿ ನಿರ್ಮಿಸಿರುವ ಬಾಹ್ಯಾಕಾಶ ಮಾದರಿ ಗಮನ ಸೆಳೆಯುತ್ತಿದೆ. ಹೈಟೆಕ್‌ ಗ್ರಂಥಾಲಯವನ್ನೂ ನಿರ್ಮಿಸಲಾಗಿದೆ. ತರಬೇತಿ ಪಡೆಯಲು ಬರುವವರಿಗೆ ಕೇಂದ್ರದಲ್ಲೇ ರಾತ್ರಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 131 ಕ್ಲಸ್ಟರ್‌ಗಳಿವೆ. ಮುಂಬರುವ ದಿನಗಳಲ್ಲಿ ಕನಿಷ್ಠ 100 ಕ್ಲಸ್ಟರ್‌ಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ನಂತರ ಶಾಲೆಗಳನ್ನೂ ಕಲಿಕಾ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗುವುದು ಎಂದು ಲಿಂಗರಾಜು ತಿಳಿಸಿದರು.  ಡಯಟ್‌ನ ಉಪ ಪ್ರಾಂಶುಪಾಲ ಮಲ್ಲಿಕಾರ್ಜುನ, ಹಿರಿಯ ಉಪನ್ಯಾಸಕರಾದ ರುದ್ರಮುನಿ, ರಾಜಶೇಖರ್‌, ಅಯೂಬ್‌, ಗೋವಿಂದಪ್ಪ, ಯುವರಾಜ ನಾಯಕ ಇದ್ದರು.

ಅಧಿಕಾರಿಗಳಿಂದ ಶಾಲೆ ದತ್ತು

ಗುಣಾತ್ಮಕ ಅಭಿವೃದ್ಧಿ ದೃಷ್ಟಿಯಿಂದ ಡಯಟ್‌ ಸಂಸ್ಥೆಯು ಕಳೆದ ಸಾಲಿನಿಂದ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಯೋಜನೆ ರೂಪಿಸಿದೆ. ಇದುವರೆಗೆ ಒಟ್ಟು ₹ 63.49 ಲಕ್ಷ ದೇಣಿಗೆ ಸಂಗ್ರಹಿಸಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ ಎಂದು ಲಿಂಗರಾಜ್‌ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಒಟ್ಟು 280 ಮೇಲ್ವಿಚಾರಣಾ ಅಧಿಕಾರಿಗಳಿಗೆ ತಲಾ ನಲ್ಕು ಶಾಲೆಗಳನ್ನು ದತ್ತು ನೀಡಲಾಗಿದೆ. ಆ ಶಾಲೆಗಳಿಗೆ ಬೇಕಾದ ಶುದ್ಧ ಕುಡಿಯುವ ನೀರು, ಶೌಚಾಲಯ, ರ‍್ಯಾಂಪ್‌, ಕಟ್ಟಡ ದುರಸ್ತಿ, ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ಕಂಪ್ಯೂಟರ್‌, ಬೋಧನೋಪಕರಣಗಳನ್ನು ಒದಗಿಸಲು ವಸ್ತು ಅಥವಾ ನಗದು ರೂಪದಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

2017–18ನೇ ಸಾಲಿನಲ್ಲಿ ಏಳು ವಲಯಗಳಿಂದ  ₹ 48.15 ಲಕ್ಷ ದೇಣಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ ಜೂನ್‌ ಅಂತ್ಯದವರೆಗೆ ₹ 15.34 ಲಕ್ಷ ದೇಣಿಗೆ ಸಂಗ್ರಹಿಸಲಾಗಿದೆ. ದೇಣಿಗೆ ಪಡೆದ ಹಣದಿಂದ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಲಿಂಗರಾಜ್‌ ಹೆಮ್ಮೆಯಿಂದ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !