ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಲಾಭ ನೀಡಿದ ಹಸಿಮೆಣಸಿನ ಕಾಯಿ ಬೆಳೆ

ಬಸವಾಪಟ್ಟಣದ ರೈತ ಪಿ. ಜಿಯಾವುಲ್ಲಾ
Last Updated 18 ಜನವರಿ 2023, 4:16 IST
ಅಕ್ಷರ ಗಾತ್ರ

ಬಸವಾಪಟ್ಟಣ: ಅಡಿಕೆ ಬೆಳೆ ನಡುವೆ ಮಿಶ್ರಬೆಳೆಯಾಗಿ ಹಸಿಮೆಣಸಿನಕಾಯಿಯನ್ನು ಬೆಳೆದು ಉತ್ತಮ ಲಾಭ ಕಾಣುತ್ತಿದ್ದಾರೆ ಇಲ್ಲಿನ ರೈತ ಪಿ. ಜಿಯಾವುಲ್ಲಾ.

ಜಿಯಾವುಲ್ಲಾ ಅವರಿಗೆ ಒಂದೂವರೆ ಎಕರೆ ಖುಷ್ಕಿ ಭೂಮಿ ಇದ್ದು, ಮೂರು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಇದೀಗ ಅದರ ಮಧ್ಯದಲ್ಲಿ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

‘ದಾವಣಗೆರೆ ತಾಲ್ಲೂಕಿನ ಆನಗೋಡು ನರ್ಸರಿಯಿಂದ ಕಳೆದ ಅಕ್ಟೋಬರ್‌ನಲ್ಲಿ ಸಿತಾರ ತಳಿಯ ಮೆಣಸಿನ ಸಸಿಗಳನ್ನು ತಲಾ ₹ 1ಕ್ಕೆ ಖರೀದಿಸಿ ತಂದು, ಒಂದು ಅಡಿ ಅಂತರದಲ್ಲಿ ಒಂದು ಗುಣಿಯಲ್ಲಿ ಎರಡು ಸಸಿಗಳನ್ನು ನಾಟಿ ಮಾಡಿದ್ದೆ. ಎಕರೆಗೆ ಹತ್ತು ಸಾವಿರ ಸಸಿಗಳು ಬೇಕಾಯಿತು. ನಾಟಿ ಮಾಡುವಾಗ ಸಸಿಗಳ ಕುಡಿಯನ್ನು ಚಿವುಟಬೇಕು. ಇದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಅಲ್ಲದೇ ಮುರುಟು ರೋಗ ಬರುವುದಿಲ್ಲ’ ಎಂದು ರೈತ ಜಿಯಾವುಲ್ಲಾ ತಿಳಿಸಿದರು.

‘ಪ್ರತಿ ಸಾಲಿನ ಅಂತರ ಮೂರು ಅಡಿ ಅಗಲವಿದ್ದು, ಆರಂಭದಲ್ಲಿ ಕುರಿಗೊಬ್ಬರವನ್ನು ಬಳಸಿದ್ದೆ. ನಾಟಿ ಮಾಡಿದ 30 ದಿನಗಳ ನಂತರ ಕಳೆ ನಾಶಕ ಸಿಂಪಡಿಸಲಾಗಿತ್ತು. ಆದಕಾರಣ ಹೆಚ್ಚಿನ ಕಳೆ ಬೆಳೆಯಲಿಲ್ಲ. ನಂತರ ಒಂದು ಕ್ವಿಂಟಲ್‌ನಂತೆ ಮೂರು ಬಾರಿ ಡಿ.ಎ.ಪಿ. ಗೊಬ್ಬರದ ಬಳಕೆ ಮಾಡಿದ್ದೇನೆ. ಐದರಿಂದ ಎಂಟು ದಿನಗಳ ಒಳಗೆ ಬೆಳೆಗೆ ನೀರನ್ನು ಹಾಯಿಸಬೇಕು. ಇದು ಆರು ತಿಂಗಳ ಬೆಳೆಯಾಗಿದ್ದು, ಸಸಿಗಳನ್ನು ನಾಟಿ ಮಾಡಿದ 75ನೇ ದಿನಕ್ಕೆ ಕೊಯಿಲು ಆರಂಭಿಸಿದೆವು. 15 ದಿನಕ್ಕೆ ಒಮ್ಮೆ ಕಾಯಿಗಳ ಕೊಯಿಲು ಮಾಡುತ್ತಿದ್ದು, ಪ್ರತಿ ಬಾರಿ ಐದು ಕ್ವಿಂಟಲ್‌ ಹಸಿ ಮೆಣಸಿನ ಕಾಯಿ ಸಿಗುತ್ತಿದೆ. ಈಗ ಮೂರು ಬಾರಿ ಕೊಯಿಲು ಮಾಡಿದ್ದೇವೆ. ಈ ವರ್ಷ ಬೆಳೆ ಕಡಿಮೆ ಇರುವುದರಿಂದ ಸ್ಥಳೀಯ ವ್ಯಾಪಾರಿಗಳು ಹೊಲಕ್ಕೇ ಬಂದು ಖರೀದಿಸುತ್ತಿದ್ದಾರೆ. ದರ ಕಿ.ಜಿ.ಗೆ ₹ 40 ರಿಂದ 45ರವರೆಗೆ ದೊರೆತಿದೆ. ಎಕರೆಗೆ ಮೂರು ಟನ್‌ ಇಳುವರಿ ನಿರೀಕ್ಷೆ ಇದ್ದು ಫಸಲು ಉತ್ತಮವಾಗಿದೆ’ ಎನ್ನುತ್ತಾರೆ ಅವರು.

ರೈತರೇ ತಮ್ಮ ಹೊಲಗಳಲ್ಲಿ ಹಸಿಮೆಣಸಿನಕಾಯಿ ಸಸಿಗಳನ್ನು ಮಾಡಿಕೊಳ್ಳಬಹುದು ಅಥವಾ ತಜ್ಞರ ಸಲಹೆಯಂತೆ ಉತ್ತಮ ಸಸಿಗಳನ್ನು ಖರೀದಿಸಿ ತಂದು ನಾಟಿ ಮಾಡಬಹುದು. ಮಳೆಗಾಲದ ಬೆಳೆಯಾದರೆ ಮೇ ಅಥವಾ ಜೂನ್‌ ತಿಂಗಳಲ್ಲಿ, ನೀರಾವರಿ ಅನುಕೂಲವಿದ್ದವರು ಜನವರಿ ಫೆಬ್ರುವರಿಯಲ್ಲಿ ಅಥವಾ ಅಕ್ಟೋಬರ್‌ ನವೆಂಬರ್‌ನಲ್ಲಿ ನಾಟಿ ಮಾಡಬಹುದು. ಈ ಬೆಳೆಗೆ ಕಪ್ಪು ಮಣ್ಣು ಅಥವಾ ಮರಳು ಮಿಶ್ರಿತ ಮೆಕ್ಕಲು ಮಣ್ಣು ಸೂಕ್ತ. ನಾಟಿ ಮಾಡುವಾಗ ಬೇವಿನ ಹಿಂಡಿ ಮತ್ತು ಎರೆಹುಳ ಗೊಬ್ಬರವನ್ನು ಬಳಸಿದರೆ ರೋಗ ರಹಿತ ಬೆಳೆಯನ್ನು ನಿರೀಕ್ಷಿಸಬಹುದು. ಮಿಶ್ರ ಬೆಳೆಯಾಗಿಯೂ ಹಸಿಮೆಣಸನ್ನು ಬೆಳೆಯಬಹುದು ಎನ್ನುತ್ತಾರೆ ಕೃಷಿ ತಜ್ಞ ಡಾ.ನಾಗರಾಜ ಕುಸಗೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT