ಭಾನುವಾರ, ಜನವರಿ 17, 2021
22 °C
ಕರ್ನಾಟಕ ರಾಜ್ಯೋತ್ಸವ: ನಾಡು-ನುಡಿಗೆ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಅರ್ಪಣೆ

‘ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಭಾಷೆಯನ್ನು ಸಜ್ಜುಗೊಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.

‘2,500 ವರ್ಷಗಳ ಹಿಂದೆ ಜನಿಸಿದ ಕನ್ನಡವೆಂಬ ಶಿಶು ಇಂದು ಪ್ರಬುದ್ಧಳಾಗಿ ಬೆಳೆದಿದ್ದಾಳೆ. ಅನ್ಯ ಭಾಷೆಗಳ ಒಳಹರಿವಿನ ಪರಿಣಾಮ ಅನೇಕ ಸವಾಲುಗಳು ಮುಖಾಮುಖಿಯಾಗಿದ್ದು, ಅದನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ಒಂದು ವರ್ಷದ ಅವಧಿಯನ್ನು ‘ಕನ್ನಡ ಕಾಯಕ ವರ್ಷವಾಗಿ’ ಆಚರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಕಳೆದ ಸಾಲಿನಲ್ಲಿ ನೆರೆ ಹಾವಳಿಯ ಕಾರಣದಿಂದ ಹಲವು ಕಾರ್ಯಕ್ರಮಗಳ ಮತ್ತು ವಿವಿಧ ಜಯಂತಿಗಳ ಅನುದಾನವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡಲಾಗಿತ್ತು. ಕೋವಿಡ್ ಕಾರಣದಿಂದ ಈ ಬಾರಿಯೂ ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗಿದೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಳೆದ ಮತ್ತು ಪ್ರಸಕ್ತ ಸಾಲಿನ 34 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಕೆಎಸ್‍ಡಿಸಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಸಿಇಒ ಪದ್ಮಾ ಬಸವಂತಪ್ಪ, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಆಯುಕ್ತ ಕುಮಾರಸ್ವಾಮಿ, ಎಎಸ್‍ಪಿ ರಾಜೀವ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು. ಸುಮಾ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.

‘ಕನ್ನಡ ಏನೇ ಕುಣಿದಾಡುವುದೆನ್ನ..!’

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಕುವೆಂಪು ರಚಿಸಿರುವ ‘ಕನ್ನಡ ಎನೆ ಕುಣಿದಾಡುವುದೆನ್ನೆದೆ’ ಪದ್ಯವನ್ನು ತಪ್ಪಾಗಿ ಹೇಳಿದರು.

‘ಕನ್ನಡ ಎನೆ ಬದಲು ‘ಏನೇ’ ಕುಣಿದಾಡುವುದೆನ್ನ, ಕನ್ನಡ ಏನೆ ಕಿವಿ ನಿಮಿರುವುದು ಬದಲು ನಿಂತಿರುವುದು. ಕಾಮನಬಿಲ್ಲನ್ನು ಕಾಣುವ ಕವಿಯೊಲು ಬದಲು ‘ಕಿವಿಯೊಳಗೆ’ ತೆಕ್ಕನೆ ಬದಲು ‘ತಕ್ಕೆನೆ’ ಎಂದು ಉಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು