ಶನಿವಾರ, ಸೆಪ್ಟೆಂಬರ್ 25, 2021
22 °C

ಹರಪನಹಳ್ಳಿ: ಎರಡು ಮತಗಟ್ಟೆಗಳಲ್ಲಿ ವಾಮಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳ 539 ಸ್ಥಾನಗಳ ಆಯ್ಕೆಗೆ ಭಾನುವಾರ ಶಾಂತಿಯುತ ಮತದಾನ ನಡೆದಿದ್ದು, ಕೆಲವೆಡೆ ವಾಮಾಚಾರ ನಡೆದರೆ, ಕೆಲ ಗ್ರಾಮಗಳಲ್ಲಿ ನಿರ್ದಿಷ್ಟ ಅಭ್ಯರ್ಥಿಗಳ ಆಯ್ಕೆಗೆ ಆಣೆ, ಪ್ರಮಾಣ ನಡೆದಿದೆ.

ಬೆಳಿಗ್ಗೆ 9ಕ್ಕೆ ಶೇ 8ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1ಕ್ಕೆ 41ರಷ್ಟು, ಸಂಜೆ 6ರ ವರೆಗೂ ಶೇ 78ರಷ್ಟು ಮತದಾನವಾಗಿತ್ತು. 

ತಾಲ್ಲೂಕಿನ ಶಿರಗಾನಹಳ್ಳಿಯ ಮತಗಟ್ಟೆ ಎದುರು ನಿಂಬೆಹಣ್ಣು, ಅಕ್ಕಿ, ಕುಂಕುಮವಿಟ್ಟು ವಾಮಾಚಾರ ಮಾಡಿ, ಮತಗಟ್ಟೆ ಸುತ್ತಲೂ ನಿಂಬೆಹಣ್ಣು ಎಸೆಯಲಾಗಿತ್ತು. ಯಡಿಹಳ್ಳಿ ಗ್ರಾಮ ಪಂಚಾಯಿತಿಯ ಬಿಕ್ಕಿಕಟ್ಟೆ ಗ್ರಾಮದ ಮತಗಟ್ಟೆ ಬಳಿ ಕೋಳಿ, ಪಾರಿವಾಳದ ಕುತ್ತಿಗೆ ಕೊಯ್ದು, ನಿಂಬೆಹಣ್ಣು, ಕುಂಕುಮ ಲೇಪಿಸಿ ವಾಮಾಚಾರ ಮಾಡಿದ್ದಾರೆ. ಇದರಿಂದ ಎರಡು ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು.

ಅಡವಿಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ₹ 8 ಲಕ್ಷ ಸಂಗ್ರಹಿಸಲು ನಿರ್ದಿಷ್ಟ ಅಭ್ಯರ್ಥಿಗಳ ಗೆಲುವಿಗೆ ಗ್ರಾಮದ ಮುಖಂಡರ ಸಭೆಯಲ್ಲಿ ನಿರ್ಣಯಿಸಿದ್ದರು. ಅದರಂತೆ ಒಟ್ಟು 733 ಮತದಾರರು ಇದ್ದರೂ ಸಂಜೆ 5ರ ವರೆಗೂ ಕೇವಲ 63 ಜನ ಮಾತ್ರ ಮತ ಚಲಾಯಿಸಿದರು. ಉಳಿದವರು ಮತದಾನದಿಂದ ದೂರ ಉಳಿದರು.

ಮಧ್ಯಾಹ್ನದವರೆಗೂ ಮತದಾರರು ಬಾರದಿರುವ ವಿಷಯ ತಿಳಿದ ತಹಶೀಲ್ದಾರ್ ನಂದೀಶ್, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಲು ಅರಿವು ಮೂಡಿಸಿದರು.

ಬಾಪೂಜಿ ನಗರದಲ್ಲಿ ಗ್ರಾಮದ ನಿರ್ಣಯದಂತೆ ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ಹಾಕಲು ಆಣೆ–ಪ್ರಮಾಣ ನಡೆದಿದೆ ಎನ್ನಲಾಗಿದೆ. ಶಿಂಗ್ರಿಹಳ್ಳಿಯಲ್ಲಿ ಮತಗಟ್ಟೆಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಮತದಾನಕ್ಕೆ ಚಾಲನೆ ಕೊಟ್ಟರು. ‌

ತೀವ್ರ ಪೈಪೋಟಿ ಇರುವ ಕೆಲ ಗ್ರಾಮಗಳ ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಮತದಾರರನ್ನು ಸೆಳೆಯಲು ನಿಂತಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪ್ರತಿಸ್ಪರ್ಧಿ ಬೆಂಬಲಿತರ ಗುಂಪಿನವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದಿದ್ದರಿಂದ ರಾತ್ರಿವರೆಗೂ ಮತದಾನ ನಡೆದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು