ಸೋಮವಾರ, ಮಾರ್ಚ್ 8, 2021
18 °C
ಎಸ್‌ಎಸ್‌ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಸಂಶೋಧನಾ ಕೇಂದ್ರದ ಘಟಿಕೋತ್ಸವ

‘ವೈದ್ಯರು ಸಮಾಜದ ಆರೋಗ್ಯದ ಎಂಜಿನಿಯರ್‌ಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಿವಿಲ್‌ ಎಂಜಿನಿಯರ್‌, ಎಲೆಕ್ಟ್ರಿಕಲ್‌ ಎಂಜಿನಿಯರ್‌, ಮೆಕ್ಯಾನಿಕಲ್‌ ಎಂಜಿನಿಯರ್‌ಗಳು ತಮ್ಮ ತಮ್ಮ ಕ್ಷೇತ್ರಗಳನ್ನು ನಿರ್ವಹಣೆ ಮಾಡುವವರಾದರೆ, ವೈದ್ಯರು ಸಮಾಜದ ಆರೋಗ್ಯವನ್ನು ನಿರ್ವಹಣೆ ಮಾಡುವ, ಮಾನಸಿಕ ಆರೋಗ್ಯ ನಿರ್ಹಹಣೆ ಮಾಡುವ ಎಂಜಿನಿಯರ್‌ಗಳು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದರು.

ಎಸ್‌ಎಸ್‌ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಸಂಶೋಧನಾ ಕೇಂದ್ರದ 10ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ಕೊರೊನಾ ಕಾಲವು ಎಲ್ಲರಿಗೂ ಪಾಠ ಕಲಿಸಿತು. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪಾಠವಾಯಿತು. ಜನಜೀವನದ ಮೇಲೆ ಮಾತ್ರ ಪರಿಣಾಮ ಬೀರಿದ್ದಲ್ಲ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಪರಿಣಾಮವನ್ನುಂಟು ಮಾಡಿತು. ಇನ್ನಷ್ಟು ತಂತ್ರಜ್ಞಾನದ ಅಭಿವೃದ್ಧಿ ಆಗಬೇಕಾದ ಬಗ್ಗೆ, ಮೆಡಿಕಲ್‌ ತಂತ್ರಜ್ಞಾನದ ಬಗ್ಗೆ ಹೆಚ್ಚು ಚರ್ಚೆಗಳಾದವು. ರೊಬೊಟಿಕ್ಸ್, ಸಾಫ್ಟ್‌ವೇರ್ ಅಭಿವೃದ್ಧಿ, ಐಒಟಿ ಅಗತ್ಯಗಳ ಬಗ್ಗೆ ಮಾತುಗಳು ಕೇಳಿಬಂದವು. ದೈನಂದಿನ ಚಟುವಟಿಕೆಗಳಲ್ಲಿ ಕಂಪ್ಯೂಟರ್ ಬಳಕೆ, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್ ಬಳಕೆ, ಕ್ಲೌಡ್ ಕಂಪ್ಯೂಟರಿಂಗ್ ಮುಂತಾದವುಗಳ ಅಗತ್ಯದ ಬಗ್ಗೆ ಜಾಗೃತಿ ಉಂಟಾಯಿತು ಎಂದು ಹೇಳಿದರು.

‘ಪಾರದರ್ಶಕವಾಗಿ, ನಿಖರವಾಗಿ, ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುವುದರ ಜತೆಗೆ ಜ್ಞಾನವರ್ಧನೆಗೂ ಪ್ರಾಮುಖ್ಯ ನೀಡಿದರೆ ಸಮಾಜ ಸೇವೆಯ ಅತ್ಯುತ್ತಮ ವೈದ್ಯರಾಗಿ ಹೊರಹೊಮ್ಮುತ್ತೀರಿ. ಅದಕ್ಕಾಗಿ ಅಂತರ್‌ಶಿಸ್ತೀಯ ಶಿಕ್ಷಣ ಪಡೆಯಬೇಕು. ಕಲಿಕೆ ಎನ್ನುವುದು ಜೀವನದುದ್ದಕ್ಕೂ ಇರಬೇಕು’ ಎಂದು ಕಿವಿಮಾತು ಹೇಳಿದರು.

ಮಾಹಿತಿಗಳನ್ನು ಪೆನ್ನು ಮತ್ತು ಕಾಗದ ಬಳಸಿ ಕಡತ ಮಾಡುವಲ್ಲಿಂದ ಕಂಪ್ಯೂಟರ್‌ನಲ್ಲಿ ಡಾಟಾ ಸಂಗ್ರಹದತ್ತ ತೆರಳುವುದು ಅನಿವಾರ್ಯ. ಇದನ್ನು ಎಲೆಕ್ಟ್ರಾನಿಕ್‌ ಹೆಲ್ತ್‌ಡಾಟಾ ಅಥವಾ ಎಲೆಕ್ಟ್ರಾನಿಕ್‌ ಹೆಲ್ತ್‌ ರೆಕಾರ್ಡ್‌ ಎಂದು ಕರೆಯಲಾಗುತ್ತದೆ. ಇದರಿಂದ ಭೌತಿಕವಾಗಿ ಸ್ಥಳಾವಕಾಶ ಕಡಿಮೆ ಸಾಕಾಗುತ್ತದೆ. ಅಧಿಕೃತ ಮಾಹಿತಿ ಸಿಗುತ್ತದೆ. ಯಾವುದೇ ಮಾಹಿತಿ ಯಾವುದೇ ಸ್ಥಳದಲ್ಲಿ ಪಡೆಯಲು ಸಾಧ್ಯ. ವಿದೇಶಗಳಲ್ಲಿಯೂ ಕುಳಿತು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ಐದೂವರೆ ವರ್ಷ ಕಲಿತು ವೈದ್ಯರಾಗುತ್ತಿರುವುದು ಹೆತ್ತವರಿಗೆ ಸಂತೋಷವನ್ನು ತಂದಿದೆ. ಇಷ್ಟಕ್ಕೆ ನಿಲ್ಲಿಸಿದರೆ ಸಾಲದು. ಸ್ನಾತಕೋತ್ತರ ಪದವಿ ಪಡೆದು, ತಜ್ಞ ವೈದ್ಯರಾಗಿ ಹೊರಹೊಮ್ಮಿದರೆ ನಿಮ್ಮನ್ನು ಉದ್ಯೋಗ ಹುಡುಕಿಕೊಂಡು ಬರಲಿದೆ’ ಎಂದು ಹೇಳಿದರು.

‘ನಾನು ಚಿಕ್ಕವನಿರುವಾಗ ಎರಡೇ ವೈದ್ಯರು ದಾವಣಗೆರೆಯಲ್ಲಿದ್ದರು. ಅಲ್ಲದೇ ಎರಡೇ ಕಾರುಗಳು ಕೂಡಾ ಇದ್ದವು. ಈಗ ಕಾರುಗಳು ಮನೆಮನೆಗೆ ಇವೆ. ವೈದ್ಯರೂ ನೂರಾರು ಮಂದಿ ಇದ್ದಾರೆ. ಅದಕ್ಕೆ ನಮ್ಮ ಬಾಪೂಜಿ ವಿದ್ಯಾಸಂಸ್ಥೆ ಕಾರಣ’ ಎಂದು ನೆನಪಿಸಿಕೊಂಡರು.

ಎಸ್‌ಎಸ್‌ಐಎಂಎಸ್‌ ಮತ್ತು ಆರ್‌ಸಿ ಪ್ರಿನ್ಸಿಪಾಲ್‌ ಡಾ.ಬಿ.ಎಸ್‌. ಪ್ರಸಾದ್‌, ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಎನ್‌.ಕೆ. ಕಾಳಪ್ಪನವರ್‌, ಉಪ್ರ ಪ್ರಿನ್ಸಿಪಾಲ್‌ ಡಾ. ಅರುಣ್‌ಕುಮಾರ್‌ ಉಪಸ್ಥಿತರಿದ್ದರು. ಡಾ.ಸುನೀತಾ ಕಳಸೂರಮಠ ಮತ್ತು ಡಾ. ಆಶಾ ಬುಳ್ಳಪ್ಪ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು