ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರ್ಯಾಗನ್‌ ಫ್ರೂಟ್‌ ಲಾಭದಾಯಕ: ಮಾರುಕಟ್ಟೆಯೇ ಆಶಾದಾಯಕ

ಚನ್ನಗಿರಿ ತಾಲ್ಲೂಕಿನ ಉಬ್ರಾಣಿಯ ರೈತ ಹಿದಾಯತ್‌ ಸಾಹಸ
Last Updated 15 ಜೂನ್ 2022, 7:02 IST
ಅಕ್ಷರ ಗಾತ್ರ

ಚನ್ನಗಿರಿ: ‘ಕಷ್ಟಪಟ್ಟರೆ ಸುಖವುಂಟು ಎಂದುಕೊಂಡೇ ಪ್ರಯೋಗಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂಬುದನ್ನು ಸಾಬೀತುಪಡಿಸಿದ್ದಾರೆ ಡ್ರ್ಯಾಗನ್ ಫ್ರೂಟ್ ಬೆಳೆದ ರೈತ ಹಿದಾಯತ್‌.

ಉಬ್ರಾಣಿ ಗ್ರಾಮದ ನಿವಾಸಿ ಹಿದಾಯತ್ ಅವರದು ಕೃಷಿ ಕಾಯಕ. 6 ಎಕರೆಯಲ್ಲಿ ಅಡಿಕೆ ಬೆಳೆದಿರುವ ಇವರು, 5 ಎಕರೆ ಮಾವಿನ ತೋಟ ಹೊಂದಿದ್ದಾರೆ. ಹೊಸ ಸಾಹಸಕ್ಕೆ ಕೈಹಾಕಬೇಕೆಂದು ನಿರ್ಧರಿಸಿ, ಎರಡೂವರೆ ವರ್ಷಗಳ ಹಿಂದೆ ಮಹಾರಾಷ್ಟ್ರ ಹಾಗೂ ಬಾಗಲಕೋಟೆಯಿಂದ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ಖಾಲಿ ಇದ್ದ 2 ಎಕರೆ 10 ಗುಂಟೆ ಜಮೀನಿನಲ್ಲಿ ನಾಟಿ ಮಾಡಿದ್ದರು. ಈಗ ಬೆಳೆ ಫಲ ನೀಡುತ್ತಿದೆ.

ಪ್ರತಿ ಸಸಿಗೆ ₹ 35ರಂತೆ ಕೊಟ್ಟು ಖರೀದಿಸಿ, 4,500 ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ನಾಟಿ ಮಾಡಿದ್ದ ಇವರು, ಸುದೀರ್ಘ ಅವಧಿಯ ಬೆಳೆಗಾಗಿ ₹ 13.50 ಲಕ್ಷ ವ್ಯಯಿಸಿದ್ದಾರೆ. 15 ದಿನಗಳಿಂದ ಫಲ ಆರಂಭವಾಗಿದ್ದು, ಇದುವರೆಗೆ 5 ಟನ್ ಇಳುವರಿ ಬಂದಿದೆ. ಪ್ರತಿ ಕೆ.ಜಿ. ಡ್ರ್ಯಾಗನ್‌ ಫ್ರೂಟ್‌ ಅನ್ನು ₹ 120ಕ್ಕೆ ಮಾರಾಟ ಮಾಡುತ್ತಿದ್ದು, ಈಗಾಗಲೇ ₹ 5.50 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಫಲ ಆರಂಭವಾದ ನಂತರದ ನಾಲ್ಕು ತಿಂಗಳುಗಳ ಕಾಲ ಹಣ್ಣು ಲಭಿಸುವುದರಿಂದ ಇನ್ನೂ 6ರಿಂದ 7 ಟನ್ ಇಳುವರಿಯ ನೀರಿಕ್ಷೆ ಹೊಂದಿದ್ದಾರೆ.

‘ಡ್ರ್ಯಾಗನ್‌ ಫ್ರೂಟ್ ಬೆಳೆಗೆ ಸಾಮಾನ್ಯವಾಗಿ ಯಾವುದೇ ರೋಗಬಾಧೆ ಉಂಟಾಗುವುದಿಲ್ಲ. ಆದರೆ, ಬಿಸಿಲಿನ ತಾಪ ಹೆಚ್ಚಾದರೆ ‘ಸನ್ ಬರ್ನ್ ’ ಆಗುವ ಅಪಾಯ ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಅಪಾಯ ಇಲ್ಲ. ಸಾಕಷ್ಟು ನೀರು ಲಭ್ಯವಿದೆ ಎಂದು ಎಷ್ಟು ಬೇಕಾದರೂ ಹರಿಸುವಂತಿಲ್ಲ. ಪ್ರತಿ ಸಸಿಗೆ ವಾರಕ್ಕೆ 4ರಿಂದ 5 ಲೀಟರ್ ನೀರನ್ನು ಮಾತ್ರ ನೀಡಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಕಾಲ ಕಾಲಕ್ಕೆ ಸಲಹೆ, ಸೂಚನೆ ಪಡೆದು ಬೆಳೆ ಬೆಳೆದಿದ್ದೇನೆ’ ಎನ್ನುತ್ತಾರೆ ರೈತ ಹಿದಾಯತ್‌.

‘ಹೊಸದು ಹಾಗೂ ಅಪರೂಪದ್ದಾದ ಈ ಹಣ್ಣಿಗೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ರೈತರಿಗಿರುವ ಪ್ರಮುಖ ಸಮಸ್ಯೆ. ಪ್ರಸ್ತುತ ಮಹಾರಾಷ್ಟ್ರ, ಪುಣೆ, ಮುಂಬೈ, ಬೆಂಗಳೂರು ಹಾಗೂ ಮಂಗಳೂರು ಮಾರುಕಟ್ಟೆಗಳಿಗೆ ಹಣ್ಣನ್ನು ಕಳುಹಿಸುತ್ತಿದ್ದೇನೆ. ಸಾರಿಗೆ ವೆಚ್ಚ ಅಧಿಕವಾಗುತ್ತಿದ್ದು, ಆದಾಯದ ಪ್ರಮಾಣ ಕಡಿಮೆಯಾಗುತ್ತಿದೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಇದ್ದರೆ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು. ತೋಟಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಶಿವಮೊಗ್ಗ ಮತ್ತು ದಾವಣಗೆರೆಗಳಲ್ಲಿ ಈ ಹಣ್ಣಿನ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿದರೆ, ಹೆಚ್ಚಿನ ಸಂಖ್ಯೆಯ ರೈತರು ಈ ಬೆಳೆ ಬೆಳೆಯಲು ಮುಂದಾಗಬಹುದು’ ಎಂಬ ಆಶಯ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT