ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಬೀರೂರು-ಸಮ್ಮಸಗಿ ಹೆದ್ದಾರಿ ಅಳತೆ ಕಾರ್ಯ ಅಪೂರ್ಣ

ಮತ್ತೊಮ್ಮೆ ಸಭೆ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧಾರ
Published 29 ನವೆಂಬರ್ 2023, 15:44 IST
Last Updated 29 ನವೆಂಬರ್ 2023, 15:44 IST
ಅಕ್ಷರ ಗಾತ್ರ

ಹರಿಹರ: ನನೆಗುದಿಗೆ ಬಿದ್ದಿದ್ದ ಇಲ್ಲಿನ ಬೀರೂರು-ಸಮ್ಮಸಗಿ ಹೆದ್ದಾರಿ ಕಾಮಗಾರಿಗಾಗಿ ಲೋಕೋಪಯೋಗಿ ಅಧಿಕಾರಿಗಳು ಬುಧವಾರ ನಡೆಸಿದ ರಸ್ತೆಯನ್ನು ಅಳತೆ ಮಾಡುವ ಯತ್ನ ಪೂರ್ಣಗೊಳ್ಳಲಿಲ್ಲ.

ಪೊಲೀಸ್ ಬಂದೋಬಸ್ತ್‌ನೊಂದಿಗೆ ಅಳತೆ ಕಾರ್ಯ ನಡೆಸಲಾಗುತಿತ್ತು. ಸ್ಥಳಕ್ಕೆ ಬಂದ ನಗರಸಭೆ ಹಾಗೂ ಅಂಜುಮನ್ ಸಮಿತಿ ಸದಸ್ಯರು ಅಳತೆಯ ಮಾನದಂಡವನ್ನು ಪ್ರಶ್ನಿಸಿದರು.

‘ಹೊಸ ಸೇತುವೆಯನ್ನು ಮಾನದಂಡವಾಗಿ ಇರಲಿದೆ. ಒಂದು ಭಾಗಕ್ಕೆ 60 ಅಡಿಯಂತೆ ಒಟ್ಟು 120 ಅಡಿ ರಸ್ತೆಗೆ ಗಡಿ ಗುರುತಿಸಬೇಕಿದೆ. ಈ ಪೈಕಿ ಸದ್ಯಕ್ಕೆ ವಾಹನ ಸಂಚಾರಕ್ಕೆ ಅನುಕೂಲವಾಗಿಸಲು 40 ಅಡಿವರೆಗೆ ಮಾತ್ರ ಡಾಂಬರ್ ರಸ್ತೆ ನಿರ್ಮಿಸಲಾಗುವುದು’ ಎಂದು ಲೋಕೋಪಯೋಗಿ ಎಇಇ ಶಿವಮೂರ್ತಿ ಉತ್ತರಿಸಿದರು.

ಈ ಹಿಂದೆ ಹೆದ್ದಾರಿ ಅಭಿವೃದ್ಧಿಗಾಗಿ ಆಗಿನ ಜಿಲ್ಲಾಧಿಕಾರಿ ಅಂಜನ್‌ ಕುಮಾರ್ ಸೂಚನೆಯಂತೆ ನಾಡಬಂದ್‌ಷಾ ವಲಿ ದರ್ಗಾದ ಗೋಡೆ, ಮಿನಾರ್ (ಕಂಬ) ಹಾಗೂ ಮಕಾನ್‌ನ ಮನೆಗಳನ್ನು ತೆರವುಗೊಳಿಸಲಾಗಿದೆ. ಈಗ ಮತ್ತೆ ಕಟ್ಟಡಗಳ ತೆರವಿಗೆ ಅವಕಾಶ ನೀಡಬೇಡಿ ಎಂದು ಸದಸ್ಯರು ಆಗ್ರಹಿಸಿದರು.

‘ಪದೇಪದೇ ರಸ್ತೆ ಅಳತೆ ಮಾಡುವುದು ಬೇಡ. ಒಮ್ಮೆ ಸರಿಯಾಗಿ ಗಡಿ ಗುರುತು ಮಾಡಿ ರಸ್ತೆ ನಿರ್ಮಿಸಬೇಕು. ಶಾಸಕರು, ತಹಶೀಲ್ದಾರ್ ಹಾಗೂ ಸಂಘ, ಸಂಸ್ಥೆಗಳ ಸಭೆ ಕರೆದು ಎಲ್ಲರ ಒಮ್ಮತ ಪಡೆದು ರಸ್ತೆ ನಿರ್ಮಿಸಬೇಕು. ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ’ ಎಂದು ನಗರಸಭಾ ಸದಸ್ಯರು ಹೇಳಿದರು.

‘ಎಲ್ಲರ ಅಭಿಪ್ರಾಯಗಳನ್ನ ತಹಶೀಲ್ದಾರ್ ಗುರು ಬಸವರಾಜ್ ಅವರಿಗೆ ತಿಳಿಸಿ, ಮತ್ತೊಂದು ಸಭೆ ಆಯೋಜನೆ ಮಾಡಲಾಗುವುದು. ಆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದ ಶಿವಮೂರ್ತಿ ಅವರು ರಸ್ತೆ ಅಳತೆ ಕಾರ್ಯ ಸ್ಥಗಿತಗೊಳಿಸಿದರು.

ಪದೇ ಪದೇ ರಸ್ತೆ ಅಳತೆ ಕೆಲಸವನ್ನು ಮುಂದೂಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿ ಶುಕ್ರವಾರ ರಸ್ತೆ ತಡೆ ಹೋರಾಟ ನಡೆಸುತ್ತೇವೆ ಎಂದು ಸ್ಥಳದಲ್ಲಿದ್ದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ಗೋವಿಂದ ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಅಂಜುಮನ್ ಸಮಿತಿ ಅಧ್ಯಕ್ಷ ಸೈಯದ್ ಏಜಾಜ್, ನಗರಸಭಾ ಸದಸ್ಯ ಎಂ.ಆರ್.ಮುಜಮ್ಮಿಲ್, ಕೆ.ಜಿ.ಸಿದ್ದೇಶ್, ಆರ್.ಸಿ.ಜಾವಿದ್, ದಾದಾ ಖಲಂದರ್, ಇಬ್ರಾಹಿಂ ಖುರೇಷಿ, ಮುಖಂಡರಾದ ಸಿಬ್ಗತ್‌ಉಲ್ಲಾ, ಹಾಜಿ ಅಲಿಖಾನ್, ಆಸಿಫ್ ಜುನೈದಿ, ಅಪ್ರೋಜ್, ಅಹಮದ್ ಖಾನ್, ಗ್ರಾಮಾಂತರ ಇನ್‌ಸ್ಪೆಕ್ಟರ್ ಸುರೇಶ್ ಸಗಡಿ, ಪಿಎಸ್‌ಐಗಳಾದ ಶ್ರೀಪತಿ ಗಿನ್ನಿ, ಚಿದಾನಂದಪ್ಪ, ದಿಲ್ಲಿ ದರ್ಬಾರ್ ಜಬಿಉಲ್ಲಾ, ದಾದಾಪೀರ್ ಖುರೇಶಿ, ಮುಸ್ತಫಾ, ಆಸಿಫ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT