ದಾವಣಗೆರೆ: ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ವಿನೋಬನಗರದ ಚೌಡೇಶ್ವರಿ ಜಾತ್ರೆ ಪ್ರಯುಕ್ತ ಭಕ್ತರು ಮನೆಗಳಲ್ಲಿ ಚಿಕನ್ ಹಾಗೂ ಮಟನ್ ಅಡುಗೆ ತಯಾರಿಸಿದ್ದು, ಬುಧವಾರ ನಗರದ ಎಲ್ಲೆಡೆ ಬಾಡೂಟದ ಘಮ ಹಬ್ಬಿತ್ತು.
ಚಿಕನ್, ಮಟನ್ ಜೊತೆಗೆ ಕೆಲವರ ಮನೆಗಳಲ್ಲಿ ಖಡಕ್ ರೊಟ್ಟಿ, ಚಪಾತಿ ತಯಾರಿಸಿದ್ದರೆ, ಇನ್ನೂ ಕೆಲವರ ಮನೆಗಳಲ್ಲಿ ಮುದ್ದೆ ಮಾಡಲಾಗಿತ್ತು. ಫುಲಾವ್, ಅನ್ನ, ಮೊಸರನ್ನವನ್ನೂ ತಯಾರಿಸಲಾಗಿತ್ತು.
ಭಕ್ತರು ಬೆಳಿಗ್ಗೆಯಿಂದಲೇ ಬಾಡೂಟ ತಯಾರಿಸಲು ಸಿದ್ಧತೆ ನಡೆಸಿದ್ದರು. ಬಹುತೇಕರ ಮನೆಗಳ ಮುಂದೆ ಪೆಂಡಾಲ್ ಹಾಕಲಾಗಿತ್ತು. ಮಧ್ಯಾಹ್ನದ ವೇಳೆಗೆ ಬಾಡೂಟ ತಯಾರಿಸುತ್ತಿದ್ದಂತೆ ಕೆಲವರು ಮನೆಯಲ್ಲೇ ದೇವಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪೆಂಡಾಲ್‌ಗಳ ಕೆಳಗೆ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಬಾಡೂಟ ಸವಿಯುತ್ತಿರುವುದು ಎಲ್ಲೆಡೆ ಕಂಡುಬಂತು. ಜಾತ್ರೆಗೆಂದೇ ಹಲವು ಭಕ್ತರು ಕೆಲ ತಿಂಗಳುಗಳ ಹಿಂದೆಯೇ ತಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣ ಹಾಗೂ ದೊಡ್ಡ ಕುರಿಗಳನ್ನು ಖರೀದಿಸಿದ್ದರು.
ಇನ್ನೂ ಕೆಲವರು ಅಂಗಡಿಯಿಂದ ಅಗತ್ಯಕ್ಕೆ ತಕ್ಕಷ್ಟು ಚಿಕನ್ ಹಾಗೂ ಮಟನ್ ಮಾಂಸ ಖರೀದಿಸಿ ತಂದು ಮನೆಗಳಲ್ಲಿ ಸಾಂಬರ್ ತಯಾರಿಸಿದರು. ಬುಧವಾರ ಶುರುವಾದ ಬಾಡೂಟದ ಸೊಗಡು ಗುರುವಾರ ಹಾಗೂ ಶುಕ್ರವಾರವೂ ಹಲವರ ಮನೆಗಳಲ್ಲಿ ಇರಲಿದೆ. ಕೆಲವರ ಮನೆಗಳಲ್ಲಿ ಸಂಬಂಧಿಕರು ಅವರ ಊರಿಗೆ ತೆರಳುವವರೆಗೂ ಬಾಡೂಟದ ಘಮಲು ಕಡಿಮೆಯಾಗಲ್ಲ ಎನ್ನುತ್ತಾರೆ ದೇವಿಯ ಭಕ್ತರು.
ಬೇವುಮಯವಾದ ಆವರಣ:
ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಬೇವಿನಸೊಪ್ಪು ಹಿಡಿದು ದೇವಸ್ಥಾನದತ್ತ ಹೆಜ್ಜೆ ಹಾಕಿದರು. ದಿನವಿಡೀ ದೇವಸ್ಥಾನದ ಆವರಣದಲ್ಲಿ ಉಧೋ.. ಉಧೋ.. ಎಂಬ ಭಕ್ತಿಪೂರ್ವಕ ಉದ್ಘಾರವೇ ಕೇಳಿಬಂತು. ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಬೇವಿನ ಸೊಪ್ಪು ಹಿಡಿದು ದೇವಸ್ಥಾನಕ್ಕೆ ಬಂದಿದ್ದರು. ಹರಕೆಯ ಭಾಗವಾಗಿ ಉಟ್ಟ ಬಟ್ಟೆಗಳನ್ನು ಹಾಗೂ ಬೇವಿನಸೊಪ್ಪನ್ನು ಅಲ್ಲಿಯೇ ಬಿಟ್ಟು ಹೊಸ ಬಟ್ಟೆಗಳನ್ನು ಧರಿಸಿ ಮನೆಗಳಿಗೆ ತೆರಳಿದ್ದರಿಂದ, ದೇವಸ್ಥಾನದ ಆವರಣವು ಬೇವುಮಯವಾಗಿತ್ತು. ಭಕ್ತರು ಬಿಟ್ಟು ಹೋದ ಬಟ್ಟೆಗಳ ರಾಶಿಯೇ ಕಂಡುಬಂತು.
ಸಂಚಾರ ದಟ್ಟಣೆ:
ಜಾತ್ರೆ ಹಿನ್ನೆಲೆಯಲ್ಲಿ ದುಗ್ಗಮ್ಮ ಗುಡಿಗೆ ತೆರಳುವ ಬಹುತೇಕ ಎಲ್ಲ ಮಾರ್ಗಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಹೊಂಡ ಸರ್ಕಲ್‌ನಿಂದ ದೇವಸ್ಥಾನಕ್ಕೆ ತೆರಳುವ ಮಾರ್ಗವಂತೂ ಭಕ್ತರಿಂದ ತುಂಬಿಹೋಗಿತ್ತು. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಸಂಚಾರದಟ್ಟಣೆ ಉಂಟಾಗಿತ್ತು. ಹಲವು ರಸ್ತೆಗಳನ್ನು ಏಕಮುಖ ಸಂಚಾರವನ್ನಾಗಿ ಬದಲಾಯಿಸಲಾಗಿದೆ. ಅಲ್ಲಲ್ಲಿ ಪಾರ್ಕಿಂಗ್‌ಗೂ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.