ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬೀದಿ ಬದಿ ವ್ಯಾಪಾರಿಗಳಿಗೆ ‘ಸೂರು’

ಡೇ ನಲ್ಮ್‌ ಯೋಜನೆಯಡಿ ನಗರದ 5 ಕಡೆಗಳಲ್ಲಿ ಸವಲತ್ತು
Published 2 ಏಪ್ರಿಲ್ 2024, 5:22 IST
Last Updated 2 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಗರದ 5 ಕಡೆಗಳಲ್ಲಿ ಆಹಾರ ವಹಿವಾಟಿನ ಸ್ಥಳ (ಫುಡ್‌ಕೋರ್ಟ್‌), ತರಕಾರಿ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ದೀನ್‌ ದಯಾಳ್ ಅಂತ್ಯೋದಯ ಯೋಜನೆ –ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್‌) ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸವಲತ್ತು ಕಲ್ಪಿಸಲಾಗುತ್ತಿದೆ.

ನಗರದ ಗುಂಡಿ ವೃತ್ತದ ಬಳಿ ಫುಡ್‌ಕೋರ್ಟ್‌ ಕಾಮಗಾರಿಗೆ ₹ 33 ಲಕ್ಷ, ಜಯದೇವ ವೃತ್ತದ ಬಳಿ ₹ 32 ಲಕ್ಷ, ಕ್ಲಾಕ್‌ಟವರ್‌ ಬಳಿ ₹ 41 ಲಕ್ಷ, ಆಶ್ರಯ ಹಾಸ್ಪಿಟಲ್‌ (ಸ್ನೇಹಾಲಯ ಮಹಿಳೆಯರ ವಸತಿ ನಿಲಯ) ಬಳಿ ₹ 22 ಲಕ್ಷ, ಎಸ್‌.ಒ.ಜಿ. ಕಾಲೊನಿ ಬಳಿ ₹ 40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಗುಂಡಿ ವೃತ್ತ, ಜಯದೇವ ವೃತ್ತ, ಆಶ್ರಯ ಹಾಸ್ಪಿಟಲ್‌ ಬಳಿ ಮಳಿಗೆಗಳು ಆಹಾರ ಮಳಿಗೆಗೆ ಮೀಸಲಾಗಿದ್ದರೆ, ಕ್ಲಾಕ್‌ ಟವರ್‌ ಬಳಿಯ ಮಳಿಗೆಗಳು ತರಕಾರಿ ವ್ಯಾಪಾರಿಗಳಿಗೆ ದೊರೆಯಲಿವೆ. ಎಸ್‌.ಒ.ಜಿ. ಕಾಲೊನಿಯ ಮಳಿಗೆಗಳು ಆಹಾರ ಹಾಗೂ ತರಕಾರಿ ವ್ಯಾಪಾರಿಗಳು ಇಬ್ಬರಿಗೂ ಲಭ್ಯವಾಗಲಿವೆ ಎನ್ನಲಾಗಿದೆ.

ಈಗಾಗಲೇ ಗುಂಡಿ ವೃತ್ತದ ಬಳಿ ಹಲವು ದಿನಗಳ ಹಿಂದೆಯೇ ಕಾಮಗಾರಿ ಶುರುವಾಗಿದ್ದು, ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡರೆ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮೇಲೆ ಶೀಟ್ ಅಳವಡಿಸಲಾಗುತ್ತದೆ. 10*10 ಜಾಗದಲ್ಲಿ ಒಂದು ಅಂಗಡಿಯಂತೆ 20 ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿದೆ. ಕೆಳಗೆ ಪೇವರ್‌ ಬ್ಲಾಕ್ಸ್‌ಗಳನ್ನು ಹಾಕಲಾಗುತ್ತದೆ.

ಎಸ್‌.ಒ.ಜಿ. ಕಾಲೊನಿಯಲ್ಲೂ ಕಾಮಗಾರಿ ಶುರುವಾಗಿದೆ. ಇನ್ನುಳಿದ ಕಡೆಗಳಲ್ಲಿ ಈಗಾಗಲೇ ವರ್ಕ್‌ ಆರ್ಡರ್‌ (ಕಾರ್ಯಾದೇಶ) ದೊರೆತಿದ್ದು, ಆದಷ್ಟು ಶೀಘ್ರವೇ ಕೆಲಸ ಶುರುವಾಗಲಿದೆ ಎಂದು ಪಾಲಿಕೆ ಎಂಜಿನಿಯರ್‌ ಮಾಹಿತಿ ನೀಡಿದರು.

ಕೆಸರಿನಿಂದ ಮುಕ್ತಿ:

ಗುಂಡಿ ವೃತ್ತದ ಬಳಿಯ ಫುಡ್‌ಕೋರ್ಟ್‌ ಬೀದಿಯು ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗುತ್ತಿತ್ತು. ಇದರಿಂದಾಗಿ ವಾಹನಗಳ ಸಂಚಾರವಿರಲಿ, ಜನರ ಓಡಾಟಕ್ಕೂ ಸಮಸ್ಯೆಯಾಗುತ್ತಿತ್ತು. ಕೆಸರಿನ ಕಾರಣಕ್ಕೆ ಮಳೆಗಾಲದಲ್ಲಿ ಅತ್ತ ವ್ಯಾಪಾರಿಗಳು ಹೆಜ್ಜೆಯಿಡಲೂ ಹಿಂದೇಟು ಹಾಕುವ ಸ್ಥಿತಿ ಎದುರಾಗುತ್ತಿತ್ತು.

ಇದರಿಂದಾಗಿ ಮಳೆಗಾಲದಲ್ಲಿ ಹೆಚ್ಚಿನ ವ್ಯಾಪಾರವಿಲ್ಲದೇ, ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಕಾಂಕ್ರೀಟ್ ರಸ್ತೆ ನಿರ್ಮಿಸಿ ಮೇಲೆ ಶೀಟ್‌ ಹಾಕುವುದರಿಂದ, ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದರು.

ಕಾಮಗಾರಿ ಪೂರ್ಣಗೊಂಡ ಬಳಿಕ ಈಗಾಗಲೇ ವ್ಯಾಪಾರ ನಡೆಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು. ನಂತರ ಇತರೆ ವ್ಯಾಪಾರಿಗಳಿಗೆ ಮಳಿಗೆ ವಿತರಿಸಲಾಗುವುದು. ಬಾಡಿಗೆ ನಿಗದಿ ಮಾಡುವ ಚಿಂತನೆ ಇದೆ -ರೇಣುಕಾ ಮಹಾನಗರ ಪಾಲಿಕೆ ಆಯುಕ್ತರು

‘ಕಾಮಗಾರಿ ಬೇಗ ಪೂರ್ಣಗೊಳಿಸಿ’

‘ರಸ್ತೆ ಕಾಮಗಾರಿ ಕಾರಣಕ್ಕೆ ಹಲವು ದಿನಗಳಿಂದ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ ಬೀದಿ ಅನುಕೂಲ ಆಗಲಿದೆ’ ಎಂದು ಗುಂಡಿ ವೃತ್ತದ ಬಳಿಯ ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ‘ವ್ಯಾಪಾರವಿಲ್ಲದೇ ಬದುಕು ನಡೆಸುವುದು ಕಷ್ಟವಾಗುತ್ತಿದೆ. ಹಲವು ದಿನಗಳಿಂದ ದುಡಿಮೆ ಇಲ್ಲದೇ ಸಾಕಷ್ಟು ಕುಟುಂಬಗಳು ಸಂಕಷ್ಟದಲ್ಲಿವೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಗಮನ ಹರಿಸಿ ತುರ್ತಾಗಿ ಕಾಮಗಾರಿ ಮುಗಿಯುವಂತೆ ನೋಡಿಕೊಳ್ಳಬೇಕು’ ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ‘ಗುಂಡಿ ವೃತ್ತದ ಬಳಿ ಹಲವು ವಿದ್ಯುತ್‌ ಲೈನ್‌ಗಳು ಹಾದು ಹೋಗಿರುವ ಕಾರಣ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಪಾಲಿಕೆ ಎಂಜಿನಿಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT