ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಬಲವಂತದ ಸಾಲ ವಸೂಲಿ ಬೇಡ: ಸಂಸದ ಸಿದ್ದೇಶ್ವರ ಸೂಚನೆ

ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆ
Last Updated 20 ಸೆಪ್ಟೆಂಬರ್ 2019, 13:47 IST
ಅಕ್ಷರ ಗಾತ್ರ

ದಾವಣಗೆರೆ: ಸಾಲ ವಸೂಲಿ ಮಾಡಲು ರೈತರ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಲೀಡ್‌ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರೈತರ ಸಾಲ ವಸೂಲಾತಿಗೆ ಅವಸರ ಮಾಡಬೇಡಿ. ರೈತರು ಮೋಸ ಮಾಡುವುದಿಲ್ಲ. ಮಳೆಯಾದರೆ ಸಾಲವನ್ನು ಪಾವತಿಸುತ್ತಾರೆ. ಅಲ್ಲಿಯವರೆಗೂ ಕಾಯಿರಿ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಟ್ರ್ಯಾಕ್ಟರ್‌ ಸಾಲ ವಸೂಲಿ ಮಾಡಲು ನೋಟಿಸ್‌ ನೀಡಿ ಒತ್ತಡ ಹಾಕುತ್ತಿರುವ ಬಗ್ಗೆ ಹಲವು ರೈತರು ದೂರು ನೀಡಿದ್ದಾರೆ. ಸಾಲ ವಸೂಲಾತಿಗೆ ತೊಂದರೆ ಕೊಟ್ಟರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ರೈತರ ಮನವೊಲಿಸಿ ಸಾಲದ ಕಂತು ಪಾವತಿ ಮಾಡಿಸಿಕೊಳ್ಳಿ. ಅವಘಡ ಸಂಭವಿಸಿದರೆ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಸಾಲ ವಸೂಲಿ ಮಾಡಲು ಜಿಲ್ಲಾಡಳಿತವೂ ಸಹಕಾರ ನೀಡುತ್ತದೆ’ ಎಂದು ಹೇಳಿದರು.

ಫಸಲ್‌ ಬಿಮಾ: ಪ್ರಸಕ್ತ ಮುಂಗಾರಿನಲ್ಲಿ ಪ್ರಧಾನಮಂತ್ರಿ ಫಸಲ್‌ ಬಿಮಾವನ್ನು ಕೇವಲ 26,207 ರೈತರು ಮಾಡಿಸಿರುವುದಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ‘ಬೆಳೆ ಕಟಾವು ಪ್ರಯೋಗವನ್ನು ಸಮರ್ಪಕವಾಗಿ ಮಾಡಬೇಕು. ಕಳೆದ ವರ್ಷ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಮುಂದಿನ ವರ್ಷ ಕನಿಷ್ಠ ಒಂದು ಲಕ್ಷ ರೈತರು ಫಸಲ್‌ ಬಿಮಾ ಕಂತು ಪಾವತಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಿ’ ಎಂದು ಸೂಚಿಸಿದರು.

ಹಲವು ಬ್ಯಾಂಕ್‌ಗಳು ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ನಿಗದಿತ ಗುರಿಯನ್ನು ತಲುಪದೇ ಇರುವುದಕ್ಕೆ ಸಂಸದರು ಬ್ಯಾಂಕ್‌ನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕನಿಷ್ಠ ಶೇ 60ರಷ್ಟು ಸಾಲ ಸೌಲಭ್ಯ ಒದಗಿಸಬೇಕು ಎಂಬ ನಿಯಮವಿದೆ. ಇದಕ್ಕಿಂತಲೂ ಹೆಚ್ಚು ಸಾಲ ಒದಗಿಸಲು ಯತ್ನಿಸಿ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಲೀಡ್‌ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕ ಸುಶ್ರುತ್‌ ಡಿ. ಶಾಸ್ತ್ರಿ ಅವರು ಬ್ಯಾಂಕ್‌ಗಳ ಪ್ರಗತಿಯ ವರದಿಯನ್ನು ಸಭೆಗೆ ಒಪ್ಪಿಸಿದರು. ಆರ್‌ಬಿಐ ವ್ಯವಸ್ಥಾಪಕ ಆನಂದ ನಿಮ್‌, ನಬಾರ್ಡ್‌ನ ಅಧಿಕಾರಿ ವಿ. ರವೀಂದ್ರ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕ ಜಿ.ಜಿ. ದೊಡ್ಡಮನಿ, ಲೀಡ್‌ ಬ್ಯಾಂಕ್‌ನ ಅಧಿಕಾರಿಗಳಾದ ರಾಮಮೂರ್ತಿ ಎನ್‌., ಕೆ. ರಾಘವೇಂದ್ರ ನಾಯರಿ ಇದ್ದರು.

ಶೈಕ್ಷಣಿಕ ಸಾಲ ನಿರಾಕರಿಸಬೇಡಿ

‘ಜಮೀನಿನ ಮೇಲೆ, ಅಪ್ಪ–ಅಜ್ಜನ ಹೆಸರಿನಲ್ಲಿ ಸಾಲ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲು ನಿರಾಕರಿಸಬೇಡಿ’ ಎಂದು ಸಂಸದ ಸಿದ್ದೇಶ್ವರ, ಬ್ಯಾಂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಬಿಐ ಅಧಿಕಾರಿಯೊಬ್ಬರು, ‘ಸಾಮಾನ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ನೀಡಲು ನಿರಾಕರಿಸುವುದಿಲ್ಲ. ಆದರೆ, ತಂದೆ ಪಡೆದ ಸಾಲ ಎನ್‌ಪಿಎ ಆಗಿದ್ದರೆ ಅಥವಾ ಸಿಬಿಲ್‌ ಸ್ಕೋರ್‌ ಕಡಿಮೆಯಾಗಿದ್ದರೆ ಸಾಲ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಸಾಲ ನಿರಾಕರಿಸಿದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಸಾಲ ಸೌಲಭ್ಯವನ್ನು ಒದಗಿಸಿ. ನೌಕರಿ ಸಿಗದ ವಿದ್ಯಾರ್ಥಿಗಳಿಗೆ ಸಾಲ ಮರುಪಾವತಿಸಲು ಹೆಚ್ಚಿನ ಕಾಲಾವಕಾಶ ಕೊಡಿ. ಉದ್ಯೋಗದಲ್ಲಿರುವವರಿಂದ ಮುಲಾಜಿಲ್ಲದೇ ಸಾಲ ವಸೂಲಿ ಮಾಡಿ’ ಎಂದು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಜೂನ್‌ ಅಂತ್ಯಕ್ಕೆ 215 ವಿದ್ಯಾರ್ಥಿಗಳಿಗೆ ₹ 4.80 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಚರ್ಚೆಯಾದ ವಿಷಯ

* ಡಿಸಿಸಿ ಬ್ಯಾಂಕ್‌ನಿಂದ ಇನ್ನೂ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು.

* ನಲ್ಮ್‌ ಯೋಜನೆಯಡಿ 105 ಅರ್ಜಿ ಬಾಕಿ ಇರುವುದಕ್ಕೆ ಸಂಸದರ ಆಕ್ಷೇಪ

* ಮುದ್ರಾ ಯೋಜನೆಯಡಿ ನೀಡುವ ಸಾಲವನ್ನು ಬೇರೆ ಸಾಲದ ಜೊತೆಗೆ ಜೋಡಿಸಬೇಡಿ

* ಮುದ್ರಾ ಯೋಜನೆಯಡಿ ಎಷ್ಟು ಜನರಿಗೆ ಸಾಲ ನೀಡಲಾಗಿದೆ? ಎಷ್ಟು ಜನರಿಂದ ಸಾಲ ವಸೂಲಾತಿ ಮಾಡಲಾಗಿದೆ ವರದಿ ನೀಡಲು ಸಂಸದರ ಸೂಚನೆ

* ಸಾಸ್ವೇಹಳ್ಳಿ, ಡಿಸಿಎಂ ಟೌನ್‌ಷಿಪ್‌ ಸೇರಿ ಬೇಡಿಕೆ ಇರುವ ಕಡೆ ಬ್ಯಾಂಕ್‌ ಶಾಖೆ ತೆರೆಯಲು ಸಂಸದರ ಸೂಚನೆ

* ಕೆನರಾ ಬ್ಯಾಂಕ್‌ ರುಡ್‌ಸೆಟಿ ಸಂಪರ್ಕ ರಸ್ತೆ ದುರಸ್ತಿಗೆ ಸೂಚನೆ

ಜಿಲ್ಲೆಯಲ್ಲಿ ಸಾಲ ವಿತರಣೆ ವಿವರ

ವಲಯ–ಗುರಿ(₹ಗಳಲ್ಲಿ)–ಸಾಧನೆ(₹ಗಳಲ್ಲಿ)

ಕೃಷಿ–466.17 ಕೋಟಿ–546.86 ಕೋಟಿ

ಪೂರಕ ಚಟುವಟಿಕೆ–59.39 ಕೋಟಿ–65.65 ಕೋಟಿ

ಎಂ.ಎಸ್‌.ಎಂ.ಇ–149.14 ಕೋಟಿ–116.26 ಕೋಟಿ

ಇತರೆ ಆದ್ಯತಾ ವಲಯ–209.24 ಕೋಟಿ–86.24 ಕೋಟಿ

ಒಟ್ಟು–833.94 ಕೋಟಿ–815.01 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT