ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆಗೆ ಶಿಕ್ಷಣ, ಆರ್ಥಿಕ ಸಬಲತೆಯೇ ಮದ್ದು

ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
Last Updated 15 ಫೆಬ್ರುವರಿ 2021, 5:59 IST
ಅಕ್ಷರ ಗಾತ್ರ

ಸೂರಗೊಂಡನಕೊಪ್ಪ (ನ್ಯಾಮತಿ): ‘ಭಾರತೀಯ ಜಾತಿ ವ್ಯವಸ್ಥೆಗೆ ಚಲನಶೀಲತೆ ಇಲ್ಲ. ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶಿಕ್ಷಣ, ಆರ್ಥಿಕ ಸಬಲತೆಯೇ ಮದ್ದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಆಶ್ರಯದಲ್ಲಿ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಅವರ 282ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಜಾತಿ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದಲ್ಲ. ನಾನೇನೂ ಕುರುಬ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ನಾವು ಅರ್ಜಿ ಹಾಕಿಕೊಂಡು ಹುಟ್ಟುವುದಾಗಿದ್ದರೆ ಏಕೆ ಈ ಅಪಮಾನ, ತಾರತಮ್ಯವನ್ನು ಅನುಭವಿಸುತ್ತಿದ್ದೆವು? ಪಟ್ಟಭದ್ರ ಹಿತಾಸಕ್ತಿಯುಳ್ಳವರು ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ. ಬಸವಣ್ಣ ಸುಧಾರಣೆ ಮಾಡಲು ಯತ್ನಿಸಿದ 850 ವರ್ಷಗಳು ಕಳೆದರೂ ಜಾತಿ ವ್ಯವಸ್ಥೆ ಹೋಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣ, ಸಂಪತ್ತನ್ನು ಎಲ್ಲಾ ಸಮುದಾಯಕ್ಕೂ ಸಮಾನವಾಗಿ ಹಂಚಿದಾಗ ಜಾತಿ ವ್ಯವಸ್ಥೆಗೆ ಚಲನೆಶೀಲತೆ ಲಭಿಸಲಿದೆ. ಸೇವಾಲಾಲರು ಸ್ವಾಭಿಮಾನದಿಂದ ಬದುಕುವ ಪಾಠವನ್ನು ಹೇಳಿಕೊಟ್ಟಿದ್ದಾರೆ. ಸೇವಾಲಾಲರು ಹಾಕಿಕೊಟ್ಟ ಆದರ್ಶದ ದಾರಿಯಲ್ಲೇ ನಡೆಯಬೇಕು’ ಎಂದು ಹೇಳಿದರು.

‘1996ರಿಂದ ಸೇವಾಲಾಲ್‌ ಜಯಂತಿಯನ್ನು ಇಲ್ಲಿ ಆಚರಿಸಲಾಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಸರ್ಕಾರದಿಂದಲೇ ಸೇವಾಲಾಲ್‌ ಜಯಂತಿಯನ್ನು ಆಚರಿಸಬೇಕು ಎಂದು ಆದೇಶಿಸಿದ್ದೇನೆ. ಬುಡಕಟ್ಟು ಸಮುದಾಯದ, ದಲಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ದಾರ್ಶನಿಕರ ಜಯಂತಿಯನ್ನೂ ಆಚರಿಸಬೇಕು. ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ₹ 50 ಕೋಟಿ ಅನುದಾನ ನೀಡಲಾಗಿದೆ. ಶ್ರೇಣೀಕೃತ ಸಮಾಜ ವ್ಯವಸ್ಥೆ ಹೋಗಿ ಸಮಸಮಾಜ ವ್ಯವಸ್ಥೆ ಬರಬೇಕು’ ಎಂದು ಆಶಿಸಿದರು.

‘ಸೇವಾಲಾಲರು ಹೇಳಿದಂತೆ ಮದ್ಯಸೇವನೆ ಸೇರಿ ಕೆಟ್ಟ ಚಟಗಳನ್ನು ತ್ಯಜಿಸಿಬಿಡಿ. ಎಷ್ಟೇ ಕಷ್ಟ ಬಂದರೂ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ’ ಎಂದು ಸಿದ್ದರಾಮಯ್ಯ ಅವರು ಕೈಮುಗಿದು ಬಂಜಾರ ಸಮುದಾಯದವರಲ್ಲಿ ಮನವಿ ಮಾಡಿದರು.

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ‘ಸೇವಾಲಾಲರು ಬಂಜಾರ ಸಮುದಾಯದ, ತುಳಿತಕ್ಕೆ ಒಳಗಾದ ಸಮುದಾಯದ ಭಗವಂತನಾಗಿದ್ದಾನೆ. ಈ ಸಮುದಾಯದವರು ವಿದ್ಯಾವಂತರಾಗಬೇಕು. ಸೇವಾಲಾಲರು ಜಗತ್ತಿಗೆ ತೋರಿಸಿದ ಬೆಳಕಿನಲ್ಲಿ ನಾವೆಲ್ಲ ನಡೆಯಬೇಕು’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ಲಿಂಗಾಯತರಾಗಿದ್ದರೂ ಎಲ್ಲಾ ಸಮುದಾಯಕ್ಕೆ ನ್ಯಾಯ ನೀಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಬಂಜಾರರು, ಪರಿಶಿಷ್ಟ ಜಾತಿ, ಪಂಗಡದವರನ್ನು ಆರ್ಥಿಕ, ಸಾಮಾಜಿಕವಾಗಿ ಮುಂದೆ ತರಲು ಬದ್ಧರಾಗಿದ್ದಾರೆ. ಬಂಜಾರ ಸಮುದಾಯವನ್ನು ಬಲಿಷ್ಠಗೊಳಿಸಲು ಮುಂಬರುವ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿ ನಮಗೆ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ‘ತಾಂಡಾಗಳಿಂದ ವಲಸೆ ಹೋಗುವುದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲಿ ₹ 5 ಕೋಟಿ ಅನುದಾನ ನೀಡಿ ಬಂಜಾರರ ಟೆಕ್ಸ್‌ಟೈಲ್‌ ಉದ್ಯಮವನ್ನು ಸ್ಥಾಪಿಸಬೇಕು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಅಲ್ಲಿಯೇ ಪಡಿತರ ನೀಡುವಂತಾಗಬೇಕು. ಮುಂಬರುವ ಬಜೆಟ್‌ನಲ್ಲಿ ಬಂಜಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌, ‘ಭೂಮಾಪಕರ ಸಮಸ್ಯೆಯಿಂದಾಗಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು ನನೆಗುದಿಗೆ ಬಿದ್ದಿತ್ತು. ಒಂದು ವರ್ಷದೊಳಗೆ ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಹೇಳಿದರು.

‘ತಾಂಡಾಗಳಲ್ಲಿ ಋತುಮಾನ ಶಾಲೆಗಳನ್ನು ಆರಂಭಿಸಬೇಕು. ಸಂತ ಸೇವಾಲಾಲ್ ಪ್ರತಿಷ್ಠಾನಕ್ಕೆ ನಾಲ್ಕು ವರ್ಷಗಳಿಂದ ಅನುದಾನ ಸಿಕ್ಕಿಲ್ಲ. ತಾವೇ ಅಧ್ಯಕ್ಷರಾಗಿರುವುದರಿಂದ ಈ ಬಾರಿ ಅನುದಾನ ನೀಡಬೇಕು. ಬಜೆಟ್‌ನಲ್ಲಿ ತಾಂಡಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಬೇಕು’ ಎಂದು ರಾಜೀವ್‌ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ‘ಸೇವಾಲಾಲ್‌ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗಿದೆ. ಪಕ್ಷಭೇದ ಮರೆತು ನಾವೆಲ್ಲ ಭಕ್ತರ ರೀತಿಯಲ್ಲಿ ಬಂದು ಸೇವೆ ಮಾಡುತ್ತಿದ್ದೇವೆ. ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪದ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಸೇವಾಲಾಲರ ಜನ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಕೇವಲ ಗರ್ಭಗುಡಿ ಇತ್ತು. ಯಡಿಯೂರಪ್ಪ ಅವರು ಅನುದಾನ ನೀಡಿದ್ದರಿಂದ ಇಂದು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿದೆ’ ಎಂದು ಸ್ಮರಿಸಿದರು.

ಸಚಿವ ಬೈರತಿ ಬಸವರಾಜ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಎಸ್‌. ಭೀಮಾನಾಯ್ಕ, ಕೆ.ಬಿ. ಅಶೋಕ ನಾಯ್ಕ, ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠದ ಅಧ್ಯಕ್ಷ ರುದ್ರಪ್ಪ ಲಮಾಣಿ, ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ ರಮೇಶ್‌, ಸುರೇಂದ್ರ ನಾಯ್ಕ, ಅನಿತಾ ಬಾಯಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಬಂಜಾರ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

*

₹ 10 ಕೋಟಿ ಅನುದಾನ: ಸಿಎಂ

ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ₹ 10 ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು, ‘ಸೇವಾಲಾಲರು ಬಂಜಾರರ ಆರಾಧ್ಯ ದೈವ. ಸಮಾಜವು ಮುಖ್ಯವಾಹಿನಿಗೆ ಬರಲು ಈ ದಾರ್ಶನಿಕರ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು’ ಎಂದರು.

‘ಬಂಜಾರ ಸಮುದಾಯವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದಕ್ಕೆ ತರಲು ಬಂಜಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದೇವೆ’ ಎಂದು ಹೇಳಿದರು.

***

ಶಿವಮೂರ್ತಿ ಸೋಲಿಸಿದ್ದ ಸಿದ್ದರಾಮಯ್ಯ!

ಸಭಿಕರ ಸಾಲಿನಲ್ಲಿ ಕುಳಿತಿದ್ದ ಮಾಜಿ ಶಾಸಕ ಕೆ.ಶಿವಮೂರ್ತಿ ಅವರನ್ನು ವೇದಿಕೆಗೆ ಆಹ್ವಾನಿಸಿದ ಸಿದ್ದರಾಮಯ್ಯ, ತಾವಿಬ್ಬರೂ ಹಿಂದಿನಿಂದಲೂಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡರು.

‘ಮೈಸೂರಿನಲ್ಲಿ ಓದುತ್ತಿದ್ದಾಗಿನಿಂದಲೂ ಸ್ನೇಹಿತನಾಗಿದ್ದ ಶಿವಮೂರ್ತಿ, ಬಂಗಾರಪ್ಪ ಅವರ ಮಾತು ಕೇಳಿಕೊಂಡು ನನ್ನ ವಿರುದ್ಧ ಕುಸ್ತಿ ಆಡಿದ್ದರು. ಎರಡು ನಿಮಿಷದಲ್ಲೇ ಅವನನ್ನು ಒಗೆದುಬಿಟ್ಟಿದ್ದೆ’ ಎಂದು ಸ್ಮರಿಸಿದರು.

*

ವೈದ್ಯಕೀಯ ಕಾಲೇಜಿಗಾಗಿ ಘೋಷಣೆ; ವಾಗ್ವಾದ

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮಾಜಿ ಶಾಸಕ ಶಿವಮೂರ್ತಿ ಅವರು ಸಂತ ಸೇವಾಲಾಲ್‌ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ಘೋಷಣೆಗಳನ್ನು ಕೂಗಿದರು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದರೂ ನಿಲ್ಲಿಸದೇ ಅತ್ತಿತ್ತ ಹೋಗುತ್ತ ಘೋಷಣೆ ಕೂಗುತ್ತಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಇನ್ನೊಂದು ಗುಂಪಿನವರು ಶಿವಮೂರ್ತಿ ಅವರೊಂದಿಗೆ ವಾಗ್ವಾದಕ್ಕಿಳಿದರು. ‘ಇದು ಧಾರ್ಮಿಕ ಕಾರ್ಯಕ್ರಮ. ಇಲ್ಲಿ ರಾಜಕೀಯ ಮಾಡಬೇಡಿ’ ಎಂದು ಮಾಜಿ ಶಾಸಕರನ್ನು ಕೆಲವರು ತರಾಟೆಗೆ ತೆಗೆದುಕೊಂಡರು.

ಸೇವಾಲಾಲ್‌ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ಸಮಾಜದ ಮುಖಂಡರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತೇವೆ’ ಎಂದು ಹೇಳಿದರು.

*

ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ಕೈಯಲ್ಲಿ ಸಂವಿಧಾನ ಇದ್ದಾಗ ಅದರ ವಿಧಿಗಳು ಜಾರಿಗೊಳ್ಳಲು ಸಾಧ್ಯವಿಲ್ಲ. ಅಧಿಕಾರದಲ್ಲಿದ್ದಾಗ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು.

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT