ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೆಡ್‌ ಹುಡುಕುವುದೇ ಕಷ್ಟದ ಕೆಲಸ

Last Updated 11 ಮೇ 2021, 5:13 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಜೋರಿದೆ. ಆಮ್ಲಜನಕ ಬೆಡ್‌, ಆಮ್ಲಜನಕ ಮಾಸ್ಕ್‌ ಹುಡುಕುವುದೇ ಕಷ್ಟದ ಕೆಲಸವಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಿಂತ ಇದೇ ತಲೆನೋವು ಉಂಟು ಮಾಡಿದೆ’ ಎಂದು ಸಿ.ಜಿ. ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್‌ ಸುವರ್ಣಾ ಅಂಕಲಜಿ ಹೇಳಿದ್ದಾರೆ.

‘ನನಗೀಗ 58 ವರ್ಷ. 36 ವರ್ಷಗಳಿಂದ ಶುಶ್ರೂಷಕಿಯಾಗಿ ಕೆಲಸ ಮಾಡಿದ್ದೇನೆ. ಕೊರೊನಾ ಬರುವವರೆಗೆ ಆಪರೇಶನ್‌ ಥಿಯೇಟರ್‌
ನಲ್ಲಿಯೇ ಕೆಲಸ ಮಾಡುತ್ತಿದ್ದೆ. ಈಗ ಒಂದು ವರ್ಷದಿಂದ ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ವರ್ಷ ಸ್ವಲ್ಪ ಭಯ ಮತ್ತು ಒತ್ತಡ ಇತ್ತು. ಆದರೆ ಕೆಲಸ ಮಾಡಿದ ಮೇಲೆ ನೆಮ್ಮದಿ ಸಿಗುತ್ತಿತ್ತು.

ಈ ಬಾರಿ ರೋಗಿಗಳ ಸಂಖ್ಯೆ ವಿಪರೀತವಾಗಿ ಬಿಟ್ಟಿದೆ. ಯಾರನ್ನು ನೋಡುವುದು ಯಾರನ್ನು ಬಿಡುವುದು ಎಂಬ ಪರಿಸ್ಥಿತಿ ಉಂಟಾಗಿದೆ. ಡ್ಯೂಟಿ ಮುಗಿಸಿ ಹೊರ ಬರುವ ಹೊತ್ತಿಗೆ ಕೈಕಾಲು ನೋವು ಬಂದಿರುತ್ತದೆ. ದೇವರೇ ಜನರನ್ನು ಈ ಸೋಂಕಿನಿಂದ ಪಾರು ಮಾಡು ಎಂದು ದಿನಾ ಬೇಡಿಕೊಳ್ಳುತ್ತಿದ್ದೇನೆ’ ಎಂದು ಕೊರೊನಾ ಸಂಕಷ್ಟವನ್ನು ವಿವರಿಸಿದರು.

‘ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶ ಸಿಕ್ಕಿದೆ. ಈ ಬಾರಿ ಆಮ್ಲಜನಕ ಬೆಡ್‌ಗಳನ್ನು ಹೆಚ್ಚಿಸದೇ ಇದ್ದರೆ, ಇನ್ನೊಂದು ಕೋವಿಡ್‌ ಆಸ್ಪತ್ರೆ ಮಾಡದೇ ಇದ್ದರೆ ಬಹಳ ಕಷ್ಟ. ಒಂದು ನಿಮಿಷವೂ ಸಮಯ ಇಲ್ಲದಂತೆ ಕೆಲಸ ಮಾಡುತ್ತಿದ್ದೇನೆ. ಅದರಿಂದ ಉಂಟಾಗುವ ಸುಸ್ತಿಗಿಂತಲೂ ಬೆಡ್‌ ಸಿಗದೇ ಪರದಾಡುವ ರೋಗಿಗಳನ್ನು ಕಂಡಾಗ ಉಂಟಾಗುವ ಮಾನಸಿಕ ಒತ್ತಡವೇ ಹೆಚ್ಚು’ ಎಂದು
ಅವರು ತಿಳಿಸಿದರು.

‘ಮನೆಯಲ್ಲಿ ಮಕ್ಕಳು ಇದ್ದಾರೆ. ಕೊರೊನಾದಿಂದ ಮನೆಗೆ ಕೆಲಸದವರೂ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಮನೆ ಕೆಲಸವನ್ನೂ ನಿರ್ವಹಿಸುತ್ತಿದ್ದೇನೆ. ದೇವರ ದಯದಿಂದ ಇದುವರೆಗೆ ನನಗೆ ಕೋವಿಡ್‌ ಬಂದಿಲ್ಲ’ ಎಂದು ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡರು.

ನಾವು ಧೀರರಾಗಿದ್ದರಷ್ಟೇ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಲು ಸಾಧ್ಯ

‘ಕೊರೊನಾ ಸೋಂಕಿತರ ಆರೈಕೆ ಮಾಡುವ ನಾವು ಎದೆಗುಂದಿದರೆ ರೋಗಿ ಪೂರ್ತಿ ಅಪ್‌ಸೆಟ್‌ ಆಗುತ್ತಾರೆ. ನಾವು ಧೈರ್ಯವಾಗಿದ್ದರೆ ಮಾತ್ರ ಸೋಂಕಿತರಿಗೆ ಧೈರ್ಯ ತುಂಬಲು ಸಾಧ್ಯವಾಗುತ್ತದೆ. ನಾನು ಎಂದೂ ಗಾಬರಿಗೊಂಡಿಲ್ಲ’ ಎಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಹರೀಶ್‌ ಎಸ್‌.ಎಲ್. ತಿಳಿಸಿದ್ದಾರೆ.

11 ವರ್ಷಗಳಿಂದ ಶುಶ್ರೂಷಕರಾಗಿರುವ ಹರೀಶ್‌ ಎಮರ್ಜೆನ್ಸಿ ವಾರ್ಡ್‌, ಮೆಡಿಸಿನ್‌ ವಾರ್ಡ್‌, ಸರ್ಜರಿ ವಾರ್ಡ್‌, ಗೈನಿಕ್‌ ಪೋಸ್ಟ್‌ ಆಪರೇಟಿವ್‌ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡು ಕೋವಿಡ್‌ ವಾರ್ಡ್‌ ಮಾಡಿದ ಮೇಲೆ ಐಸೊಲೇಶನ್‌ ವಾರ್ಡ್‌, ಸಾರಿ ವಾರ್ಡ್‌, ಮೆಡಿಸಿನ್‌ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಎರಡನೇ ಅಲೆ ಭೀಕರವಾಗಿದೆ. ವೇಗವಾಗಿ ಹರಡುತ್ತಿದೆ. ಇದು ಆಸ್ಪತ್ರೆಯಲ್ಲಿ ನಮ್ಮ ಮೇಲೆ ಒತ್ತಡ ಉಂಟು ಮಾಡಿದೆ. ನಾವು ಅದಕ್ಕೆಲ್ಲ ಜಗ್ಗದೇ ನಿರಂತರ ಕೆಲಸ ಮಾಡುತ್ತಿದ್ದೇವೆ. ನಾವೇ ಕೈಕಾಲು ಬಿಟ್ಟರೆ ರೋಗಿಗಳ ಕಥೆ ಏನು ಎಂಬ ಎಚ್ಚರದಿಂದ ಆಸ್ಪತ್ರೆಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್‌ನಲ್ಲಿ ನಮ್ಮ ಮನೆ ಇದೆ. ತಂದೆ ಹೃದ್ರೋಗಿ. ತಾಯಿ, ಅಣ್ಣನ ಕುಟುಂಬ ಎಲ್ಲ ಒಟ್ಟಿಗೆ ಇದ್ದೇವೆ. ನಾನು ಅವಿವಾಹಿತ. ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇದ್ದೇನೆ. ಕಳೆದ ವರ್ಷ ದಾವಣಗೆರೆಯಲ್ಲಿಯೇ ಕೊಠಡಿ ನೀಡಿದ್ದರು. ಮನೆಯವರ ಪ್ರೋತ್ಸಾಹದಿಂದ ಕೊರೊನಾ ವಾರ್ಡ್‌ನಲ್ಲಿ ಯಾವುದೇ ಅಳುಕಿಲ್ಲದೇ ಕೆಲಸ ಮಾಡಲು ಸಾಧ್ಯವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನನಗೂ ಕೊರೊನಾ ಬಂದಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT