ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣ್ಣೆದೋಸೆ ನಗರಿಯಲ್ಲಿ ಕನ್ನಡ ನುಡಿ ಜಾತ್ರೆ

30, 31ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 22 ಜನವರಿ 2019, 14:16 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ತನ್ನ ಕಚೇರಿ ಇರುವ ಕುವೆಂಪು ಕನ್ನಡ ಭವನದಲ್ಲೇ ‘ಕನ್ನಡ ನುಡಿ ಜಾತ್ರೆ’ಯನ್ನು ನಡೆಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾಹಿತಿ ಡಾ. ಲೋಕೇಶ್‌ ಅಗಸನಕಟ್ಟೆ ಸಮ್ಮೇಳನಾಧ್ಯಕ್ಷತೆಯಲ್ಲಿ ಜನವರಿ 30 ಹಾಗೂ 31ರಂದು ನಡೆಯುವ ಜಿಲ್ಲಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ.

30ರಂದು ಬೆಳಿಗ್ಗೆ 8.30ಕ್ಕೆ ನಗರದ ಪ್ರಥಮ ಪ್ರಜೆ ಮೇಯರ್‌ ಶೋಭಾ ಪಲ್ಲಾಗಟ್ಟೆ ಅವರಿಂದ ರಾಷ್ಟ್ರ ಧ್ವಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಅವರಿಂದ ಪರಿಷತ್ತಿನ ಧ್ವಜಾರೋಹಣ ನೆರವೇರುವುದರೊಂದಿಗೆ ಎರಡು ದಿನಗಳ ನುಡಿ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.

ಉದ್ಘಾಟನೆ: ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಸ್‌.ಎ. ರವೀಂದ್ರನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಶ್ರೀನಿವಾಸ್‌ ಅವರು ಡಾ. ಜಿ.ಎಸ್‌. ಶಿವರುದ್ರಪ್ಪ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.

ಗೋಷ್ಠಿ ವೈವಿಧ್ಯ:

ಮಧ್ಯಾಹ್ನ 2 ಗಂಟೆಗೆ ‘ದಾವಣಗೆರೆ ಜಿಲ್ಲೆಯ ಅನನ್ಯತೆ’ ವಿಷಯದ ಮೇಲೆ ಮೊದಲನೇ ಗೋಷ್ಠಿ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆ ವಹಿಸಲಿರುವ ಡಾ. ಎಂ.ಜಿ. ಈಶ್ವರಪ್ಪ ಅವರು ‘ಶೈಕ್ಷಣಿಕ ಅನನ್ಯತೆ’ ಕುರಿತು ಅಭಿಪ್ರಾಯ ಮಂಡಿಸಲಿದ್ದಾರೆ. ಮಲ್ಲಿಕಾರ್ಜುನ ಕಡಕೋಳ ಅವರು ‘ಸಾಂಸ್ಕೃತಿಕ ಅನನ್ಯತೆ’, ಡಾ. ಎಚ್‌.ವಿ. ವಾಮದೇವಪ್ಪ ಅವರು ‘ಅಭಿವೃದ್ಧಿಯ ಅನನ್ಯತೆ’ ಕುರಿತು ವಿಚಾರ–ಮಿನಿಮಯ ಮಾಡಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ‘ಕನ್ನಡ ಸಾಹಿತ್ಯ: ಸಾಮರಸ್ಯದ ನೆಲೆಗಳು’ ವಿಷಯದ ಮೇಲೆ ಎರಡನೇ ಗೋಷ್ಠಿ ನಿಗದಿಯಾಗಿದೆ. ಅಧ್ಯಕ್ಷತೆ ವಹಿಸಲಿರುವ ಡಾ. ದಾದಾಪೀರ್‌ ನವಿಲೇಹಾಳ್‌ ಅವರು ‘ನವೋದಯ ಸಾಹಿತ್ಯದ ಗ್ರಹಿಕೆಗಳು’ ಕುರಿತು ವಿಷಯ ಮಂಡಿಸಲಿದ್ದಾರೆ. ಡಾ. ಎ.ಬಿ. ರಾಮಚಂದ್ರಪ್ಪ ಅವರು ‘ಪ್ರಗತಿಶೀಲ, ದಲಿತ ಬಂಡಾಯದ ನಿಲುವುಗಳು’ ಕುರಿತು ಹಾಗೂ ಡಾ. ನಾರಾಯಣ ಸ್ವಾಮಿ, ‘ಹೊಸ ತಲೆಮಾರಿನ ಸಾಹಿತ್ಯಿಕ ಆಶಯಗಳು’ ಕುರಿತು ಮಾತನಾಡಲಿದ್ದಾರೆ.

ಸಂಜೆ 5ರಿಂದ ನಿವೃತ್ತ ಪ್ರಾಂಶುಪಾಲರಾದ ಗಿರಿಜಾ ಕಾಡಯ್ಯಮಠ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎರಡನೇ ದಿನದ ಸಾಹಿತ್ಯ ರಸದೌತಣ:

ಎರಡನೇ ದಿನವಾದ ಜ. 31ರಂದು ಬೆಳಿಗ್ಗೆ 9.30ಕ್ಕೆ ಬಿ.ಎನ್‌. ಮಲ್ಲೇಶ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಆಶಯ ನುಡಿಗಳನ್ನಾಡಲಿದ್ದಾರೆ. 21 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ‘ಮಹಿಳೆ: ಸೃಜನಶೀಲತೆಯ ಸಾಧ್ಯತೆಗಳು’ ಗೋಷ್ಠಿ ನಡೆಲಿದೆ. ಅಧ್ಯಕ್ಷತೆ ವಹಿಸಲಿರುವ ಸುಶೀಲಾದೇವಿ ರಾವ್‌, ‘ಸಾಂಸ್ಕೃತಿಕ ಸಾಧ್ಯತೆ’ ಕುರಿತು ವಿಷಯ ಮಂಡಿಸಲಿದ್ದಾರೆ. ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಲಲ್‌, ‘ಆಡಳಿತಾತ್ಮಕ ಸಾಧ್ಯತೆ’ ಕುರಿತು ಹಾಗೂ ಎನ್‌.ಟಿ. ಮಂಜುನಾಥ್‌, ‘ಸ್ತ್ರೀ ಸಶಕ್ತೀಕರಣ ಮತ್ತು ಕಾನೂನುಗಳು’ ಮಾತನಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ಡಾ. ಶ್ರೀಕಂಠ ಕೂಡಗಿ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಭೌಗೋಳಿಕ ವಿಂಗಡಣೆಯ ಹಿಂದಿನ ಸವಾಲುಗಳು’ ಸಂವಾದ ನಡೆಯಲಿದೆ. ಡಾ. ಟಿ.ಆರ್‌. ಚಂದ್ರಶೇಖರ್‌ ವಿಷಯ ಮಂಡಿಸಲಿದ್ದಾರೆ. ಸಂಜೆ 4ಕ್ಕೆ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಕುಂ. ವೀರಭದ್ರಪ್ಪ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಕಲಾ ತಂಡಗಳೊಂದಿಗೆ ಮೆರವಣಿಗೆ

ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ 30ರಂದು ಬೆಳಿಗ್ಗೆ 9ಕ್ಕೆ ಆರಂಭಗೊಳ್ಳಲಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಕಾಲೇಜಿನ ಆವರಣದಿಂದ ಬಾಪೂಜಿ ದಂತ ವಿಜ್ಞಾನ ಕಾಲೇಜು ರಸ್ತೆ ಮೂಲಕ ಕುವೆಂಪು ಕನ್ನಡ ಭವನವನ್ನು ಮೆರವಣಿಗೆ ತಲುಪಲಿದೆ. ಡೊಳ್ಳು ಕುಣಿತ, ಹಲಗು ವೇಷ, ಬೊಂಬೆ ಮೇಳ ಸೇರಿದಂತೆ ಹಲವು ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.

ಚಿತ್ರಕಲಾ ಪ್ರದರ್ಶನ

ಸಮ್ಮೇಳನದ ಅಂಗವಾಗಿ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಸವಿತಾ ಕಲ್ಲೇಶ್‌ ಉದ್ಘಾಟಿಸಲಿದ್ದಾರೆ.

ಕಲಾವಿದರಾದ ಎ. ಮಹಾಲಿಂಗಪ್ಪ, ಚಂದ್ರಶೇಖರ ಸಂಗಾ, ವೈ. ಕುಮಾರ್‌, ಡಾ. ಸಂತೋಷ್‌ ಕುಮಾರ್‌ ಕುಲಕರ್ಣಿ, ಅತೀಕ್‌, ಎನ್‌.ಟಿ. ರಾಘವೇಂದ್ರ ನಾಯಕ, ಕೆ.ಎಸ್‌. ಶಶಿಕುಮಾರ್‌, ಬಿ. ಅಚ್ಯುತಾನಂದ, ಮೌನೇಶ್‌ ಪತ್ತಾರ್‌ ಹಾಗೂ ಶಾಂತಯ್ಯ ಕರಡೀಮಠ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT