ಬುಧವಾರ, ಏಪ್ರಿಲ್ 1, 2020
19 °C
ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಎಸ್‌ಪಿ ಹನುಮಂತರಾಯ

ತನಿಖೆ ಸರಳಗೊಂಡರೆ ಸಾಬೀತು ಸುಲಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತನಿಖೆ ಮಾಡಿದರೆ ಮುಗಿಯುವುದಿಲ್ಲ. ಅದು ನ್ಯಾಯಾಲಯದಲ್ಲಿ ಸಾಬೀತಾಗಬೇಕು. ತನಿಖೆಗಷ್ಟೇ ಸೀಮಿತಗೊಂಡರೆ ಅದು ಪೊಲೀಸ್‌ ಸ್ಟೋರಿಯಾಗುತ್ತದೆ. ಅದು ಜನರ ಸ್ಟೋರಿಯಾಗುವಂತೆ ಮಾಡಬೇಕು. ಹಾಗಾಗಿ ನ್ಯಾಯಾಲಯದಲ್ಲಿ ಸುಲಭವಾಗಿ ಸಾಬೀತಾಗುವಂತೆ ತನಿಖಾ ಕ್ರಮಗಳನ್ನು ಸರಳಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಎನ್‌ಎ ಪರೀಕ್ಷೆ ನಮ್ಮಲ್ಲಿ ಕ್ಲಿಷ್ಟವಾಗಿದೆ. ಆದರೆ ಜೀವವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸುಲಭದಲ್ಲಿ ಅವುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿರುತ್ತಾರೆ. ಅಷ್ಟು ಸುಲಭದ ತಂತ್ರಜ್ಞಾನವನ್ನು ಪೊಲೀಸ್‌ ಇಲಾಖೆ ಕೂಡ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತನಿಖೆ ವೈಜ್ಞಾನಿಕವಾಗಿ ಇರಬೇಕಿದ್ದರೆ ಆಸಕ್ತಿ, ಅನ್ವೇಷಣಾ ಗುಣ ಮತ್ತು ವೈಜ್ಞಾನಿಕ ಮನೋಭಾವ ಪೊಲೀಸರಿಗೆ ಇರಬೇಕು. ಇದರ ಜತೆಗೆ ಸೂಕ್ಷ್ಮವಾಗಿ ಗಮನಿಸುವ ಗುಣ ಹೊಂದಿರಬೇಕು. ಯಾವುದೇ ಅಪಘಾತಗಳು ಉಂಟಾದಾಗ, ಅಪರಾಧಗಳು ನಡೆದಾಗ ತಕ್ಷಣಕ್ಕೆ ನೂರು ಸಾಕ್ಷ್ಯಗಳು ಅಲ್ಲಿರುತ್ತವೆ. ಸಮಯ ಕಳೆದಂತೆ ಸಾಕ್ಷ್ಯಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ತಕ್ಷಣ ಆ ಸ್ಥಳವನ್ನು ತಲುಪುವುದರ ಜತೆಗೆ ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸುವುದು ಎಂಬುದು ಕೂಡ ಬಹಳ ಮುಖ್ಯ ಎಂದು ಹೇಳಿದರು.

ಬಹುತೇಕ ಸಂದರ್ಭದಲ್ಲಿ ಪೊಲೀಸರು ಘಟನೆಯ ಸ್ಥಳಕ್ಕೆ ಹೋಗುತ್ತಾರೆ. ಆದರೆ ತಕ್ಷಣವೇ ಶ್ವಾನದಳಕ್ಕೆ, ಬೆರಳು ಮುದ್ರೆ ದಳಕ್ಕೆ ತಿಳಿಸಬೇಕು ಎಂಬುದನ್ನು ಮರೆಯುತ್ತಾರೆ. ಇದರಿಂದ ಪ್ರಮುಖ ಸಾಕ್ಷ್ಯಗಳನ್ನೇ ಕಳೆದುಕೊಂಡು ಬಿಡುತ್ತೇವೆ. ವಿಜ್ಞಾನ, ತಂತ್ರಜ್ಞಾನಗಳು ಇದ್ದರೂ ಅದನ್ನು ಬೇಕಾದಗ ಬಳಸುವ ವಿವೇಚನೆ ಇಲ್ಲದೇ ಹೋದರೆ ಪ್ರಯೋಜನವಾಗದು ಎಂದು ಎಚ್ಚರಿಸಿದರು.

ಎಲ್ಲಾ ಇಲಾಖೆಗಳಲ್ಲೂ ಪ್ರತಿಭಾವಂತ ಸಿಬ್ಬಂದಿ ಇರುತ್ತಾರೆ. ಅವರ ಆಸಕ್ತಿ, ಕೌಶಲಗಳನ್ನು ಹೆಚ್ಚಿಸುವ ಕೆಲಸ ಇಂಥ ತರಬೇತಿಗಳ ಮೂಲಕ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ‘ಪೂರ್ವವಲಯದ ನಾಲ್ಕು ಜಿಲ್ಲೆಗಳ ಸಿಬ್ಬಂದಿಗೆ ಎರಡು ದಿನಗಳ ಕಾಲ ನಡೆಯುವ ಈ ಸ್ಪರ್ಧೆ ಪೊಲೀಸರಲ್ಲಿ ಇರುವ ತನಿಖಾ ಕೌಶಲವನ್ನು ಇನ್ನಷ್ಟು ಹೆಚ್ಚಿಸುವಂತಾಗಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಲ್ಲಿನ ಪೊಲೀಸರು ಮಿಂಚುವಂತಾಗಲಿ’ ಎಂದು ಹಾರೈಸಿದರು.

ಬೆಂಗಳೂರು ಎಸ್‌ಸಿಆರ್‌ಬಿ ಇದರ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಖಿಲ ಭಾರತ ಮಟ್ಟದ 63ನೇ ಕರ್ತವ್ಯಕೂಟ ಈ ವರ್ಷ ನಡೆಯುತ್ತಿದೆ. ಪೂರ್ವ ವಲಯದ ಮಟ್ಟದಲ್ಲಿ ನಾಲ್ಕನೇಯದ್ದಾಗಿದೆ. ವಿಧಿ ವಿಜ್ಞಾನ, ಫಿಂಗರ್ ಪ್ರಿಂಟ್, ವಿಡಿಯೊಗ್ರಫಿ, ಫೋಟೊಗ್ರಫಿ, ಶ್ವಾನದಳ, ಬಾಂಬ್‌ಪತ್ತೆ ದಳ ಸಹಿತ ಹಲವು ರೀತಿಯ ಸ್ಪರ್ಧೆಗಳಿವೆ. ಇವುಗಳನ್ನು ಸ್ಪರ್ಧೆ ಎನ್ನುವ ಬದಲು ನಿಮ್ಮ ಕೌಶಲದ ಪರೀಕ್ಷೆ ಎನ್ನುವುದು ಸರಿಯಾಗುತ್ತದೆ’ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಫೋಟೊಗ್ರಫಿ ವಿಭಾಗದಲ್ಲಿ ರಾಷ್ಟ್ರ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದುಗ್ಗೇಶ್ ಹಾಗೂ ಬೆರಳು ಮುದ್ರೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಶಿವಮೊಗ್ಗದ ಕಿರಣ್ ಬಿ.ಎಂ. ಅವರನ್ನು ಸನ್ಮಾನಿಸಲಾಯಿತು.

ಅಭಿಯೋಗ ಉಪನಿರ್ದೇಶಕಿ ಕೆ.ಜೆ ಕಲ್ಪನಾ, ವಿಧಿ ವಿಜ್ಞಾನ ವಿಭಾಗದ ಉಪನಿರ್ದೇಶಕಿ ಛಾಯಾಕುಮಾರಿ ಉಪಸ್ಥಿತರಿದ್ದರು. ಡಿಎಆರ್ ಡಿವೈಎಸ್‌ಪಿ ಪ್ರಕಾಶ್ ಬಿ.ಪಿ ಸ್ವಾಗತಿಸಿದರು. ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)