ಬುಧವಾರ, ಡಿಸೆಂಬರ್ 2, 2020
24 °C

ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ಗಳ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಜಿಲ್ಲೆಯಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್‌ಸೆಂಟರ್‌ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸದ್ಯ ಯಾವುದೇ ಕೊರೊನಾ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸಬೇಕು.  ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ಇಲಾಖಾ ಸಿಬ್ಬಂದಿಯನ್ನು  ಮಾತೃ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದರು.

ಮುಂದಿನ ಚಳಿಗಾಲದ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸುಳಿವಿದೆ. ತಕ್ಷಣಕ್ಕೆ ಕೈಗೊಳ್ಳಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಅಗತ್ಯ ಬಿದ್ದರೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಮತ್ತೆ ಆರಂಭಿಸಲಾಗುವುದು ಎಂದರು.

ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂಗಳು ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಬೇಕು ಎಂದು ತಿಳಿಸಿದರು.

ಇ-ಸಂಜೀವಿನಿಗೆ ಒತ್ತು :- ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಇ-ಸಂಜೀವಿನಿ ಆ್ಯಪ್ ಬಳಸುವ ಮೂಲಕ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ತೆರಳಬೇಕಾದ ಪ್ರಕರಣ ಹೊರತುಪಡಿಸಿ ಸಣ್ಣ ಪುಟ್ಟ ರೋಗಗಳಿಗೆ ವಿಡಿಯೊ ಕಾಲ್ ಮೂಲಕ ಇ-ಪ್ರಿಸ್ಕ್ರಿಪ್ಶನ್ ಪಡೆಯಬಹುದು ಇದನ್ನೇ ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದರು.

ಈಗಾಗಲೇ ಇ-ಸಂಜೀವಿನಿಯಡಿ 282 ಜನ ಪ್ರಯೋಜನ ಪಡೆದಿದ್ದಾರೆ. 150 ಜನರ ಕನ್ಸಲ್ಟೇಷನ್ ಆಗಿದೆ.
ಆಂಡ್ರಾಯ್ಡ್ ಮೊಬೈಲ್ ಫೋನ್ ಇಲ್ಲದವರು ಸಮೀಪದ ಎ.ಎನ್.ಎಂಗಳನ್ನು ಸಂಪರ್ಕಿಸಿದರೆ ಅವರು ನೆರವು ನೀಡುತ್ತಾರೆ ಎಂದು ಡಿಎಲ್‌ಒ ಡಾ.ಮುರುಳೀಧರ್ ಮಾಹಿತಿ ನೀಡಿದರು.

ಆತ್ಮನಿರ್ಭರ ಯೋಜನೆ ಚುರುಕುಗೊಳಿಸಿ: ಪ್ರಧಾನಮಂತ್ರಿಯವರ ಮಹಾತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರ ಯೋಜನೆಯಡಿ ಹೆಚ್ಚು ಹೆಚ್ಚು ಜನರಿಗೆ ಬ್ಯಾಂಕ್ ಮುಖಾಂತರ ಸಾಲಸೌಲಭ್ಯ ನೀಡಬೇಕು. ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಆರಂಭಿಸಿರುವ ಯೋಜನೆ ಜಿಲ್ಲೆಯಲ್ಲಿ ಹೆಚ್ಚು ಜನರನ್ನು ತಲುಪುತ್ತಿಲ್ಲ. ಬ್ಯಾಂಕ್ ಮ್ಯಾನೇಜರ್‌ಗಳು ಸಹಕರಿಸುತ್ತಿಲ್ಲ ಎಂದು ಕೆಲವು ಅಧಿಕಾರಿಗಳು ತಿಳಿಸಿದರು.

ಬ್ಯಾಂಕ್ ಮ್ಯಾನೇಜರ್‌ಗಳಿಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಂದ ಮಾಗದರ್ಶನ ಕೊಡಿಸಬೇಕು. ಅಸಡ್ಡೆತನ ತೋರುವ ಮ್ಯಾನೇಜರ್‌ಗಳ ವಿರುದ್ಧ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದರು.

ಎಡಿಸಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಎಚ್‌ಓ ನಾಗರಾಜು, ಡಿಎಸ್‌ಓ ಡಾ.ರಾಘವನ್, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ ಜಿ. ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.