ಬುಧವಾರ, ಮಾರ್ಚ್ 3, 2021
19 °C
ಜಿಂದಾಲ್, ನೈಸ್‌ ಕಂಪನಿಗಳಿಗೆ ಭೂಮಿ ನೀಡಿರುವುದಕ್ಕೆ ರೈತ ಸಂಘ ವಿರೋಧ

ರಾಜ್ಯ ಸರ್ಕಾರದಿಂದ ಹಗಲು ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಜಿಂದಾಲ್‌ಗೆ ಭೂಮಿ ನೀಡಲು ನಿಮಗೆ ಅಧಿಕಾರ ಕೊಟ್ಟವರಾರು, ಕೂಡಲೇ ಅದನ್ನು ವಾಪಸ್ ಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ದಾವಣಗೆರೆಯ ಎಪಿಎಂಸಿ ಹಾಲ್‌ನಲ್ಲಿ ಬುಧವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಅವರು ಒತ್ತಾಯಿಸಿದರು.

‘₹ 1.22 ಲಕ್ಷಕ್ಕೆ ಭೂಮಿಯನ್ನು ಕೊಂಡುಕೊಂಡು ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಬೇಕಾದರೆ ಭೂಮಿಯನ್ನು ಲೀಸ್‌ಗೆ ಕೊಡಲಿ ಅದು ಬಿಟ್ಟು ಮಾರಾಟ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಜಿಂದಾಲ್‌ನವರು ಪೆಟ್ರೊ ಕೆಮಿಕಲ್‌ ಕೈಗಾರಿಕೆ ನಡೆಸುತ್ತಿದ್ದು, ಅಲ್ಲಿರುವ 12 ಸಾವಿರ ಕೆಲಸಗಾರರಲ್ಲಿ 1 ಸಾವಿರ ಮಂದಿಯೂ ಕರ್ನಾಟಕದವರು ಇಲ್ಲ. ಸರೋಜಿನಿ ಮಹಿಷಿ ವರದಿ ಏನಾಯಿತು. ಕಾಂಗ್ರೆಸ್‌ ಸತ್ತು ಹೋಯ್ತಾ. ಜೆಡಿಎಸ್‌ ನಿರ್ನಾಮವಾಯಿತಾ?’ ಎಂದು ಟೀಕಿಸಿದರು.

‘ಯಡಿಯೂರಪ್ಪ ಸರ್ಕಾರವಿದ್ದಾಗ ನೈಸ್ ಕಂಪನಿಗೆ ಭೂಮಿ ಕೊಡಲು ಹೊರಟಿದ್ದಾಗ ಎಚ್‌.ಡಿ.ದೇವೇಗೌಡರು ಹೋರಾಟ ಮಾಡಿದ್ದರು. ಇಂದು ಅವರ ಮಗನೇ ಮುಖ್ಯಮಂತ್ರಿಯಾಗಿದ್ದಾರೆ. ರಸ್ತೆ ಮಾಡಲು ನೈಸ್‌ ಕಂಪನಿಗೆ ಭೂಮಿ ಕೊಟ್ಟರೆ ರೈತರ ವಿರೋಧವಿಲ್ಲ. ಬದಲಾಗಿ ಟೌನ್‌ಶಿಪ್‌ ನಿರ್ಮಿಸುವ ಮೂಲಕ ರಿಯಲ್‌ ಎಸ್ಟೇಟ್‌ ಮಾಡಲು ಹೊರಟಿದ್ದಾರೆ. ಇದು ಹಗಲು ದರೋಡೆ, ಭೂಗಳ್ಳತನಕ್ಕೆ ನಿಮ್ಮ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ’ ಎಂದು ಟೀಕಿಸಿದರು.

‘ಚಳವಳಿ ಪರಿಣಾಮಕಾರಿಯಾಗಿ ರೂಪಿಸಲು ಸರ್ಕಾರ ಯತ್ನಿಸಬೇಕು. ರಾಷ್ಟ್ರಪತಿಗೆ ಪತ್ರ ಬರೆದರೆ ಪರಿಣಾಮವಾಗುವುದಿಲ್ಲ. ಜಿಲ್ಲಾಧಿಕಾರಿ ಮೂಲಕ ಕಳುಹಿಸಿದರೆ ಅದು ತಲುಪುವುದು ಗ್ಯಾರಂಟಿ ಇಲ್ಲ. ಆದ್ದರಿಂದ ಹೋರಾಟ ಗಂಭೀರ ಸ್ವರೂಪ ಪಡೆಯಬೇಕಾದರೆ ಪಾದಯಾತ್ರೆ ಇಲ್ಲವೇ ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.

‘ಬರಗಾಲದ ಸಮಯದಲ್ಲಿ ಚುನಾವಣೆ ನಡೆದಿದ್ದು, ಈ ಸಮಯದಲ್ಲಿ ಯಾರೂ ಜವಾಬ್ದಾರಿ ಹೊರಲಿಲ್ಲ. ಇದರಲ್ಲಿ ಆಗಿರುವ ನಷ್ಟವನ್ನು ಸರ್ಕಾರವೇ ಹೊರಬೇಕು. ಅಷ್ಟೋ ಇಷ್ಟೋ ಪರಿಹಾರ ನೀಡುವ ಮೂಲಕ ರೈತರ ತುಟಿಗೆ ತುಪ್ಪ ಹಚ್ಚುವ ಕಾರ್ಯಕ್ರಮದಲ್ಲಿ ಬರಗಾಲ ದಾಟಿಸುತ್ತಿದೆ. 12ರಿಂದ 26ರವರೆಗೆ ಅಧಿವೇಶನ ನಡೆಯಲಿದ್ದು, ಇದು ಬಹುಮತದ ಸರ್ಕಾರವಲ್ಲದ್ದರಿಂದ ಯಾವಾಗಲಾದರೂ ಬೀಳಬಹುದು. ಆದ್ದರಿಂದ ಚಳವಳಿ ಮೂಲಕವೇ ಇದಕ್ಕೆ ಉತ್ತರ ನೀಡಬೇಕು’ ಎಂದರು.

ಸಂಘದ ಕಾರ್ಯದರ್ಶಿ ಎಚ್.ಆರ್‌.ಬಸವರಾಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ, ಜಡಿಯಪ್ಪ ದೇಸಾಯಿ, ಕುರುವ ಗಣೇಶ್‌, ಮಹೇಶ್ ತರೀಕೆರೆ, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ ಇದ್ದರು.

ಸಂಘದ ರಾಜ್ಯಾಧ್ಯಕ್ಷರಾಗಿ ಕೋಡಿಹಳ್ಳಿ ಮರು ಆಯ್ಕೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತು. ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು