ಕಣ್ಮನ ಸೆಳೆಯುವ ಬಹುರೂಪಿ ಗಣೇಶ

7
ವೈವಿಧ್ಯಮಯ ಸಾರ್ವಜನಿಕ ಗಣಪತಿ ದರ್ಶನಕ್ಕೆ ಜನಸಾಗರ

ಕಣ್ಮನ ಸೆಳೆಯುವ ಬಹುರೂಪಿ ಗಣೇಶ

Published:
Updated:
Deccan Herald

ದಾವಣಗೆರೆ: ನಗರದಲ್ಲಿ ಗುರುವಾರ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಿದ ಜನ ಶುಕ್ರವಾರ ಇಲಿ ಪಂಚಮಿಯನ್ನು ಆಚರಿಸಿದರು.

ಗುರುವಾರ ಬೆಳಿಗ್ಗೆ ಮನೆಗೆ ಗಣೇಶನನ್ನು ತಂದು, ವಿವಿಧ ಭಕ್ಷ್ಯ–ಬೋಜ್ಯಗಳನ್ನು ಸಿದ್ಧಪಡಿಸಿ ಪೂಜಿಸಿದರು. ನಗರದ ಹಲವು ಬೀದಿಗಳಲ್ಲೂ ಸಾರ್ವಜನಿಕ ಗಣಪತಿಯನ್ನು ಕೂರಿಸಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲಾಗಿದೆ. ವೈವಿಧ್ಯಮಯ ಸಾರ್ವಜನಿಕ ಗಣಪತಿಗಳನ್ನು ನೋಡಲು ಸಂಜೆಯಾಗುತ್ತಿದ್ದಂತೆ ಜನಸಾಗರವೇ ಹರಿದು ಬರುತ್ತಿದೆ.

ಕೊಡಗು ಪ್ರವಾಹ ಚಿತ್ರಣ: ನಗರದ ಪಿ.ಜೆ. ಬಡಾವಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವ ಪ್ರಿನ್ಸ್‌ ವಿನಾಯಕ ಗ್ರೂಪ್‌ನವರು ಪ್ರವಾಹ ಪೀಡಿತ ಕೊಡಗಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅರಣ್ಯ ನಾಶ ಮಾಡುವುದರಿಂದ ಪ್ರವಾಹ ಉಂಟಾಗಿ ಅನಾಹುತ ಸಂಭವಿಸುತ್ತದೆ ಎಂಬ ಸಂದೇಶವನ್ನು ಸಾರಿದ್ದಾರೆ.

ರೈತ ಗಣಪ: ಶ್ರೀ ನವಭಾರತ ವಿಘ್ನೇಶ್ವರ ಯುವಕರ ಸಂಘ ಜಿಲ್ಲಾ ಕ್ರೀಡಾಪಟುಗಳ ಸಂಘ ಹಾಗೂ ಸ್ಟೇಡಿಯಂ ಫ್ರೆಂಡ್ಸ್‌ನವರು ರೈತ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ನೇಗಿಲು ಹಿಡಿದ, ಒಕ್ಕಣಕೆ ಮಾಡುತ್ತಿರುವ, ಟ್ರ್ಯಾಕ್ಟರ್‌ ಹೊಡೆಯುತ್ತಿರುವ ಹೀಗೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಗಣಪತಿಯ ಮೂರ್ತಿಗಳನ್ನು ಜೋಡಿಸಿಟ್ಟಿದ್ದು ಗಮನ ಸೆಳೆಯುತ್ತಿದೆ.

ಯೋಧರಿಗೆ ನಮನ: ನಿಟುವಳ್ಳಿಯ ಲೇಬರ್‌ ಕಾಲೊನಿಯಲ್ಲಿ ಶ್ರೀ ಗುರು ದ್ರೋಣ ಕ್ರೀಡಾ ಸಮಿತಿ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗ ‘ಯೋಧರಿಗೆ ಒಂದು ನಮನ’ ಎಂಬ ಥೀಮ್‌ನಡಿ ಗಣಪತಿಯನ್ನು ಪ್ರತಿಷ್ಠಾಪಿಸಿದೆ. ಪರಮವೀರ ಚಕ್ರ, ಅಶೋಕ ಚಕ್ರ ಪಡೆದ ಹುತಾತ್ಮ ಯೋಧರ ಭಾವಚಿತ್ರಗಳನ್ನು ಹಾಕಲಾಗಿದೆ. ಕೃಷ್ಣ ರೂಪಿ ಗಣೇಶನ ಅಕ್ಕ ಪಕ್ಕದಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಲಾಗಿದೆ.

ಸ್ವಸ್ತಿಕ್‌ ಗ್ರೂಪ್‌ನಿಂದ ಲೇಸರ್‌ ಷೊ

ನಗರದ ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ ‘ಸ್ವಸ್ತಿಕ್‌ ಗ್ರೂಪ್‌’ನ 45ನೇ ವಿನಾಯಕ ಮಹೋತ್ಸವದಲ್ಲಿ ಲೇಸರ್‌ ಷೊ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ವಸ್ತಿಕ್‌ ಗ್ರೂಪ್‌ನ ಮುಖಂಡರಾದ ಶಿವರಾಂ ಶೆಟ್ಟಿ, ‘ಸೆ. 22ರವರೆಗೆ ನಿತ್ಯ ಸಂಜೆ 6ರಿಂದ 10ರವರೆಗೆ ಲೇಸರ್‌ ಷೊ ಹಮ್ಮಿಕೊಳ್ಳಲಾಗಿದೆ. ಕೊಲ್ಲಾಪುರದ ತಂಡದವರನ್ನು ಕರೆಸಲಾಗಿದ್ದು ₹ 3 ಲಕ್ಷ ವೆಚ್ಚವಾಗಿದೆ. ಬೀಮ್‌ ಷೊ, ಕೃಷ್ಣ ಮಹಿಮೆ, ಕರ್ನಾಟಕ ವೈಭವ ಹಾಗೂ ಭಾರತ ಸೇನೆ ಕೊಡಗು ಸಂತ್ರಸ್ತರಿಗೆ ನೆರವು ನೀಡಿದ ದೃಶ್ಯಾವಳಿಗಳನ್ನು ಲೇಸರ್‌ ಷೊನಲ್ಲಿ ತೋರಿಸಲಾಗುತ್ತದೆ. ಒಂದು ಪ್ರದರ್ಶನವು 8 ನಿಮಿಷ ಆಗಲಿದೆ’ ಎಂದು ಹೇಳಿದರು.

ಶಾಲಾ ಮಕ್ಕಳಿಗಾಗಿ ಸೆ. 17, 18 ಹಾಗೂ 19ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಲೇಸರ್‌ ಪ್ರದರ್ಶನ ಆಯೋಜಿಸಿದ್ದೇವೆ. ಆಸಕ್ತ ಶಾಲೆಯ ಮುಖ್ಯಸ್ಥರು ಜೀವನ್‌ (ಮೊ: 974215855) ಅಥವಾ ಆದಿತ್ಯ (ಮೊ: 9008577729) ಸಂಪರ್ಕಿಸಿ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಎಲ್ಲರಿಗೂ ಪ್ರವೇಶ ಉಚಿತವಾಗಿದೆ ಎಂದು ಅವರು ತಿಳಿಸಿದರು.

ಸ್ವಸ್ತಿಕ್‌ ಗ್ರೂಪ್‌ನ ಸದಸ್ಯರು ಹಾಗೂ ವರ್ತಕರಾದ ಎ.ಜಿ. ಮಂಜುನಾಥ್‌, ಪಿ. ರಾಜು ಗುಪ್ತ, ಶೇಷಾಚಲ ಶೆಟ್ಟಿ, ಎ.ಎಂ. ಕೃಷ್ಣ, ಮಹೇಶ್‌, ತಿಲಕ್‌, ವಿನಾಯಕ, ಪ್ರವೀಣ್‌, ಜೀವನ್‌, ರವಿ ಹಾಜರಿದ್ದರು.

ಪ್ಲಾಸ್ಟಿಕ್‌ ನಗರಕ್ಕೆ ಸ್ವಾಗತ...!

ಎಂ.ಸಿ.ಸಿ ‘ಎ’ ಬ್ಲಾಕ್‌ನಲ್ಲಿ ಹಿಂದೂ ಸೈ ಯುವ ವೇದಿಕೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ‘ಪ್ಲಾಸ್ಟಿಕ್‌ ನಗರಕ್ಕೆ ಸ್ವಾಗತ’ ಎಂಬ ಪ್ರದರ್ಶನವನ್ನು ಏರ್ಪಡಿಸಿದೆ. ಬಳಸಿ ಬೀಸಾಕಿದ ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಬಳಸಿ ನಿರ್ಮಿಸಿರುವ ಪ್ಲಾಸ್ಟಿಕ್‌ ನಗರ ಗಮನ ಸೆಳೆಯುತ್ತಿದೆ.

‘ನೀನೆ ಬಳಸಿದ ಪ್ಲಾಸ್ಟಿಕ್‌ ನಿನ್ನನ್ನೇ ಕುಕ್ಕಿತಲ್ಲೋ...’; ‘ಮಾನವ ನೀ ಸೃಷ್ಟಿಸಿದ ಪ್ಲಾಸ್ಟಿಕ್‌ ನಿನ್ನನ್ನೇ ಸರ್ವನಾಶ ಮಾಡುವ ಹಂತಕ್ಕೆ ತಲುಪಿದೆ’, ‘ಪ್ಲಾಸ್ಟಿಕ್‌ ಚೀಲದಲ್ಲಿ ತಿಂಡಿ ತಿನ್ನುವ ನೀನು, ನಾಳೆ ಪ್ಲಾಸ್ಟಿಕನ್ನೇ ತಿನ್ನುವ ಕಾಲ ಬಂದೀತು...’ ಎಂಬ ಘೋಷವಾಕ್ಯಗಳು ಕಣ್ತೆರೆಸುವಂತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !