ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಸದಸ್ಯತ್ವ ರದ್ದು

7
ಜನತಾ ಬಜಾರ್‌ನಲ್ಲಿ ನಡೆದ ಅವ್ಯವಹಾರ ಪ್ರಕರಣ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಸದಸ್ಯತ್ವ ರದ್ದು

Published:
Updated:
Deccan Herald

ದಾವಣಗೆರೆ: ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಜನತಾ ಬಜಾರ್‌ ಅಧ್ಯಕ್ಷ ಬಿ.ವಿ. ಚಂದ್ರಶೇಖರ್‌ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.

ಚಂದ್ರಶೇಖರ್‌ ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಹಾಗೂ ಇನ್ನಿತರ ಯಾವುದೇ ಸಹಕಾರ ಸಂಘ/ ಬ್ಯಾಂಕಿನ ಸಮಿತಿ ಸದಸ್ಯರಾಗದಂತೆ ಅನರ್ಹಗೊಳಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ. ನರಸಿಂಹಮೂರ್ತಿ ಆದೇಶ ಹೊರಡಿಸಿದ್ದಾರೆ.

ಜನತಾ ಬಜಾರ್‌ ಅಧ್ಯಕ್ಷರಾಗಿದ್ದಾಗ ಚಂದ್ರಶೇಖರ್‌ ಅವರು 2009ರ ಏಪ್ರಿಲ್‌ನಲ್ಲಿ 86.36 ಕ್ವಿಂಟಲ್‌ ಅಕ್ಕಿಯನ್ನು ಇಲಾಖೆಯಿಂದ ಎತ್ತುವಳಿ ಮಾಡಿ ಎಲ್ಲಾ ಕಾರ್ಡ್‌ದಾರರಿಗೆ ವಿತರಣೆ ಮಾಡಲಾಗಿದೆ ಎಂದು ಸುಳ್ಳು ವರದಿ ಮಾಡಿದ್ದರು. ಆದರೆ, 2009 ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಶಾಲೆಗಳಿಗೆ ರಜೆ ಇತ್ತು. ಹೀಗಿದ್ದರೂ ಪಡಿತರ ಅಕ್ಕಿಯನ್ನು ಎತ್ತುವಳಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಈ ಬಗ್ಗೆ 2013ರಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ ಎಂದು ದಾಖಲೆ ಸಮೇತ ಶಾಮನೂರಿನ ಎಚ್‌. ಮೃತ್ಯುಂಜಯ ದೂರು ನೀಡಿದ್ದರು.

ಜನತಾ ಬಜಾರ್‌ನಲ್ಲಿರುವ ಮದ್ಯದ ಅಂಗಡಿಯನ್ನು ತಮ್ಮ ಸಂಬಂಧಿಗೆ ಬಾಡಿಗೆ ನೀಡಿದ್ದಾರೆ ಎಂಬ ಆರೋಪವೂ ಅಧ್ಯಕ್ಷರ ಮೇಲಿತ್ತು.

ಜನತಾ ಬಜಾರ್‌ನ ಪ್ರಧಾನ ವ್ಯವಸ್ಥಾಪಕರೂ ಆಗಿರುವ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ದಕ್ಷಿಣಮೂರ್ತಿ ಅವರು, ‘ನ್ಯಾಯಾಲಯದ ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಅದನ್ನು ತರಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಡಿಸಿಸಿ ಬ್ಯಾಂಕ್‌ನ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಸಹಕಾರ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಆಗಸ್ಟ್‌ 5ರಂದು ರಾತ್ರಿ ಜನತಾ ಬಜಾರ್‌ ಕಚೇರಿಯಲ್ಲಿ ಅಧ್ಯಕ್ಷರು ಗುಂಡು ಪಾರ್ಟಿ ನಡೆಸಿದ್ದೂ ಚರ್ಚೆಯಾಗಿತ್ತು. ಇದೀಗ ನ್ಯಾಯಾಲಯದ ಆದೇಶದಿಂದ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನವನ್ನೂ ಚಂದ್ರಶೇಖರ್‌ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !