ಮಂಗಳವಾರ, ಆಗಸ್ಟ್ 16, 2022
29 °C

ದಾವಣಗೆರೆ: ಉದ್ಯಾನಗಳ ಅಂದ; ಬೇಕಿದೆ ಕಾಯಕಲ್ಪ

ಸುಮಾ ಬಿ. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಉದ್ಯಾನದಲ್ಲಿ ಹಾಕಿರುವ ಸ್ಮಾರ್ಟ್‌ ಶೌಚಾಲಯ ಉಪಯೋಗಕ್ಕೆ ಬರುತ್ತಿಲ್ಲ. ವಾಯುವಿಹಾರಕ್ಕೆ ಬಂದವರು ಜಲಬಾಧೆ ಸಮಸ್ಯೆ ಎದುರಿಸುತ್ತಾರೆ. ಬಹುತೇಕರಿಗೆ ಅದರ ಬಳಕೆಯ ಬಗ್ಗೆಯೂ ತಿಳಿದಿಲ್ಲ. ಕಾಯಿನ್‌ ಹಾಕಿದರೆ ವಾಪಸ್‌ ಬರುತ್ತದೆ’…

ನಗರದ ಕಾಸಲ್‌ ಶ್ರೀನಿವಾಸಶ್ರೇಷ್ಠಿ ಉದ್ಯಾನದ ವಾಯುವಿಹಾರಿಯೊಬ್ಬರು ಈ ಸಮಸ್ಯೆ ಹೇಳಿಕೊಂಡರು. ನಗರದ ವಿವಿಧ ಉದ್ಯಾನಗಳಲ್ಲಿ ಅಳವಡಿಸಿರುವ ಸ್ಮಾರ್ಟ್‌ ಶೌಚಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಗರದಲ್ಲಿರುವ ಬಹುತೇಕ ಉದ್ಯಾನಗಳು ಇಂತಹ ಹಲವು ಸಮಸ್ಯೆಗಳ ಮೂಟೆಯನ್ನೇ ಹೊತ್ತಿವೆ.

72.12 ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತಾರವಾಗಿರುವ ನಗರವು 373 ಉದ್ಯಾನಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ನಗರದ ಅಂದ ಹೆಚ್ಚಿಸುವ ಉದ್ಯಾನಗಳು ಮನಸನ್ನು ಪ್ರಫುಲ್ಲಗೊಳಿಸುತ್ತವೆ. ಹೂವಿನ ಗಿಡಗಳು, ಹಸಿರಿನ ನೆಲಹಾಸು ಹೂಮನಸನ್ನು ಅರಳಿಸುತ್ತವೆ. ಆದರೆ, ನಗರದ ಹಲವು ಉದ್ಯಾನಗಳು ಇಂತಹ ಅನುಭೂತಿ ನೀಡುತ್ತಿಲ್ಲ.

ಉದ್ಯಾನದ ಒಳಗೆ ಕಾಲಿಡುತ್ತಿದ್ದಂತೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸ್ವಾಗತವೀಯುತ್ತವೆ. ಹೊಸ ದಾವಣಗೆರೆಯ ಹೃದಯ ಭಾಗದಲ್ಲಿರುವ ಕಾಸಲ್‌ ಶ್ರೀನಿವಾಸಶ್ರೇಷ್ಠಿ ಉದ್ಯಾನಕ್ಕೆ ಕಾಲಿಡುತ್ತಿದ್ದಂತೆ ಮದ್ಯದ ಬಾಟಲಿಗಳು ಕಣ್ಣಿಗೆ ರಾಚಿದವು. ರಾತ್ರಿ ಸಮಯದಲ್ಲಿ ಉದ್ಯಾನ ಕುಡುಕರ ತಾಣವಾಗುತ್ತದೆ ಎಂಬ ಕುರುಹನ್ನು ಅದು ಸಾರುತ್ತಿತ್ತು.

ಚಿಗಟೇರಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯ ಉದ್ಯಾನದಲ್ಲಿ ಅಳವಡಿಸಿರುವ ಧ್ವನಿವರ್ಧಕಗಳು ಅಲ್ಲಲ್ಲಿ ಮುರಿದುಬಿದ್ದಿವೆ. ಸಂಗೀತ ಹೊರಹೊಮ್ಮಿಸಬೇಕಾದ ಅವು ಧ್ವನಿ ಕಳೆದುಕೊಂಡಿವೆ. ಮುರಿದ ಆಟಿಕೆಗಳು, ಮುರಿದ ಕುರ್ಚಿಗಳು ಉದ್ಯಾನದ ಅಂದಗೆಡಿಸಿವೆ. ಆಸ್ಪತ್ರೆಯಲ್ಲಿನ ಒಳರೋಗಿಗಳ ಸಂಬಂಧಿಗಳು ಸಮಯ ಕಳೆಯಲೆಂದು ಉದ್ಯಾವನ್ನು ಎಡತಾಕುತ್ತಾರೆ. ಆದರೆ, ಅಲ್ಲಲ್ಲಿ ಬಿದ್ದ ಕಸದ ರಾಶಿಯ ಮಧ್ಯೆಯೇ ಸಮಯ ಕಳೆಯುವ ಸ್ಥಿತಿ ಇದೆ.

ಇದೇ ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ವಿಶ್ವೇಶ್ವರಯ್ಯ ಪ್ರತಿಮೆ ಹಾಗೂ ಉದ್ಯಾನದ ಆವರಣ ದುರಸ್ತಿಗೆ ₹ 2 ಲಕ್ಷ ವೆಚ್ಚ ಮಾಡಲಾಗಿದೆ. ಮಕ್ಕಳ ಆಟಿಕೆಗಳನ್ನು ಹೊಸದಾಗಿ ಅಳವಡಿಸಿರುವುದು ಬಿಟ್ಟರೆ ದುರಸ್ತಿಯಾದ ಯಾವ ಕುರುಹೂ ಅಲ್ಲಿ ಕಾಣಿಸುತ್ತಿಲ್ಲ.

ಚಿಗಟೇರಿ ಆಸ್ಪತ್ರೆಯ ಮುಂಭಾಗದ ಉದ್ದಕ್ಕೂ ಇರುವ ಸಣ್ಣ ಸಣ್ಣ ಪಾರ್ಕ್‌ಗಳಲ್ಲಿ ರೋಗಿಗಳ ಸಂಬಂಧಿಗಳು ಕುಳಿತು ಊಟ ಮಾಡುವರು. ಆದರೆ, ಯಾವ ಉದ್ಯಾನಗಳೂ ಕುಳಿತುಕೊಳ್ಳಲು, ಊಟ ಮಾಡಲು ಯೋಗ್ಯವಾಗಿಲ್ಲ. ಉದ್ಯಾನದ ತುಂಬ ಕಳೆ ಗಿಡಗಳು ಬೆಳೆದಿವೆ. ಹಂದಿ, ನಾಯಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿವೆ. ಬಯಲು ಶೌಚಾಲಯವಾಗಿಯೂ ಉದ್ಯಾನಗಳು ಬಳಕೆಯಾಗುತ್ತಿವೆ!

ನಗರದ ಬಹುತೇಕ ಮುಖ್ಯರಸ್ತೆ ಬದಿಗಳಲ್ಲಿ ಸಣ್ಣ ಸಣ್ಣ ಪಾರ್ಕ್‌ ನಿರ್ಮಿಸಲಾಗಿದೆ. ಆದರೆ, ಅವೆಲ್ಲವೂ ನಿರ್ವಹಣೆ ಕೊರತೆ ಎದುರಿಸುತ್ತಿವೆ. ಉದ್ಯಾನಗಳ ತುಂಬ ಪಾರ್ಥೇನಿಯಂ, ಲಂಟಾನ, ಮುಳ್ಳುಗಿಡಗಳು ಬೆಳೆದಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಸಿಬ್ಬಂದಿ ಕೊರತೆ ಇದೆ. ಸಾರ್ವಜನಿಕರು ಉದ್ಯಾನದಲ್ಲಿ ಅನಗತ್ಯ ಗಿಡಗಳು ಬೆಳೆದಿರುವ ಮಾಹಿತಿ ನೀಡಿದರೆ ಸಿಬ್ಬಂದಿ ಕಳುಹಿಸಿ ಸ್ವಚ್ಛಗೊಳಿಸಲಾಗುವುದು’ ಎನ್ನುವರು. ನಗರದ ಉದ್ಯಾನಗಳ ನಿರ್ವಹಣೆಗೆ ಇರುವುದು 19 ಸಿಬ್ಬಂದಿ ಮಾತ್ರ.

ಎಂಸಿಸಿ ‘ಎ’ ಬ್ಲಾಕ್‌ನ ಮುಖ್ಯರಸ್ತೆ ಬದಿಯಲ್ಲಿರುವ ‘ಬಸವೇಶ್ವರ ಪತ್ರೆವನ’ ಆಸ್ತಿಕರಿಗೆ ಭಕ್ತಿ ಭಾವ ಮೂಡಿಸುತ್ತದೆ. ದೇವರ ಪೂಜೆಗೆ ಅಗತ್ಯವಿರುವ ಎಲ್ಲ ಬಗೆಯ ಮರಗಳು ಈ ಉದ್ಯಾನದಲ್ಲಿವೆ. ಆದರೆ, ಒಳಗಡೆ ಕಾಲಿಡಲು ಸಾರ್ವಜನಿಕರು ಭಯಪಡುತ್ತಾರೆ. ಕಾಡಿನ ರೀತಿ ಎಲ್ಲೆಂದರಲ್ಲಿ ಗಿಡಗಳು ಬೆಳೆದುಕೊಂಡಿವೆ.

ಉದ್ಯಾನದಲ್ಲಿ ನೀರಿನ ಟ್ಯಾಂಕ್‌: ನಗರದ ಬಹುತೇಕ ಉದ್ಯಾನಗಳಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಕೆಲವೆಡೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಉದ್ಯಾನದಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣ ವಾಯುವಿಹಾರಿಗಳಿಗೆ ಸಹ್ಯವೆನಿಸುತ್ತಿಲ್ಲ. ಕೆಲವೆಡೆ ಉದ್ಯಾನದಲ್ಲಿನ ಮರಗಳನ್ನು ಕಡಿದು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ. ಇದಕ್ಕೆ ಪರಿಸರ ಪ್ರೇಮಿಗಳ ಆಕ್ಷೇಪವಿದೆ.

ಕೆಲ ಉದ್ಯಾನಗಳಲ್ಲಿ ಅಳವಡಿಸಿರುವ ಜಿಮ್‌ ಉಪಕರಣಗಳನ್ನು ಸಾರ್ವಜನಿಕರು ತಕ್ಕಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಉದ್ಯಾನಗಳಲ್ಲಿರುವ ಗ್ರಂಥಾಲಯಗಳೂ ಓದುಗರ ದಾಹ ತಣಿಸುತ್ತಿವೆ.

ನಗರದ ಕೆಲ ಉದ್ಯಾನಗಳು ಹಸಿರಿನಿಂದ ಕಂಗೊಳಿಸುತ್ತ ಜನರನ್ನು ತನ್ನತ್ತ ಸೆಳೆಯುತ್ತಿವೆ. ವಿದ್ಯಾನಗರದ ಉದ್ಯಾನ, ಕೆಟಿಜೆ ನಗರದಲ್ಲಿರುವ ಡಾಂಗೆ ಪಾರ್ಕ್‌, ವಿನೋಬ ನಗರ ಪಾರ್ಕ್‌, ಕಾಶಲ್‌ ಶ್ರೇಷ್ಠಿ ಉದ್ಯಾನ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿವೆ. ಈ ಉದ್ಯಾನಗಳ ರೀತಿಯೇ ಇತರ ಪಾರ್ಕ್‌ಗಳತ್ತಲೂ ಪಾಲಿಕೆ ಗಮನಹರಿಸಲಿ ಎಂಬುದು ವಾಯುವಿಹಾರಿಗಳ ಧ್ವನಿ.

ಮೂರು ತಾಲ್ಲೂಕು ಕೇಂದ್ರಗಳಲ್ಲಿಲ್ಲ ಉದ್ಯಾನ
-ಎಚ್.ವಿ.ನಟರಾಜ್

ಏಷ್ಯಾದ 2ನೇ ಅತಿದೊಡ್ಡ ನೀರಾವರಿ ಜಲಾಶಯ ಹೊಂದಿರುವ ಹೆಗ್ಗಳಿಕೆ ದಾವಣಗೆರೆ ಜಿಲ್ಲೆಯದ್ದು. ಆದರೆ, ಜಿಲ್ಲೆಯ ಮೂರು ತಾಲ್ಲೂಕು ಕೇಂದ್ರಗಳಲ್ಲಿ ಉದ್ಯಾನಗಳಿಲ್ಲ. ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕಿನ ಜನರಿಗೆ ಉದ್ಯಾನದ ಅಂದ ಸವಿಯುವ ಭಾಗ್ಯ ಇನ್ನೂ ಲಭ್ಯವಾಗಿಲ್ಲ.

ಚನ್ನಗಿರಿ ಪಟ್ಟಣದಲ್ಲಿಲ್ಲ ಉದ್ಯಾನ: ಚನ್ನಗಿರಿ ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯಿತಿಗಳಿದ್ದು, ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಉದ್ಯಾನ ಬಿಟ್ಟರೆ ಪಟ್ಟಣ ಸೇರಿದಂತೆ ಬೇರೆ ಎಲ್ಲಿಯೂ ಉದ್ಯಾನಗಳು ಇಲ್ಲ.

ಪಟ್ಟಣಿಗರು ಬೆಳಿಗ್ಗೆ ರಸ್ತೆ ಬದಿಯಲ್ಲೇ ವಾಯುವಿಹಾರಕ್ಕೆ ಹೋಗುವರು. ಕೆಲವರು ಪಟ್ಟಣದೊಳಗೆ ಇರುವ ತಾಲ್ಲೂಕು ಕ್ರೀಡಾಂಗಣದಲ್ಲಿ ವಾಯುವಿಹಾರವನ್ನು ಮುಗಿಸುವರು.

ಪಟ್ಟಣದಲ್ಲಿ ಹೊಸ ಬಡಾವಣೆಗಳನ್ನು ಮಾಡಿ ಅಲ್ಲಿ ಉದ್ಯಾನ, ಅಂಗನವಾಡಿ ಮುಂತಾದವುಗಳನ್ನು ನಿರ್ಮಿಸಲು ಪುರಸಭೆಯವರು ಜಾಗ ಮೀಸಲಿಟ್ಟರೂ ಇದುವರೆಗೆ ಎಲ್ಲಿಯೂ ಉದ್ಯಾನ ನಿರ್ಮಾಣವಾಗಿಲ್ಲ. ತಾಲ್ಲೂಕಿನ ನಲ್ಲೂರು ಗ್ರಾಮದ ಹೊರ ವಲಯದಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನ ನಿರ್ಮಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಈ ಉದ್ಯಾನವೂ ಬಾಗಿಲು ತೆರೆದಿಲ್ಲ. ‘ಪಟ್ಟಣದಲ್ಲಿ ಉದ್ಯಾನ ನಿರ್ಮಾಣ ಮಾಡಲು ಜಾಗದ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಆ ಕಾರಣದಿಂದಾಗಿ ಉದ್ಯಾನ  ನಿರ್ಮಿಸಲು ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಅಗತ್ಯ ಜಾಗವನ್ನು ಗುರುತಿಸಿ ಉದ್ಯಾನ ನಿರ್ಮಾಣ ಮಾಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಐ.ಬಸವರಾಜ್ ತಿಳಿಸಿದರು.

ಉದ್ಯಾನದಲ್ಲಿ ಮಸೀದಿ, ಮಂದಿರ
-ಆರ್‌. ರಾಘವೇಂದ್ರ
ಹರಿಹರ:
ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಹರಿಹರ ನಗರದಲ್ಲಿ ಸುವ್ಯವಸ್ಥಿತ ಉದ್ಯಾನಗಳಿಲ್ಲ. 

ಇಲ್ಲಿನ ಬಹುತೇಕ ಉದ್ಯಾನಗಳಲ್ಲಿ ಖಾಸಗಿ ಶಾಲೆ, ವಾಣಿಜ್ಯ ಸಂಕೀರ್ಣ, ಸಮುದಾಯ ಭವನ ಮಸೀದಿ ಹಾಗೂ ಮಂದಿರಗಳು ನಿರ್ಮಾಣವಾಗಿವೆ.

ಕಟ್ಟಡಗಳನ್ನು ತೆರವುಗೊಳಿಸಿ ಉದ್ಯಾನಗಳ ಅಭಿವೃದ್ಧಿಗೆ ಅಧಿಕಾರಿಗಳು ಗಮನ ಹರಿಸಬೇಕು. ಸುಸಜ್ಜಿತ ಉದ್ಯಾನ ನಿರ್ಮಿಸುವಲ್ಲಿ ಸ್ಥಳಿಯ ಆಡಳಿತ ವಿಫಲವಾಗಿದೆ ಎಂದು ನಿವಾಸಿ ರಾಮಚಂದ್ರಪ್ಪ ದೂರಿದರು.

‘ನಗರದ ವಿದ್ಯಾನಗರದ ಉದ್ಯಾನ ಅಭಿವೃದ್ಧಿಗೆ ₹ 50 ಲಕ್ಷ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಲೇಬರ್‍ ಕಾಲೊನಿ ಉದ್ಯಾನ ಅಭಿವೃದ್ಧಿಗೆ ₹ 50 ಲಕ್ಷ ಮಂಜೂರಾಗಿದ್ದು, ಜಿಲ್ಲಾಧಿಕಾರಿ ಅನುಮೋದನೆ ನಂತರ, ಟೆಂಡರ್ ಪ್ರಕ್ರಿಯೆ ನಡೆಯಲಿದೆ’ ಎಂದು ಧೂಡಾ ಸದಸ್ಯ ರಾಜು ರೋಖಡೆ ಮಾಹಿತಿ ನೀಡಿದರು.

ನಗರದಲ್ಲಿ 10ಕ್ಕೂ ಹೆಚ್ಚು ಸರ್ಕಾರಿ ಉದ್ಯಾನಗಳಿದ್ದು, ಬಹುತೇಕ ಒತ್ತುವರಿ ಹಾಗೂ ನಿರ್ವಹಣೆ ಕೊರೆತೆಯಿಂದ ಹಾಳಾಗಿವೆ.

ಉದ್ಯಾನಗಳಲ್ಲಿ ಸ್ವಚ್ಛತೆ ಮರೀಚಿಕೆ
-ವಿಶ್ವನಾಥ ಡಿ.
ಹರಪನಹಳ್ಳಿ:
ನಗರದ ಬಹುತೇಕ ಉದ್ಯಾನಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಉಚ್ಚಂಗೆಮ್ಮ ದೇವಿ ಗುಡ್ಡದಲ್ಲಿ ಸ್ಥಾಪಿಸಿರುವ ಸಾಲುಮರದ ತಿಮ್ಮಕ್ಕ ಡ್ರೀಮ್‍ ಪಾರ್ಕ್‌ ನಗರದಲ್ಲಿಯೇ ದೊಡ್ಡ ಉದ್ಯಾನ. ಇಲ್ಲಿನ ಸಿಮೆಂಟ್‍ ಕಲಾಕೃತಿಗಳು ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಬಲಿಯಾಗಿವೆ. ನಟರಾಜ ಬಡಾವಣೆಯಲ್ಲಿರುವ ಜೆಸಿ ಉದ್ಯಾನ, ಹಿಪ್ಪಿತೋಟದ ಉದ್ಯಾನ, ಕೆಎಚ್‍ಬಿ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಾರ್ಕ್‍ಗಳಲ್ಲಿ ಆಟಿಕೆ, ವ್ಯಾಯಾಮ ಸಾಮಾಗ್ರಿಗಳು ಜನೋಪಯೋಗಿ ಎನಿಸುತ್ತಿವೆ. ಐಬಿ ವೃತ್ತದ ಉದ್ಯಾನ ಜನರಿಂದ ಸದಾ ತುಂಬಿರುತ್ತದೆ. ಈ ಪಾರ್ಕ್‍ಗಳಲ್ಲಿ ಪೌರಕಾರ್ಮಿಕರು ಆಗಾಗ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ.

ಗಿಡ, ಮರಗಳ ಸಂಖ್ಯೆ ಹೆಚ್ಚಿರುವ ಆಚಾರ್ಯ ಬಡಾವಣೆ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ಕೆಎಚ್‍ಬಿ ಬಡಾವಣೆ, ಕಾಶೀನಾಥ ಅಪ್ಪಣ್ಣೇಶ್ವರ ಸಮೀಪ, ಹಳೆ ಕೆಎಚ್‍ಬಿ ಬಡಾವಣೆಯ ಉದ್ಯಾನಗಳು ಕಸದಿಂದ ತುಂಬಿವೆ.

ಅಭಿವೃದ್ಧಿ ಪಡಿಸದ ಪಾರ್ಕ್‍ಗಳು: ನಗರ ಪ್ರದೇಶ ಹೊಸಪೇಟೆ ರಸ್ತೆ, ಕೊಟ್ಟೂರು ರಸ್ತೆ, ಹಡಗಲಿ ರಸ್ತೆ, ಹರಿಹರ ರಸ್ತೆ ಹೀಗೆ ನಾಲ್ಕು ದಿಕ್ಕುಗಳಲ್ಲಿ ಬೆಳೆಯುತ್ತಿದೆ. ಹೊಸ ಹೊಸ ಬಡಾವಣೆಗಳಿಗೆ ಇಲ್ಲಿಯ ತಾಲ್ಲೂಕು ಆಡಳಿತ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸುತ್ತದೆ, ಪುರಸಭೆ ಡೋರ್‍ ನಂಬರ್‌ಗಳನ್ನು ಕೊಡುತ್ತಿದೆ. ಆದರೆ, ಪಾರ್ಕ್‍ಗಳಿಗೆ ಜಾಗ ಮಾತ್ರ ತೋರಿಸುವ ನಿವೇಶನದ ಮಾಲೀಕರು, ಪಾರ್ಕ್‍ಗಳನ್ನು ಅಭಿವೃದ್ಧಿ ಪಡಿಸದೇ ಹಾಗೆಯೇ ಹಸ್ತಾಂತರಿಸುತ್ತಾರೆ. ಹೊಸ ಬಡಾವಣೆಗಳಲ್ಲಿ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲು ಪುರಸಭೆಗೆ ಹೆಚ್ಚಿನ ಹೊರೆ ಆಗುತ್ತದೆ ಎಂಬುದು ಸಾರ್ವಜನಿಕರ ಅಭಿಮತ.

ದಾಖಲೆಯಲ್ಲಿ 22 ಉದ್ಯಾನ, ಇರುವುದು ಒಂದೆರಡು!
-ಡಿ.ಶ್ರೀನಿವಾಸ್
ಜಗಳೂರು: ಪ್ರತಿ ವರ್ಷ ಇಲ್ಲಿನ ಪಟ್ಟಣ ಪಂಚಾಯಿತಿಗೆ ಕೋಟಿಗಟ್ಟಲೆ ಅನುದಾನ ಹರಿದು ಬರುತ್ತಿದ್ದರೂ ಒಂದೇ ಒಂದು ವಿಶಾಲವಾದ ಹಾಗೂ ಸುಂದರ ಉದ್ಯಾನ ನಿರ್ಮಿಸಲು ಸಾಧ್ಯವಾಗಿಲ್ಲ.

ಪಟ್ಟಣ ಪಂಚಾಯಿತಿ ದಾಖಲೆಗಳಲ್ಲಿ ಅಧಿಕೃತವಾಗಿ 22 ಉದ್ಯಾನಗಳಿವೆ. ಆದರೆ, ವಾಸ್ತವದಲ್ಲಿ ಒಂದೆರೆಡು ಬಿಟ್ಟರೆ ಉಳಿದ ಉದ್ಯಾನಗಳನ್ನು ದುರ್ಬೀನು ಹಾಕಿ ಹುಡುಕಬೇಕು ಎನ್ನುವುದು ಜನರ ದೂರು. ಅಣಬೆಗಳಂತೆ ತಲೆ ಎತ್ತಿರುವ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಉದ್ಯಾನ ಹಾಗೂ ಸುಸಜ್ಜಿತ ರಸ್ತೆ, ಮೂಲಸೌಕರ್ಗಳಿಲ್ಲ ಎಂಬ ಕಾರಣಕ್ಕೆ ಪಟ್ಟಣದ 14 ಬಡಾವಣೆಗಳನ್ನು ಅನಧಿಕೃತ ಎಂದು ನಗರಾಭಿವೃದ್ಧಿ ಇಲಾಖೆ ಘೋಷಿಸಿದೆ.

ವಿದ್ಯಾನಗರದಲ್ಲಿ ಒಂದು ಚಿಕ್ಕ ಗಾತ್ರದ ಉದ್ಯಾನ ಇದ್ದು, ಒಂದಿಷ್ಟು ಗಿಡ ಮರಗಳು ಅಲ್ಲಿ ಕಂಗೊಳಿಸುತ್ತಿವೆ. ಚಿಕ್ಕ ವಾಕಿಂಗ್ ಪಾತ್ ಹಾಗೂ ಹಲವು ಕಲಾಕೃತಿಗಳನ್ನು ಅಲ್ಲಿ ಕಾಣಬಹುದು. ಆದರೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಇತ್ತೀಚೆಗೆ ಈ ಉದ್ಯಾನ ಸೊರಗಿಹೋಗಿದೆ.

ನಟರಾಜ್ ಟಾಕೀಸ್ ಹಿಂಭಾಗದಲ್ಲಿರುವ ಲಕ್ಷ್ಮಿವೆಂಕಟೇಶ್ವರ ಬಡಾವಣೆಯಲ್ಲಿರುವ ಸಣ್ಣ ಉದ್ಯಾನದಲ್ಲಿ ಹೊಂಗೆ, ಬೇವು ಮುಂತಾದ ಗಿಡಗಳು ಬೆಳೆದು ಹಸಿರು ವಾತಾವರಣ ನಿರ್ಮಾಣವಾಗಿದೆ. ಈ ಎರಡು ಉದ್ಯಾನಗಳನ್ನು ಹೊರತುಪಡಿಸಿದರೆ ಗಂಗಾಂಭಿಕ ಬಡಾವಣೆ, ಚಳ್ಳಕೆರೆ ರಸ್ತೆ ವೃತ್ತದ ಉದ್ಯಾನಗಳು ಹೆಸರಿಗಷ್ಟೇ ಇವೆ. ಯಾವುದೇ ಅಭಿವೃದ್ಧಿ ಅಥವಾ ಮೂಲ ಸೌಕರ್ಯ ಇಲ್ಲಿ ಕಾಣಲು ಸಾಧ್ಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು