ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾರದ ಅನುದಾನ: ಸಂಕಷ್ಟದಲ್ಲಿ ರೈತ ಉತ್ಪಾದಕ ಸಂಸ್ಥೆ

ಕೃಷಿಕರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶ; ಎಫ್‌ಪಿಒಗಿಲ್ಲ ಬಲ...
Published 8 ಜೂನ್ 2024, 7:20 IST
Last Updated 8 ಜೂನ್ 2024, 7:20 IST
ಅಕ್ಷರ ಗಾತ್ರ

ದಾವಣಗೆರೆ: ರೈತರು ಬೆಳೆಯುವ ಬೆಳೆಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಚಿಸಲಾದ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳಿಗೆ ಮೂರು ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಇಲ್ಲದ ಕಾರಣ ಎಫ್‌ಪಿಒಗಳು ಸೊರಗುತ್ತಿವೆ.

ಅನುದಾನ ಬಿಡುಗಡೆಯಾಗದ ಕಾರಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ನೀಡಲು ಆಗುತ್ತಿಲ್ಲ. ರೈತಸ್ನೇಹಿ ಕಾರ್ಯಕ್ರಮ ಜಾರಿ ಮಾಡಲೂ ಆಗುತ್ತಿಲ್ಲ. ವೇತನ ಸಿಗದ ಕಾರಣ ಕೆಲ ಸಿಬ್ಬಂದಿ ಕೆಲಸ ಬಿಟ್ಟು ಹೋಗಿದ್ದಾರೆ. ಇದರ ಪರಿಣಾಮ ಒಬ್ಬರು ಇಲ್ಲವೇ ಇಬ್ಬರೇ ಸಿಬ್ಬಂದಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ.

ಜಿಲ್ಲೆಯಲ್ಲಿ ಒಟ್ಟು 9 ರೈತ ಉತ್ಪಾದಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಯಾವುದಕ್ಕೂ ಅನುದಾನ ಬಿಡುಗಡೆ ಆಗದ್ದರಿಂದ ಸಂಸ್ಥೆ ನಿರ್ವಹಿಸುವುದೇ ಅಲ್ಲಿನ ಸಿಇಒಗಳಿಗೆ ಸಮಸ್ಯೆಯಾಗಿದೆ.

ಅನುದಾನ ಬಾರದ ಸಂಕಷ್ಟ ಸರಿದೂಗಿಸಿಕೊಳ್ಳಲು ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು, ಅದರಿಂದ ಬರುವ ಲಾಭದಲ್ಲೇ ಜೀವನ ನಿರ್ವಹಣೆ ಮಾಡುವಂತಾಗಿದೆ.

ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯದ ಹಲವೆಡೆ ಇದೇ ಸಮಸ್ಯೆ ಇದೆ ಎನ್ನುತ್ತಾರೆ ಎಫ್‌ಪಿಒ ಸಿಬ್ಬಂದಿ. ಮೊದಲು ಸಿಬ್ಬಂದಿ ವೇತನಕ್ಕಾಗಿಯೇ 6 ತಿಂಗಳಿಗೊಮ್ಮೆ ₹ 2.40 ಲಕ್ಷದವರೆಗೆ ಅನುದಾನ ನೀಡಲಾಗುತ್ತಿತ್ತು. ಅನುದಾನವಿಲ್ಲದೇ ಸಿಬ್ಬಂದಿ ಪರದಾಡುತ್ತಿದ್ದಾರೆ. 

ಏನಿದು ಎಫ್‌ಪಿಒ?: ಕೃಷಿಕರು ಹಾಗೂ ಗ್ರಾಹಕ ಸ್ನೇಹಿಯಾದ ಈ ಸಂಸ್ಥೆಗಳು ಕೃಷಿಯನ್ನು ಲಾಭದಾಯಕವಾಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಸಂಸ್ಥೆಗಳು ನೋಂದಣಿ ಸಮಯದಲ್ಲಿ 200ರಿಂದ 500 ರೈತ ಸದಸ್ಯರನ್ನು ಹೊಂದಿದ್ದು, ನಂತರ ಸದಸ್ಯತ್ವವನ್ನು 1,000ಕ್ಕೆ ಹೆಚ್ಚಿಸುವ ಸಾಮರ್ಥ್ಯ ಹೊಂದಿರಬೇಕು. ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಗಳಲ್ಲಿ ಕಡಿಮೆ ಸದಸ್ಯರನ್ನು ಹೊಂದಲು ಅವಕಾಶ ಇದೆ.

ಸದಸ್ಯ ರೈತರೇ ಷೇರುದಾರರೂ ಆಗುತ್ತಾರೆ. ಪ್ರತಿಯೊಬ್ಬ ಸದಸ್ಯರಿಂದ ₹ 1,000 ಷೇರು ಹಣ ಸಂಗ್ರಹಿಸಲಾಗುತ್ತದೆ. ಪ್ರತಿ ಸಂಸ್ಥೆಗೆ ಒಬ್ಬ ಸಿಇಒ ಹಾಗೂ ಇಬ್ಬರು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಸಂಸ್ಥೆಯ ಸಮನ್ವಯ ಮತ್ತು ಮೇಲ್ವಿಚಾರಣಾ ಘಟಕಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಉಪಾಧ್ಯಕ್ಷರಾಗಿರುತ್ತಾರೆ. ಜಂಟಿ ಕೃಷಿ ನಿರ್ದೇಶಕರು ಸಂಚಾಲಕ ಅಧಿಕಾರಿಯಾಗಿರುತ್ತಾರೆ. 

‘3 ವರ್ಷಗಳಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸಿಬ್ಬಂದಿಗೆ ವೇತನ ನೀಡಲು ಆಗುತ್ತಿಲ್ಲ. ಸದ್ಯ ರಸಗೊಬ್ಬರ, ಕೃಷಿ ಪರಿಕರ ಮಾರಾಟ ಮಾಡಿ ಸರಿ ಹೊಂದಿಸಿಕೊಳ್ಳುತ್ತಿದ್ದೇವೆ. ಮೊದಲು ಮೂವರು ಸಿಬ್ಬಂದಿ ಇದ್ದೆವು. ವೇತನ ವಿಳಂಬದ ಕಾರಣ ಇಬ್ಬರು ಕೆಲಸ ಬಿಟ್ಟು ಹೋದರು. ಹಲವು ತಿಂಗಳು ಒಬ್ಬನೇ ಕಾರ್ಯನಿರ್ವಹಿಸಿದೆ. ಈಗ ಒಬ್ಬ ಸಿಬ್ಬಂದಿ ಇದ್ದಾರೆ’ ಎಂದು ಸಮಸ್ಯೆ ಬಿಚ್ಚಿಟ್ಟರು ಜಗಳೂರಿನ ಎಫ್‌ಪಿಒದ ಸಿಇಒ ರುದ್ರೇಶ್‌ ಕೆ.ವಿ.

‘ವೇತನಕ್ಕಾಗುಷ್ಟೂ ಲಾಭವನ್ನು ಇಲ್ಲಿ ಪಡೆಯಲು ಆಗುವುದಿಲ್ಲ. ಆಗೀಗ ತಾಡಪಾಲು, ರಸಗೊಬ್ಬರ, ಕೃಷಿ ಯಂತ್ರಧಾರೆ ಪರಿಕರ ಮಾರಾಟ ಮಾಡುತ್ತಿದ್ದೇವೆ. ಆದರೂ ಹೆಚ್ಚು ಆದಾಯ ಸಿಗುತ್ತಿಲ್ಲ. ಪ್ರತಿವರ್ಷ ಆಡಿಟ್‌ ಮಾಡಿಸಲೆಂದೇ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಕೆವೈಸಿಯನ್ನು ತಪ್ಪಾಗಿ ಕಂಪನಿ ನಿಯಮ ಅನ್ವಯಿಸಿ ಮಾಡಿರುವುದರಿಂದ ವರ್ಷಕ್ಕೆ ₹ 1 ಲಕ್ಷ ಅದೇ ಖರ್ಚು ಬರುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ಸರ್ಕಾರದಿಂದ 3 ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದ ಬಹುತೇಕ ಎಫ್‌ಪಿಒಗಳಿಗೆ ಅನುದಾನ ಬಂದಿಲ್ಲ. ಇದೇ ಕಾರಣ ಅದರಿಂದ ಹೊರಬಂದಿದ್ದೇನೆ’ ಎಂದು ವಾಸ್ತವ ತೆರೆದಿಟ್ಟರು ಹೆಬ್ಬಾಳದ ವಿಶ್ವಬಂಧು ರೈತ ಉತ್ಪಾದಕ ಕಂಪನಿ ಸಿಇಒ ಆಗಿದ್ದ ರುದ್ರೇಶ್‌.

ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳವನ್ನು ಒಣಗಿಸುತ್ತಿರುವ ರೈತರು (ಸಂಗ್ರಹ ಚಿತ್ರ)
ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳವನ್ನು ಒಣಗಿಸುತ್ತಿರುವ ರೈತರು (ಸಂಗ್ರಹ ಚಿತ್ರ)
ಕೃಷಿ ಸಂಬಂಧಿತ ಚಟುವಟಿಕೆ ನಡೆಸಿದರೂ ಹೆಚ್ಚಿನ ಲಾಭವನ್ನು ನಿರೀಕ್ಷಿಸುವಂತಿಲ್ಲ. ಇದರಿಂದ ಕಂಪನಿ ನಡೆಸುವುದು ಕಷ್ಟವಾಗಿದೆ. ಅನುದಾನ ನೀಡಿದರೆ ಅನುಕೂಲವಾಗಲಿದೆ.
–ರುದ್ರೇಶ್‌ ಕೆ.ವಿ., ಎಫ್‌ಪಿಒ ಸಿಬ್ಬಂದಿ
ಎಫ್‌ಪಿಒ ಸಿಬ್ಬಂದಿಗೆ ಒಂದು ವರ್ಷದ ವೇತನ ಬಾಕಿ ಇದೆ. ಶೀಘ್ರ ಅನುದಾನ ಬರುವ ನಿರೀಕ್ಷೆ ಇದೆ. ಅನುದಾನ ಬಂದ ಕೂಡಲೇ  ನೀಡಲಾಗುವುದು.
–ಶ್ರೀನಿವಾಸ್‌ ಚಿಂತಾಲ್‌, ಜಂಟಿ ಕೃಷಿ ನಿರ್ದೇಶಕ

ರೈತರಿಗೆ ನೆರವು ನೀಡುವ ಎಫ್‌ಪಿಒ

ಬೆಳೆಯನ್ನು ರೈತರೇ ಮಾರಾಟ ಮಾಡಲು ಎಫ್‌ಪಿಒಗಳಲ್ಲಿ ಅವಕಾಶ ಇದೆ. ಬೆಳೆಯ ಮೌಲ್ಯವರ್ಧಿಸಿ ತಮ್ಮದೇ ಬ್ರಾಂಡ್‌ ಹೆಸರು ನೀಡಿ ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ರೈತರು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ‘ನಬಾರ್ಡ್‌’ ಸಾಲ ಸೌಲಭ್ಯ ಸಿಗಲಿದೆ. ರಸಗೊಬ್ಬರ ಕೀಟನಾಶಕದಂತಹ ರೈತರಿಗೆ ಅಗತ್ಯವಿರುವ ವಸ್ತುಗಳನ್ನು ಹೋಲ್‌ಸೇಲ್‌ ದರದಲ್ಲಿ ಉತ್ಪಾದಕರಿಂದ ನೇರವಾಗಿ ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT