ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆವರೆಗಷ್ಟೇ ‘ಗ್ಯಾರಂಟಿ’; AAPಯ ‘ಮುಖ್ಯಮಂತ್ರಿ’ ಚಂದ್ರು ಭವಿಷ್ಯ

Published 13 ಸೆಪ್ಟೆಂಬರ್ 2023, 6:37 IST
Last Updated 13 ಸೆಪ್ಟೆಂಬರ್ 2023, 6:37 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಚಾಲನೆಯಲ್ಲಿ ಇರುತ್ತವೆ. ಆನಂತರ ಇರುವುದಿಲ್ಲ’ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಭವಿಷ್ಯ ನುಡಿದರು.

‘ರಾಜ್ಯ ಸರ್ಕಾರ ಅಧಿಕಾರಕ್ಕೆ ನೂರು ದಿನಗಳನ್ನು ಪೂರೈಸಿದೆ. ದೆಹಲಿಯಲ್ಲಿ ಎಎಪಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಕಾಂಗ್ರೆಸ್‌ ‘ಗ್ಯಾರಂಟಿ’ ಹೆಸರಿನಲ್ಲಿ ಆಗುಹೋಗುಗಳ ಚಿಂತನೆ ಮಾಡದೇ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿದೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಭ್ರಷ್ಟಾಚಾರಮುಕ್ತ ಮಾಡಿದ್ದರಿಂದ ಉಚಿತ ಯೋಜನೆಗಳನ್ನು ನೀಡಿದೆ. ಕರ್ನಾಟಕದಲ್ಲಿ ಇವು ಸಾಧ್ಯವಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಕನ್ನಡ ಸಂಸ್ಕೃತಿಗೆ ಇಲಾಖೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣವನ್ನೂ 3 ತಿಂಗಳಿನಿಂದ ನೀಡಿಲ್ಲ. ರಾಜ್ಯದ 14 ಅಕಾಡೆಮಿ, ನಾಲ್ಕು ಅಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿದ್ದ ₹ 34 ಸಾವಿರ ಕೋಟಿಯಲ್ಲಿ ₹ 11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಚುನಾವಣೆ ಸಮೀಪಿಸಿದಾಗಲೇ ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಚುನಾವಣೆ’ ವಿಷಯನ್ನು ಮುಂದಿಟ್ಟಿದೆ. ರಾಮಮಂದಿರದ ಉದ್ಘಾಟನೆಯನ್ನೂ ಮುಂದಕ್ಕೆ ಹಾಕಿದೆ. ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲುವ ತಂತ್ರ ಮಾಡುವುತ್ತಿರುವುದು ಖಂಡನೀಯ’ ಎಂದರು.

‘ಆಮ್‌ ಆದ್ಮಿ ಪಾರ್ಟಿ ‘ಎಲ್ಲಾ ಸೇರಿ ಬನ್ನಿ ಮಾತನಾಡೋಣ’ ಸಂವಾದ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಆಯೋಜಿಸಿದ್ದು,  ಶಿಕ್ಷಣದ ಗುಣಮಟ್ಟ, ಆರೋಗ್ಯ ವ್ಯವಸ್ಥೆ, ರೈತರ ಶ್ರಮಕ್ಕೆ ಬೆಲೆ, ಮಹಿಳೆಯರಿಗೆ ಸಮಾನ ಅವಕಾಶ, ಯುವಕರಿಗೆ ಉದ್ಯೋಗ ಕಲ್ಪಿಸದೇ ದೇಶದ ಅಭಿವೃದ್ಧಿ ಸಾಧ್ಯವೇ? ವಿಷಯಗಳು ಕುರಿತಂತೆ ಚರ್ಚಿಸಲಾಗುವುದು. ವೋಟು ಹಾಕಿದ್ದು ಏಕೆ, ಹಾಕದೇ ಇರುವುದು ಏತಕ್ಕೆ, ದೆಹಲಿಯಲ್ಲಿ ನಮ್ಮ ಪಕ್ಷದ ಸಾಧನೆಗಳನ್ನು ಜನರ ಮುಂದೆ ಇಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಪಾಲಿಕೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಎಎಪಿಯಿಂದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಘಟಬಂಧನ್‌ನಲ್ಲಿ ಎಎಪಿ ಇರುವುದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪಕ್ಷದ ಮುಖಂಡರಾದ ಉಮಾ ಶಂಕರ್, ಶಿವಕುಮಾರಪ್ಪ, ಅರುಣ್ ಕುಮಾರ್, ಗಣೇಶ್ ದುರ್ಗದ, ಆದಿಲ್ ಖಾನ್, ಕೆ.ರವೀಂದ್ರ, ಕೆ.ಎಲ್.ರಾಘವೇಂದ್ರ, ಸುರೇಶ್, ಅಜಿತ್, ಬಸವರಾಜ್ ಇದ್ದರು.

ಕಳ್ಳರು ಸಂತೆ ಮಾಡಿದಂತೆ..!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಹೊಂದಾಣಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು ‘ಕಳ್ಳರು ಕಳ್ಳರು ಸೇರಿ ಸಂತೆ ಮಾಡಿದಂತಿದೆ. ಜೆಡಿಎಸ್‌ನ್ನು ಪರಿವಾರವಾದಿ ಕುಟುಂಬ ರಾಜಕಾರಣ ಪಕ್ಷ ಎಂದೇ ಪ್ರಧಾನಿ ದೂರುತ್ತಿದ್ದರು. ಈಗ ಅದೇ ಪರಿವಾರವಾದಿ ಕುಟುಂಬ ರಾಜಕಾರಣ ಪಕ್ಷವನ್ನು ತಬ್ಬಿಕೊಳ್ಳಲು ಹೊರಟಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ಸರ್ಕಾರ ಎಂಬ ಆರೋಪ ಮಾಡಿಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ನೇಮಕಾತಿ ಗುತ್ತಿಗೆ ಬಾಕಿ ಬಿಲ್ ಬಿಡುಗಡೆ ಎಲ್ಲದರಲ್ಲೂ ಲೂಟಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT