ಗಾಂಜಾ ಮಾರಾಟ: 6 ಜನರ ಬಂಧನ

7

ಗಾಂಜಾ ಮಾರಾಟ: 6 ಜನರ ಬಂಧನ

Published:
Updated:
Deccan Herald

ದಾವಣಗೆರೆ: ನಗರದ ಜಿ.ಎಂ.ಐ.ಟಿ ಕಾಲೇಜು ಹಾಗೂ ಇತರ ಕಾಲೇಜಿನ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಸಿಇಎನ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಜಾದ್‌ನಗರದ ಸೈಯದ್‌ ಖುದ್ದೂಸ್‌ ಅಲಿಯಾಸ್‌ ಲಂಗಡು (22), ಗಾಂಧಿನಗರದ ಅಮಜದ್‌ ಖಾನ್‌ ಅಲಿಯಾಸ್‌ ಮುಕ್ಕಾ (25), ಬೇಸೂರು ರಸ್ತೆಯ ಮಂಗೂಸ್‌ (24), ಶಿವಾಜಿನಗರದ ಸೈಯದ್‌ ಚಾಂದ್‌ಪೀರ್‌ ಅಲಿಯಾಸ್ ಗೂಸ್‌, ಹುಬ್ಬಳ್ಳಿ ನಗರದ ಗುರಳಿಘಟ್ಟ ಗಂಜಿ ಓಣಿಯ ಗಿರಿಧರ ಅಲಿಯಾಸ್‌ ಗಿರೀಶ್‌ (27), ಚಿತ್ರದುರ್ಗ ಜಿಲ್ಲೆಯ ಸುಲ್ತಾನಿಪುರ ಗ್ರಾಮದ ಚಮನ್‌ಬಿ (50) ಬಂಧಿತ ಆರೋಪಿಗಳು. ₹ 4 ಸಾವಿರ ಮೌಲ್ಯದ 250 ಗ್ರಾಂ ಗಾಂಜಾ ಸೊಪ್ಪು, ಗಾಂಜಾ ಸೊಪ್ಪು ಮಾರಾಟಕ್ಕೆ ಬಳಸುತ್ತಿದ್ದ ಒಂದು ಆ್ಯಕ್ಟಿವ್‌ ಹೊಂಡಾ ಸ್ಕೂಟರ್‌ ಹಾಗೂ ನಾಲ್ಕು ಮೊಬೈಲ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯ ಸಿಪಿಐ ದೇವರಾಜ್‌ ಟಿ.ವಿ. ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಮಾನಸಿಕ ರೋಗಿ ಆತ್ಮಹತ್ಯೆ

ನಗರದ ಚೌಕಿಪೇಟೆಯ ಬೇವಿನಮರದ ಬಳಿ ಸೋಮವಾರ ರಾತ್ರಿ ಮಾನಸಿಕ ರೋಗಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೌಕಿಪೇಟೆಯ ಭರತ್‌ಕುಮಾರ್‌ ಜೈನ್‌ (57) ಮೃತರು. ಏಳೆಂಟು ವರ್ಷಗಳಿಂದ ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಬಸವಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಯುವಕ ಆತ್ಮಹತ್ಯೆ

ನಗರದ ನಿಜಲಿಂಗಪ್ಪ ಬಡಾವಣೆಯ ಗಸಗಸೆ ಪಾರ್ಕ್‌ನಲ್ಲಿ ಭಾನುವಾರ ವಿಷ ಸೇವಿಸಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾನೆ.

ಹರಪನಹಳ್ಳಿ ತಾಲ್ಲೂಕಿನ ಹಿರೇಮೇಗಳಗೌಡ ಗ್ರಾಮದ ಬಿ.ಎಂ. ಹರೀಷ್‌ (23) ಮೃತರು. ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಹರೀಷ್‌ಗೆ ಬುದ್ಧಿವಾದ ಹೇಳಿದ್ದರಿಂದ ಮನನೊಂದು ವಿಷ ಸೇವಿಸಿರಬಹುದು ಎಂದು ಬಡಾವಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್‌ ಡಿಕ್ಕಿ: ವೀಳ್ಯದೆಲೆ ವ್ಯಾಪಾರಿ ಸಾವು

ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ 13ರಲ್ಲಿ ಸೋಮವಾರ ಸಂಜೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ವೀಳ್ಯದೆಲೆ ವ್ಯಾಪಾರಿ ಈರಪ್ಪ (55) ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಸಾಮಾನು ತರಲು ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದ ಈರಪ್ಪ ಅವರಿಗೆ ಸುಣ್ಣಿಗೆರೆ ಗ್ರಾಮದ ನಾಗರಾಜ್‌ ಅವರು ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಈರಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯಲ್ಲಿ ಮಹಿಳೆ ಶವ ಪತ್ತೆ

ಹರಿಹರ ತಾಲ್ಲೂಕಿನ ಯಲವಟ್ಟಿ ಗ್ರಾಮದ ಬಳಿ ಭದ್ರಾ ಉಪ ನಾಲೆಯಲ್ಲಿ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ.

ನೀರಗಂಟಿಯೊಬ್ಬರು ಉಪ ಕಾಲುವೆ ಮೇಲೆ ಸಾಗುತ್ತಿದ್ದಾಗ ಶವ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಮಲೇಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !