ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಗ್ರಂಥಾಲಯಕ್ಕೆ ಹೈ-ಟೆಕ್ ಸ್ಪರ್ಶ

ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ಮಾಹಿತಿ ಕೇಂದ್ರ
Last Updated 5 ಏಪ್ರಿಲ್ 2022, 5:34 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲಾಗಿದ್ದು, ಜ್ಞಾನಾಸಕ್ತರನ್ನು ಆಕರ್ಷಿಸುತ್ತಿದೆ.

‘ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ’, ‘ನೀವು ಬಯಸಿದ್ದು ನಿಮಗೆ ಸಿಗುತ್ತದೆ’ ಎಂಬ ಉಕ್ತಿಗಳ ಗೋಡೆ ಬರಹಗಳು ಗಮನಾರ್ಹವಾಗಿವೆ. ಆಕರ್ಷಕ ಬಣ್ಣದ ಚಿತ್ತಾರಗಳು ಜ್ಞಾನಾರ್ಜನೆ ಮಹತ್ವವನ್ನು ಸಾರುವಂತಿವೆ.

ದುಂಡು ಮೇಜಿನ ಸುತ್ತ ಕುರ್ಚಿಗಳನ್ನು ಸಜ್ಜುಗೊಳಿಸಲಾಗಿದೆ. ತ್ವರಿತ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಎರಡು ಕಂಪ್ಯೂಟರ್‌ಗಳನ್ನು ಸ್ಥಾಪಿಸಲಾಗಿದೆ. ನಿಯತಕಾಲಿಕೆಗಳ ಜತೆಯಲ್ಲಿ ವಿವಿಧ ಪುಸ್ತಕಗಳ ಭಂಡಾರವೇ ಇದೆ. ಸದ್ಯ 2,500 ಪುಸ್ತಕಗಳು ಗ್ರಂಥಾಲಯದಲ್ಲಿವೆ. ಇದರಲ್ಲಿ ಅನೇಕ ಉಪಯುಕ್ತ ಪುಸ್ತಕಗಳಿವೆ. ಇಂದಿನ ಯುವ ಜನಾಂಗದ ಬೇಡಿಕೆಯಂತೆ ಪುಸ್ತಕಗಳನ್ನು ಖರೀದಿಸಲು ಚಿಂತನೆ ನಡೆದಿದೆ ಎನ್ನುತ್ತಾರೆ ಗ್ರಂಥಾಲಯ ಮೇಲ್ವಿಚಾರಕ ಟಿ.ಎನ್. ರೇವಣ್ಣ.

ನಿತ್ಯ ಗ್ರಂಥಾಲಯದಲ್ಲಿ ವಿವಿಧ ಬಗೆಯ ಪುಸ್ತಕಗಳನ್ನು ಓದುತ್ತಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ವಿನೂತನ ಪುಸ್ತಕಗಳ ಅವಶ್ಯಕತೆ ಇದೆ. ನಾಗರಿಕ ಸೇವಾ ಪರೀಕ್ಷೆಗೆ ಒತ್ತು ನೀಡುವ ಪ್ರಚಲಿತ ವಿದ್ಯಾಮಾನಗಳು, ಭೂಗೋಳ, ಸಂವಿಧಾನ, ಸಾಮಾನ್ಯ ಜ್ಞಾನ, ಕನ್ನಡ ಭಾಷಾ ವ್ಯಾಕರಣಕ್ಕೆ ಸಂಬಂಧಪಟ್ಟ ಪುಸ್ತಕಗಳ ಅವಶ್ಯಕತೆ ಇದೆ. ಶೀಘ್ರ ಪುಸ್ತಕಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ ಗ್ರಾಮದ ಯುವಕರು.

ಜಾಗತಿಕ ಬದಲಾವಣೆಯ ವೇಗೋತ್ಕರ್ಷ ವೃದ್ಧಿಸುತ್ತಲೇ ಇದೆ. ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ನಾಗಾಲೋಟಕ್ಕೆ ಸರಿಸಾಟಿಯಾಗಿ ಪ್ರಚಲಿತ ವಿದ್ಯಮಾನಗಳು, ತಾರ್ಕಿಕ ನಿಲುವುಗಳು, ವೈಚಾರಿಕ ಚಿಂತನೆಗಳು, ಆರ್ಥಿಕ ನೀತಿ ಮೇಲ್ದರ್ಜೆಗೇರಲೇಬೇಕು. ಸಂಪನ್ಮೂಲಗಳ ಕ್ರೋಡೀಕರಣದಿಂದ ಬೌದ್ಧಿಕ ಸಾರ್ಮರ್ಥ್ಯವೂ ಯುವಕರಲ್ಲಿ ಬೇರೂರಬೇಕು. ಈ ನಿಟ್ಟಿನಲ್ಲಿ ಈಚೆಗೆ ಗ್ರಂಥಾಲಯಗಳಿಗೆ ಹೈಟೆಕ್ ಸ್ಪರ್ಶ ನೀಡಿರುವುದು ಯುವಕರಲ್ಲಿ ಪ್ರಚಲಿತ ವಿಷಯಗಳತ್ತ ಆಸಕ್ತಿ ಕೆರಳಿಸಲು ಅನುಕೂಲವಾಗಿವೆ ಎಂದು ಗ್ರಂಥಾಲಯಕ್ಕೆ ಬರುವ ಓದುಗರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

* ಸದಾ ಓದುವ ಹವ್ಯಾಸದಿಂದ ಪದವಿಯಲ್ಲಿ ರ‍್ಯಾಂಕ್‌ ಗಳಿಸಿದ್ದೆ. ಪೂರಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಹಾಗಾಗಿ ಸರ್ಕಾರಿ ಶಾಲಾ ಶಿಕ್ಷಕನಾಗಿ ಆಯ್ಕೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಶಸ್ಸಿಗೆ ಗ್ರಂಥಾಲಯಗಳು ಪೂರಕ.

-ಮಾರುತಿ, ಶಿಕ್ಷಕ

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ₹ 25 ಸಾವಿರ ಮೌಲ್ಯದ ಪುಸ್ತಕಗಳನ್ನು ಸದ್ಯದಲ್ಲಿಯೇ ಖರೀದಿಸಲಾಗುವುದು. ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಪುಸ್ತಕ ಪೂರೈಕೆಗೆ ಗಮನ ಹರಿಸಲಾಗುವುದು.

-ಶಿಲ್ಪಾ ಮರುಳ ಸಿದ್ಧೇಶ್, ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಸಂತೇಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT