ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜೆ, ಬೈಕ್ ರ‍್ಯಾಲಿ ನಿಷೇಧಕ್ಕೆ ಚಿಂತನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿಕೆ
Last Updated 3 ನವೆಂಬರ್ 2019, 9:58 IST
ಅಕ್ಷರ ಗಾತ್ರ

ದಾವಣಗೆರೆ: ಶಬ್ದಮಾಲಿನ್ಯ ಹಾಗೂ ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಡಿಜೆ (ಡಿಸ್ಕ್ ಜಾಕಿ) ಹಾಗೂ ಬೈಕ್‌ ರ‍್ಯಾಲಿಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಈದ್ ಮಿಲಾದ್ ಅಂಗವಾಗಿ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಾಯುಮಾಲಿನ್ಯದಿಂದಾಗಿ ದೇಶದ ರಾಜಧಾನಿ ನವದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆಗೆ ಇಂತಹ ಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜದ ಮುಖಂಡರ ಸಭೆ ಕರೆದು ಎಲ್ಲರಿಗೂ ಮನವರಿಕೆ ಮಾಡೋಣ. ಈ ಕುರಿತ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸೋಣ’ ಎಂದು ಹೇಳಿದಾಗ ಎಲ್ಲಾ ಮುಖಂಡರು ಇದಕ್ಕೆ ಒಪ್ಪಿಗೆ ಸೂಚಿಸಿದರು.

‘ದಾವಣಗೆರೆಯಲ್ಲಿ ಡಿಜೆ, ಬೈಕ್ ರ‍್ಯಾಲಿ, ಫ್ಲೆಕ್ಸ್, ಪ್ಲಾಸ್ಟಿಕ್ ಹಾಗೂ ಮದ್ಯ ಇವುಗಳನ್ನು ನಿಯಂತ್ರಿಸುವುದು ತಲೆ ನೋವಾಗಿದೆ. ಪ್ರತಿ ಹಬ್ಬದಲ್ಲೂ ಇವುಗಳ ಹಾವಳಿ ಜಾಸ್ತಿಯಾಗಿದೆ. ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಬೈಕ್ ರ‍್ಯಾಲಿಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ವಾಯುಮಾಲಿನ್ಯ, ಟ್ರಾಫಿಕ್ ಸಮಸ್ಯೆ, ಆಸ್ಪತ್ರೆಯ ರೋಗಿಗಳಿಗೆ, ರಸ್ತೆ ಬಳಕೆದಾರರಿಗೆ ತೊಂದರೆಯಾಗುತ್ತದೆ. ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸುವುದು ಬೇಡ’ ಎಂದರು.

‘ಸಂಸದರು, ಶಾಸಕರು ಹಾಗೂ ಕಾರ್ಪೊರೇಟರ್‌ಗಳನ್ನು ಕರೆಸಿ ಏನು ಬೇಕು, ಏನು ಮಾಡಬೇಕು ಎಂಬುದನ್ನು ಸಾರ್ವಜನಿಕರು, ಹಿರಿಯರು ಹಾಗೂ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಎಂದು ಮುಖಂಡರು ಸಲಹೆ ನೀಡಿದಾಗ, ಎಲ್ಲರ ಗಮನಕ್ಕೆ ತಂದು ಯಾವ ರೀತಿ ನಿಷೇಧ ಮಾಡಬೇಕು ಎಂಬುದನ್ನು ಚಿಂತನೆ ಮಾಡೋಣ. ನಗರಕ್ಕೆ ಬೈಕ್‌ ರ‍್ಯಾಲಿ, ಡಿಜೆ ಬೇಡ ಎಂದು ಎಲ್ಲರೂ ನಿರ್ಧರಿಸಿದರೆ. ಈ ಜಿಲ್ಲೆಯಿಂದ ಕೆಟ್ಟ ಪದ್ಧತಿಯನ್ನು ತೊಲಗಿಸಲು ಚಿಂತನೆ ಮಾಡೋಣ. ಬೈಕ್‌ ರ‍್ಯಾಲಿಯಿಂದ ಏನು ಸಾಧನೆಯಾಗುವುದಿಲ್ಲ ಎಂಬುದನ್ನು ಮುಖಂಡರು ಯುವಕರಿಗೆ ತಿಳಿಹೇಳಬೇಕು’ ಎಂದು ಹೇಳಿದರು.

ಬೀಡಾಡಿ ದನಗಳ ಕಾರ್ಯಾಚರಣೆ: ಬೀಡಾಡಿ ದನಗಳು, ಹಂದಿಗಳು ನಿಯಂತ್ರಣಕ್ಕೆ ನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆಗಳು ಒಟ್ಟಿಗೆ ಸೇರಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ತಂದು ಮೂರು ದಿವಸ ನಿರಂತರ ಕಾರ್ಯಾಚರಣೆ ನಡೆಸುತ್ತೇವೆ ಎಂದರು.

ಕೆಟಿಜೆ ನಗರ, ವಿನೋಬನಗರದಲ್ಲಿ ಮೆರವಣಿಗೆಗೆ 40ರಿಂದ 50 ಸಾವಿರ ಜನರು ಸೇರಲಿದ್ದು, ಪೊಲೀಸ್ ಇಲಾಖೆಯಿಂದ ತಯಾರಿ ಮಾಡಿಕೊಂಡಿದ್ದೇವೆ. ತೋಪುಗಳನ್ನು ಬಳಸಬಾರದು. ಇದರಿಂದ ವಿದ್ಯುತ್ ಲೈನ್‌ಗಳಿಗೆ ಬೆಂಕಿ ತಗುಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಎಎಸ್‌ಪಿ ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯದಶಮಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಬಿ.ಶಂಕರನಾರಾಯಣ, ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಅಮಾನುಲ್ಲಾಖಾನ್, ಶಬ್ಬೀರ್ ಅಹಮದ್ ಇದ್ದರು.

ಗ್ರಾಮಾಂತರ ಡಿವೈಎಸ್‌ಪಿ ಮಂಜುನಾಥ್ ಗಂಗಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT