ಸೋಮವಾರ, ಜನವರಿ 20, 2020
19 °C
ಆಸ್ಪತ್ರೆ, ವಸತಿ ಶಾಲೆಗೆ ಭೇಟಿ ನೀಡಿದ ಮಹಾಂತೇಶ ಬೀಳಗಿ

ಜಿಲ್ಲಾಧಿಕಾರಿಯಿಂದ ಮಕ್ಕಳಿಗೆ ವ್ಯಾಕರಣ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಯಕೊಂಡ: ಇಲ್ಲಿನ ವಿದ್ಯಾರ್ಥಿನಿಲಯಗಳಿಗೆ, ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶುಕ್ರವಾರ ದಿಢೀರ್ ಭೇಟಿ ನೀಡಿದರು.

ಮೊರಾರ್ಜಿ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಇಂಗ್ಲಿಷ್ ವ್ಯಾಕರಣದ ಕಲಿಕೆ ಗಮನಿಸಿದರು. ವ್ಯಾಕರಣ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದುದನ್ನು ಕಂಡು ತಾವೇ ಕಪ್ಪು ಹಲಗೆ ಮುಂದೆ ನಿಂತು ಹತ್ತು ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ವ್ಯಾಕರಣ ಪಾಠ ಮಾಡಿದರು. ವಿದ್ಯಾರ್ಥಿಗಳಿಂದ ತಾವೇ ಉತ್ತರ ಪಡೆದರು. 

ಇಂಗ್ಲಿಷ್ ವ್ಯಾಕರಣ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿರುವುದು ಕಂಡು ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ಇಂಗ್ಲಿಷ್‌ ಶಿಕ್ಷಕ ಶಶಿಧರ್‌ ಅವರನ್ನು ಪ್ರಶ್ನಿಸಿದರು.

‘ಏನ್ ಗ್ರಾಮರ್ ಕಲಿಸ್ತೀರಿ, ಸರಿಯಾಗಿ ಕಲಿಸಬೇಕು. ಮೊದಲು ನೀವೂ ಚೆನ್ನಾಗಿ ಓದಿ. ಅವರಿಗೂ ಚೆನ್ನಾಗಿ ಕಲಿಸಿ. ಸರ್ಕಾರ ಇಂಥ ಶಾಲೆ ತೆರೆದಿರೋದೆ ಪ್ರತಿಭೆ ಹೊರತರಲು ಆ ನಿಟ್ಟಿನಲ್ಲಿಯೇ ಕೆಲಸ ಮಾಡಿ, ನಿಮಗೆ ವ್ಯಾಕರಣ ಗೊತ್ತಿಲ್ಲ ಅಂದರೆ ನನ್ನ ಹತ್ತಿರ ಬನ್ನಿ’ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡದರು.

ಬಳಿಕ ತರಗತಿ ಕೊಠಡಿ, ಅಡುಗೆಮನೆ ಊಟದ ಹಾಲ್ ಪರಿಶೀಲಿಸಿದರು. ಅಡುಗೆ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಸಿದ್ಧವಾಗಿದ್ದ ಸಾಂಬಾರನ್ನು ಸವಿದರು. ಶೌಚಾಲಯ ಮತ್ತು ಪರಿಸರ ಸ್ವಚ್ಛತೆ ಕಾಪಾಡಲು ತಿಳಿಸಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಸಿಬ್ಬಂದಿ ಮತ್ತು ವೈದ್ಯರ ಬಗ್ಗೆ ಮಾಹಿತಿ ಪಡೆದರು. ಶೌಚಾಲಯ, ನೆಲಹಾಸು ಪರಿಶೀಲಿಸಿದರು. ರೋಗಿಗಳೊಂದಿಗೆ ತಾವೇ ಚರ್ಚಿಸಿ, ಚಿಕಿತ್ಸೆ ಮತ್ತು ಸೌಲಭ್ಯದ ಮಾಹಿತಿ ಪಡೆದರು. ಆಸ್ಪತ್ರೆಯ ಹಿಂದೆ ನಿಂತಿದ್ದ ಕೊಳಚೆಯನ್ನು ಕೂಡಲೇ ಸ್ವಚ್ಛಗೊಳಿಸಲು ಪಿಡಿಒ ಮತ್ತು ವೈದ್ಯಾಧಿಕಾರಿಗೆ ಸೂಚಿಸಿದರು. ಮೂಳೆ ನೋವಿಗೆ ಸಂಬಂಧಿಸಿದ ಔಷಧೋಪಚಾರ ಲಭ್ಯತೆ ಕುರಿತು ಮಾಹಿತಿ ಪಡೆದರು.

ನಾಡ ಕಚೇರಿಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿದರು. 2020ರ ಫೆಬ್ರುವರಿ ಒಳಗೆ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗೆ ಸೂಚಿಸಿದರು.

ನಂತರ ನಾಡಕಚೇರಿಗೆ ಭೇಟಿ ನೀಡಿ ಎ.ಜೆ.ಎಸ್.ಕೆ. ಕೇಂದ್ರ, ದಾಖಲೆ ಶಾಖೆ, ಆಧಾರ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಬಳಿಕ ಮಾಯಕೊಂಡದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿಕ್ರಿಯಿಸಿ (+)