ಶನಿವಾರ, ಜೂನ್ 25, 2022
24 °C
‘ಧಾತು ಮೊಬೈಲ್‌ ಆ್ಯಪ್‌’ ಲೋಕಾರ್ಪಣೆ ಮಾಡಿದ ಸಾಣೇಹಳ್ಳಿ ಸ್ವಾಮೀಜಿ

ಸಂಸ್ಕೃತಿ, ಸಾವಯವ ಒಟ್ಟಿಗೆ ಸಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಾಗರಿಕತೆ ಬಂದಾಗ ಸಂಸ್ಕೃತಿಯೂ ಹಿಂದೆ ಸರಿಯಿತು. ಸಾವಯವವೂ ಹಿಂದಕ್ಕೆ ಹೋಯಿತು. ರಸಗೊಬ್ಬರ ಬಳಸಿ ಕೃಷಿ ಮಾಡುವುದು ಅಸ್ತಿತ್ವಕ್ಕೆ ಬಂತು. ಈಗ ಮತ್ತೆ ಅರಿವು ಮೂಡಿದೆ. ನಮ್ಮ ಸಂಸ್ಕೃತಿ ಮತ್ತು ಸಾವಯವ ಕೃಷಿ ಒಟ್ಟಿಗೆ ಹೋಗಬೇಕಾಗಿದೆ ಎಂಬುದು ಕೃಷಿಕರಿಗೆ ಅರ್ಥವಾಗಿದೆ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಂಗಳೂರು ಯಲಹಂಕದ ಮೈಕ್ರೋಜಿ ಫೌಂಡೇಶನ್‌ ಹಾಗೂ ಶಿವನಾರದಮುನಿ ಕೃಷಿ ಮಾಹಿತಿ ಮತ್ತು ಪರಿಕರ ಮಾರಾಟ ಕೇಂದ್ರವು ಶನಿವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ಧಾತು ಮೊಬೈಲ್‌ ಆ್ಯಪ್‌’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಾವಯವ ಕೃಷಿಯಲ್ಲಿಯೂ ರಾಸಾಯನಿಕ ಗೊಬ್ಬರವನ್ನು ಕೆಲವರು ಬಳಸುತ್ತಿದ್ದಾರೆ. ಈ ರೀತಿ ಬಳಸುವುದಿದ್ದರೆ ಅದು ಊಟಕ್ಕೆ ಇರುವ ಉಪ್ಪು ಅಥವಾ ಉಪ್ಪಿನಕಾಯಿ ತರಹ ಇರಬೇಕು. ಅದುವೇ ಪ್ರಮುಖ ಆಗಬಾರದು. ಸಾವಯವ ಕೃಷಿಯಿಂದ ಜಗತ್ತಿನ ಆರೋಗ್ಯವಲ್ಲ, ನಮ್ಮ ಆರೋಗ್ಯ ಸುಧಾರಣೆಯಾಗುತ್ತದೆ’ ಎಂದು ವಿಶ್ಲೇಷಿಸಿದರು.

ಸಾವಯವ ಕೃಷಿ ಮಾಡಿ 6 ಗುಂಟೆಯಲ್ಲಿ ₹ 1.5 ಲಕ್ಷ ಆದಾಯ ತೆಗೆಯುವ ರೈತರು ಇಲ್ಲಿದ್ದಾರೆ. ಕೃಷಿಯಲ್ಲಿ ಆದಾಯ ಬರಬೇಕಿದ್ದರೆ ರಾಸಾಯನಿಕ ಕೃಷಿಯೇ ಆಗಬೇಕು ಎಂಬ ತಪ್ಪು ಕಲ್ಪನೆ ಇರುವವರಿಗೆ ಇದು ಪಾಠ. ಸಾವಯವ ಕೃಷಿಯಿಂದಲೂ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು
ವಿವರಿಸಿದರು.

‘ಯುವಜನರು ತಂತ್ರಜ್ಞಾನದ ಜತೆಗೆ ವೇಗವಾಗಿ ಓಡುತ್ತಿದ್ದಾರೆ. ಅವರು ನಮ್ಮ ಉಪದೇಶಗಳಿಗೆ ಕಿವಿಗೊಡುವುದಿಲ್ಲ. ಅವರ ಮೊಬೈಲ್‌ನಲ್ಲಿ ಇಂಥ ಆ್ಯಪ್‌ ಇನ್‌ಸ್ಟಾಲ್‌ ಮಾಡಿದರೆ ಬೇಗ ತಿಳಿದುಕೊಳ್ಳುತ್ತಾರೆ’ ಎಂದು ಹೇಳಿದರು.

‘ರೈತಚಕ್ಷು’ ಪ್ರಶಸ್ತಿ ಸ್ವೀಕರಿಸಿದ ಮೈಕ್ರೋಜಿ ಫೌಂಡೇಶನ್‌ ಅಧ್ಯಕ್ಷ ಡಾ. ಕೆ.ಆರ್‌. ಹುಲ್ಲುನಾಚೇಗೌಡ ಮಾತನಾಡಿ, ‘ಡಿಜಿಟಲೀಕರಣದಲ್ಲಿ ಭಾರತ ಮುಂದಿದೆ. ಆದರೆ ರೈತರಿಗಾಗಿ ಯಾವುದೇ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ. ಕೆಲವು ಆ್ಯಪ್‌ಗಳನ್ನು ಅಭಿವೃದ್ಧಿ ಮಾಡಲಾಗಿದ್ದರೂ ಅದು ಅವರ ಮಾರಾಟದ ಅನುಕೂಲಕ್ಕಾಗಿಯೇ ಹೊರತು ರೈತರಿಗಾಗಿ ಅಲ್ಲ. ಅದಕ್ಕಾಗಿ ರೈತರಿಗಾಗಿಯೇ ‘ಧಾತು ಮೊಬೈಲ್‌ ಆ್ಯಪ್‌’ ಅಭಿವೃದ್ಧಿ ಪಡಿಸಲಾಗಿದೆ’ ಎಂದು ವಿವರಿಸಿದರು.

‘ಡಿಜಿಟಲ್‌ ಮಾರ್ಕೆಟ್‌ನಲ್ಲಿ ಉತ್ಪನ್ನ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು ರೈತರೇ ಆಗಿರುತ್ತಾರೆ. ತಾವು ಬೆಳೆದಿರುವುದನ್ನು ಮಾರಾಟ ಮಾಡುತ್ತಾರೆ. ತಮ್ಮ ಮನೆಗೆ ಬೇಕಾದುದನ್ನು ಖರೀದಿ ಮಾಡುತ್ತಾರೆ. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೂ ಮಾರಾಟ ಮಾಡುವ ಮಾಡುವ ವ್ಯವಸ್ಥೆ ಈ ಆ್ಯಪ್‌ ಮೂಲಕ ಆಗಲಿದೆ. ಮಣ್ಣಿನ ಪರೀಕ್ಷೆಯನ್ನೂ ಇದರಲ್ಲಿ ಮಾಡಲು ಸಾಧ್ಯ’ ಎಂದು ವಿವರಿಸಿದರು.

ಉಪಕೃಷಿ ನಿರ್ದೇಶಕ ಡಾ. ಆರ್‌. ತಿಪ್ಪೇಸ್ವಾಮಿ, ಮೈಕ್ರೋಜಿ ಫೌಂಡೇಶನ್ ಖಜಾಂಚಿ ಶ್ರೀನಿವಾಸ್‌ ರೈತ, ರವಿ ಯೋಗರಾಜ್‌, ನಾಗರಾಜಪ್ಪ, ಅವರೂ ಇದ್ದರು. ಯಶಸ್ವಿ ಕೃಷಿ ಸಾಧಕರಿಗೆ ಸಾವಯವ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವನಾಥ ಬಿ.ಸಿ. ಸ್ವಾಗತಿಸಿದರು. ವೀಣಾ ಮಹಾಂತೇಶ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.