ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಜಿಲ್ಲಾಸ್ಪತ್ರೆಯ ಲ್ಯಾಬ್‌ ವಾರದಲ್ಲಿ ಆರಂಭ

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ವಿಶ್ವಾಸ
Last Updated 26 ಮೇ 2020, 17:16 IST
ಅಕ್ಷರ ಗಾತ್ರ

ದಾವಣಗೆರೆ: ಲ್ಯಾಬ್ ಮಾಡಿಕೊಡುವವರು ಕೆಲಸದ ಒತ್ತಡದ ನೆಪ ಹೇಳಿದ್ದರಿಂದ ತಡವಾಗಿತ್ತು. ಜೆಜೆಎಂ ಮೆಡಿಕಲ್‌ ಕಾಲೇಜಿನಲ್ಲಿ ಲ್ಯಾಬ್‌ ಮಾಡಿದವರೇ ಜಿಲ್ಲಾ ಆಸ್ಪತ್ರೆಯಲ್ಲಿಯೂ ನಿರ್ಮಿಸಲು ಒಪ್ಪಿದ್ದಾರೆ. ಒಂದು ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣ ಬಗ್ಗೆ ಸಭೆ ನಡೆಸಿ, ದೂಡಾ, ಪಾಲಿಕೆ, ಸ್ಮಾರ್ಟ್‌ಸಿಟಿಗೆ ಸಂಬಂಧಿಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಕೊಂಡಿ ತುಂಡಾಗಿದೆ. ಇನ್ನು ಹೆಚ್ಚು ಹರಡಲ್ಲ. ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ನಿಯಂತ್ರಣ ಸಭೆ: ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಸಮಯದಲ್ಲಿ ಜವಾಬ್ದಾರಿ ಹೆಚ್ಚಿದೆ. ಅಧಿಕಾರಿಗಳು ವಿಶೇಷವಾಗಿ ಜಾಗೃತರಾಗುವ ಮೂಲಕ ಹೆಚ್ಚು ಕೆಲಸ ಮಾಡಬೇಕು ಎಂದು ಸಚಿವ ಬೈರತಿ ಬಸವರಾಜ ಸೂಚಿಸಿದರು.

ಜಿಲ್ಲೆಯಲ್ಲಿ 14 ಮಂದಿ ಇನ್ಸಿಡೆಂಟ್ ಕಮಾಂಡರ್‌ಗಳನ್ನು ಕಂಟೈನ್‌ಮೆಂಟ್ ವಲಯಗಳಲ್ಲಿ ನೇಮಕ ಮಾಡಲಾಗಿದೆ. ಕಮಾಂಡರ್‌ಗಳು ಹೆಚ್ಚು ಆಸಕ್ತಿ ವಹಿಸಬೇಕು. ಸರ್ಕಾರದ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಬೇಕು. ರ‍್ಯಾಂಡಮ್ ಆಗಿ ಪ್ರತಿಯೊಬ್ಬರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಬೇಕು. ಆ ಮೂಲಕ ಹೆಚ್ಚಿನ ರೀತಿಯಲ್ಲಿ ಅನಾಹುತ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಹಾರಾಷ್ಟ್ರ, ಗುಜರಾತ್, ತಮಿಳನಾಡು, ಕೇರಳ ಇನ್ನಿತರ ರಾಜ್ಯಗಳಿಂದ ಜಿಲ್ಲೆಗೆ ಬರುವವರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕಡ್ಡಾಯವಾಗಿ ಕ್ವಾರಂಟೈನ್‌ಲ್ಲಿ ಇರಿಸಬೇಕು. ಹೊರ ರಾಜ್ಯದಿಂದ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಹಾಗಾಗಿ ಎಚ್ಚರದಿಂದ ನಿರ್ವಹಿಸಬೇಕು ಎಂದು ಹೇಳಿದರು.

ಜಾಲಿನಗರ ಹಾಗೂ ಇಮಾಮ್ ನಗರದಲ್ಲಿ ಅಧಿಕ ಪ್ರಕರಣ ಕಂಡುಬಂದಿವೆ. ನಮ್ಮಲ್ಲಿ 250 ಐಸೊಲೇಷನ್ ಬೆಡ್ ವಾರ್ಡ್ ಹಾಗೂ 50 ಐಸಿಯು ಬೆಡ್ ವಾರ್ಡ್ ತಯಾರು ಮಾಡಿಕೊಳ್ಳಲಾಗಿದೆ. ಜೊತೆಗೆ ಹೊರ ರಾಜ್ಯಗಳಿಂದ ಬಂದ 259ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಿವಿಧ ಮಾಹಿತಿ ನೀಡಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಸಿಇಓ ಪದ್ಮಾ ಬಸವಂತಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ ಇದ್ದರು.

ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಹೊಸ ಟೆಸ್ಟಿಂಗ್ ಲ್ಯಾಬ್
ಜೆ.ಜೆಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್‌–19 ಪರೀಕ್ಷಾ ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜಮಂಗಳವಾರ ಉದ್ಘಾಟಿಸಿದರು.

ಪ್ರತಿದಿನ ನೂರು ಮಾದರಿಗಳ ಪರೀಕ್ಷೆ ಈ ಲ್ಯಾಬ್‌ನಲ್ಲಿ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜೆ.ಜೆ.ಎಂ ಮಹಾವಿದ್ಯಾಲಯದ ಅಧ್ಯಕ್ಷರಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮುರುಗೇಶ್, ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಉಪಸ್ಥಿತರಿದ್ದರು.

‘ಅಭಿವೃದ್ಧಿ ಕಾಮಗಾರಿಗಳ ವಿಳಂಬ ಬೇಡ’
ಪ್ರಾಧಿಕಾರದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ರಿಂಗ್ ರಸ್ತೆ ಸೇರಿದಂತೆ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಬೇಕು. ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು. ನಿವೇಶನ ಹಂಚಿಕೆ ಕಾರ್ಯಗಳನ್ನು ಬೇಗ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿ ಬೈರತಿ ಬಸವರಾಜ ತಿಳಿಸಿದರು.

ದೂಡಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ನಿವೇಶನಕ್ಕಾಗಿ ಅರ್ಜಿ ಹಾಕಿ ಎಂಟು ವರ್ಷಗಳು ಕಳೆದಿವೆ. ಹಣ ಪಾವತಿಸಿದವರಲ್ಲಿ ಯಾರಿಗೆ ನಿವೇಶನ ಇಲ್ಲವೋ ಅವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಅವರು ಕಟ್ಟಿರುವ ಹಣಕ್ಕೆ ಬಡ್ಡಿ ಸೇರಿಸಿ ವಾಪಾಸ್ಸು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.

ಅಭಿವೃದ್ಧಿ ಪಡಿಸಿದ ಮತ್ತು ಅಭಿವೃದ್ಧಿ ಪಡಿಸಬೇಕಾದ ವರ್ತುಲ ರಸ್ತೆಯ ಕಾಮಗಾರಿ ಕುರಿತು ಪರ್ಯಾಯ ಮಾರ್ಗ ಅನುಸರಿಸುವುದು ಒಳ್ಳೆಯದು ಎಂದು ಮೇಯರ್ ಬಿ.ಜಿ.ಅಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾತನಾಡಿ, ದಾವಣಗೆರೆ-ಹರಿಹರ ನಗರ ಸ್ಥಳೀಯ ಯೋಜನಾ ಪ್ರದೇಶವು ದಾವಣಗೆರೆ ಮತ್ತು ಹರಿಹರ ನಗರ, 40 ಹಳ್ಳಿಗಳು ಸೇರಿ 250.07 ಚದರ ಕಿಲೋಮೀಟರ್‌ ಇದೆ. ₹ 37 ಕೋಟಿ ವೆಚ್ಚದಲ್ಲಿ ಪಿ.ಬಿ ರಸ್ತೆಯಿಂದ ಎಸ್‌ಪಿ ಕಚೇರಿವರೆಗೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಬಣ್ಣ ಹಚ್ಚುವ ಕಾರ್ಯ ಬಾಕಿ ಇದೆ ಎಂದು ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.

₹ 11 ಕೋಟಿ ವೆಚ್ಚದಲ್ಲಿ 6 ಕೆರೆಗಳ ಅಭಿವೃದ್ಧಿ, ನವೀಕರಣ ಕೈಗೊಳ್ಳಲಾಗಿದೆ. ಟಿವಿ ಸ್ಟೇಷನ್ ಕೆರೆಯನ್ನು ₹ 2ಕೋಟಿ ಮತ್ತು ಆವರೆಗೆರೆ ಕೆರೆಯನ್ನು ₹ 18 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಪ್ರಾಧಿಕಾರಕ್ಕೆ ಒಟ್ಟು ಮಂಜೂರಾದ ಕಾಯಂ ಹುದ್ದೆಗಳ ಸಂಖ್ಯೆ 38 ಇದ್ದು, ಅದರಲ್ಲಿ 20 ಹುದ್ದೆಗಳಿ ಖಾಲಿ ಇವೆ ಎಂದು ತಿಳಿಸಿದರು.

‘ಸ್ಮಾರ್ಟ್ ಸಿಟಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ’
ದಾವಣಗೆರೆ ಸ್ಮಾಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕು. ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವರಿ ಸಚಿವ ಬಸವರಾಜ ಬೈರತಿ ಸೂಚಿಸಿದರು.

ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿ, ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಇಲ್ಲ. ಈ ಬಗ್ಗೆ ದೂರುಗಳಿವೆ. ಸರ್ಕಾರ ನಿಮಗೆ ಎಲ್ಲ ಸೌಲಭ್ಯ ನೀಡುತ್ತಿದೆ. ಆದರೂ ಅಧಿಕಾರಿಗಳು ಬೇಜಾವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಕಾಮಗಾರಿ ಕಳಪೆ ಆದರೆ ಜಿಲ್ಲೆ ಸ್ಮಾರ್ಟ್ ಸಿಟಿ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.

ಮುಂದಿನ ಬಾರಿ ನಾನು ಸಭೆ ನಡೆಸುವುದಿಲ್ಲ. ಬದಲಾಗಿ ನೇರವಾಗಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ. ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಗುತ್ತಿಗೆದಾರರ ಸಭೆ ನಡೆಸುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಕಾಮಗಾರಿಗಳು ತುಂಬಾ ನಿಧಾನವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೊರೊನಾ ನೆಪ ಬೇಡ ಎಂದು ಎಚ್ಚರಿಸಿದರು.

ಗುತ್ತಿಗೆ ಪಡೆದವರು ಉಪ ಗುತ್ತಿಗೆ ನೀಡುತ್ತಿರುವುದೇ ಕಾಮಗಾರಿ ಕಳಪೆಯಾಗಲು ಕಾರಣ ಎಂದು ಮೇಯರ್ ಅಜಯ ಕುಮಾರ್ ತಿಳಿಸಿದರು.

ಕಳಪೆ ಕಾಮಗಾರಿ ಮಾಡುವುದು ಅವರು. ಕೆಟ್ಟ ಹೆಸರು ಬರುವುದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 16 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕೆ ₹ 29.44 ಕೋಟಿ ಅಂದಾಜು ಹಣ ಇಡಲಾಗಿದೆ. ₹ 23.05 ವೆಚ್ಚ ಮಾಡಲಾಗಿದೆ. ಇನ್ನುಳಿದಂತೆ 49 ಕಾಮಗಾರಿಗಳು ಪ್ರಗತಿಯಲ್ಲಿವೆ. ಟೆಂಡರ್ ಅಡಿಯಲ್ಲಿ 11 ಕಾಮಗಾರಿ ಹಾಗೂ ಡಿಪಿಆರ್ ಹಂತದಲ್ಲಿ 7 ಕಾಮಗಾರಿಗಳಿವೆ ಎಂದು ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT