ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಕಡತದಲ್ಲಷ್ಟೇ ಶೌಚಾಲಯ ನಿರ್ಮಾಣ- ಸದಸ್ಯರ ಆಕ್ರೋಶ

ಹರಪನಹಳ್ಳಿ ಪುರಸಭೆ ಸಾಮಾನ್ಯಸಭೆಯಲ್ಲಿ ಸದಸ್ಯರ ಆಕ್ರೋಶ
Last Updated 19 ಅಕ್ಟೋಬರ್ 2021, 6:10 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹರಪನಹಳ್ಳಿ: ‘ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಶೇ 100ರಷ್ಟು ಸಾಧನೆ ಪುರಸಭೆ ಕಡತದಲ್ಲಿದೆ. ಆದರೆ, ಸಾರ್ವಜನಿಕರು ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ’ ಎಂದು ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ವಿಷಾದಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಇಜಂತಕರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ವೈಯಕ್ತಿಕ ಶೌಚಾಲಯ ನಿರ್ಮಾಣದ ನೆಪದಲ್ಲಿ ಬೋಗಸ್ ಬಿಲ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ರೊಕ್ಕಪ್ಪ, ‘ಎರಡು ವರ್ಷದ ಹಿಂದೆ ಕಟ್ಟಿರುವ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಕೊಟ್ಟಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಸದಸ್ಯ ರೆಹಮಾನ್ ಮಾತನಾಡಿ, ‘ವಿದ್ಯುತ್, ನೀರು ಸೇರಿ ಮೂಲಸೌಕರ್ಯಕ್ಕೆ ಬರುವ ಜನರಿಗೆ ನಿರಾಕ್ಷೇಪಣಾ ಪತ್ರ ಕೊಡಲು ಅಲೆದಾಡಿಸಬೇಡಿ. ರದ್ದಾಗಿರುವ 1,792 ಮನೆ ಖಾತೆಗಳನ್ನು ಮುಂದುವರಿಸಿ’ ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಎಂ.ವಿ. ಅಂಜಿನಪ್ಪ, ‘ಖಾತಾ ಬದಲಾವಣೆಗೆ ಸದಸ್ಯರು ಶಿಫಾರಸು ಮಾಡಿದರೆ ಆಗಲ್ಲ ಎಂದು ಹೇಳಲಾಗುತ್ತದೆ. ಆದರೆ, ಸಾರ್ವಜನಿಕರಿಂದ ಹಣ ಪಡೆದು ಮಾಡಿಕೊಡುತ್ತಾರೆ’ ಎಂದು ಆರೋಪಿಸಿದರು.

ಸದಸ್ಯ ಕೊಟ್ರೇಶ್ ಅವರು ವೃತ್ತಗಳಿಗೆ ನಾಮಕರಣ ಮಾಡುವ ವಿಷಯ ಪ್ರಸ್ತಾಪಿಸಿದರು. ಈ ಕುರಿತು ಸುದೀರ್ಘ ಚರ್ಚೆ ನಡೆದು, ಪಟ್ಟಣದ ವ್ಯಾಪ್ತಿಯ ವಿವಿಧ ವೃತ್ತಗಳಿಗೆ ನಾಮಕರಣ ಮಾಡಲು ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲು ಸಭೆ ತೀರ್ಮಾನಿಸಿತು.

ಸದಸ್ಯ ಗೊಂಗಡಿ ನಾಗರಾಜ್ ಮಾತನಾಡಿ, ‘ವಿದ್ಯುತ್ ದೀಪಗಳು ನಾಪತ್ತೆ ಆಗುತ್ತಿವೆ. ಗುಣಮಟ್ಟವಿಲ್ಲ’ ಎಂದು ಸಭೆಯ ಗಮನಸೆಳೆದರು. ‌

ಸದಸ್ಯ ರೊಕ್ಕಪ್ಪ, ‘ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಕೊರತೆಯಿದ್ದು ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಉಪಾಧ್ಯಕ್ಷೆ ಭೀಮವ್ವ ಸಣ್ಣಹಾಲಪ್ಪ, ‘ಕಂದಾಯ ಶಾಖೆ ಮಹಿಳಾ ಅಧಿಕಾರಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದರು. ಇದಕ್ಕೆ  ಸದಸ್ಯರಾದ ಅಂಜಿನಪ್ಪ, ರೆಹಮಾನ್, ವೆಂಕಟೇಶ್ ಅವರೂ ಸಹಮತ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ‘ವಿಷಯವನ್ನು ವೈಯಕ್ತಿಕವಾಗಿ ಪರಿಗಣಿಸದೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.

ಸದಸ್ಯರಾದ ಎಚ್.ಎಂ. ಅಶೋಕ್, ಜಾವಿದ್, ನಾಗರಾಜ್, ಕಿರಣ್, ಗಣೇಶ್, ರಾಘವೇಂದ್ರ ಶೆಟ್ಟಿ, ಪ್ರಕಾಶ್ ವಿವಿಧ ವಾರ್ಡ್ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT