ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‍ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹ

ಎಐಟಿಯುಸಿ ನೇತೃತ್ವದಲ್ಲಿ ಆಂಜನೇಯ ಮಿಲ್ಸ್ ಎಂಪ್ಲಾಯೀಸ್ ಅಸೋಸಿಯೇಷನ್‌ ಯೂನಿಯನ್ ಸದಸ್ಯರ ಪ್ರತಿಭಟನೆ
Last Updated 19 ಅಕ್ಟೋಬರ್ 2019, 11:36 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ನಿಟುವಳ್ಳಿ ರಸ್ತೆಯಲ್ಲಿನ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುವುದು, ಖಾಲಿ ಇರುವ ತಜ್ಞ ವೈದ್ಯರ ನೇಮಕಾತಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ ಹಾಗೂ ಆಂಜನೇಯ ಮಿಲ್ಸ್ ಎಂಪ್ಲಾಯೀಸ್ ಅಸೋಸಿಯೇಷನ್‌ ಯೂನಿಯನ್ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಅಶೋಕ ರಸ್ತೆಯ ಕಾಮ್ರೆಡ್ ‍ಪಂಪಾವತಿ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಯದೇವ ವೃತ್ತ ತಲುಪಿ ಅಲ್ಲಿಂದ ನಿಟುವಳ್ಳಿ ರಸ್ತೆಯ ಮೂಲಕ ಇಎಸ್‍ಐ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.

‘ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಾರ್ಮಿಕರು ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ ದಾಖಲಾಗುತ್ತಾರೆ. ಮಾತ್ರವಲ್ಲ, ಸಾವಿರಾರು ಕಾರ್ಮಿಕರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳಿಗೆ ಮಾತ್ರೆ, ಸ್ಕ್ಯಾನ್, ರಕ್ತಪರೀಕ್ಷೆ, ಎಂಆರ್‌ಐ ಸ್ಕ್ಯಾನ್, ಎಕೊ, ಎಕ್ಸ್‌ರೇ ಮಾಡಿಸಲು ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಚೀಟಿ ಬರೆದು ಕಳುಹಿಸುತ್ತಾರೆ. ಇಎಸ್‍ಐ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿಲ್ಲ’ ಎಂದು ಪ್ರತಿಭಟಕಾರರು ದೂರಿದರು.

‘ಹಲವು ವರ್ಷಗಳಿಂದ ಆಸ್ಪತ್ರೆ ಅಭಿವೃದ್ಧಿ ಸಮಿತಿಗೆ ಸ್ಥಳೀಯ ಕಾರ್ಮಿಕ ಸದಸ್ಯರನ್ನು ನೇಮಕ ಮಾಡಿಲ್ಲ. ಅಷ್ಟೇ ಅಲ್ಲ ಹಲವು ವರ್ಷಗಳಿಂದ ಸಭೆಯನ್ನೇ ಕರೆದಿಲ್ಲ. ಹೀಗಾಗಿ ಕಾರ್ಮಿಕರ ಸಮಸ್ಯೆಯನ್ನೇ ಕೇಳುವವರಿಲ್ಲದಂತಾಗಿದೆ. ಕೂಡಲೇ ಸ್ಥಳೀಯ ಕಾರ್ಮಿಕರನ್ನು ಸದಸ್ಯರನ್ನಾಗಿ ನೇಮಿಸಬೇಕು. ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.

‘ಆಸ್ಪತ್ರೆಗೆ ಜನರಲ್ ಸರ್ಜರಿ, ಕಣ್ಣಿನ ತಜ್ಞರು, ಎಕ್ಸರೇ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ರಕ್ತ ಪರೀಕ್ಷಾ ಪ್ರಯೋಗಾಲಯದ ತಜ್ಞರನ್ನು ನೇಮಿಸಬೇಕು. ಡಯಾಲಿಸಿಸ್, ಅಲ್ಟ್ರಾಸೌಂಡ್, ಡಿಜಿಟಲ್ ಎಕ್ಸ್‌ರೇ ಇಲ್ಲದ ಕಾರಣ ವಿವಿಧ ಕಡೆಗಳಿಂದ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು. ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ವಿಷಯಗಳು ಇದ್ದರೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಇಎಸ್‌ಐ ವೈದ್ಯಾಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ದಾವಣಗೆರೆ ಜಿಲ್ಲಾ ಎಐಟಿಯುಸಿ ಹಾಗೂ ಆಂಜನೇಯ ಮಿಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಎಚ್.ಜಿ. ಉಮೇಶ್, ಉಪಾಧ್ಯಕ್ಷ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಎಲ್‌. ರಮೇಶ್‌ನಾಯ್ಕ, ಖಜಾಂಚಿ ಶಿವಕುಮಾರ್, ಕಾರ್ಯದರ್ಶಿ ಎಸ್. ಜಯಪ್ಪ, ಸಹ ಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಭೈರಮ್ಮ, ಮಂಜಮ್ಮ, ರೇವಮ್ಮ, ಶೇಷಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT