ಶನಿವಾರ, ಜನವರಿ 28, 2023
18 °C
ನ್ಯಾಯಮೂರ್ತಿ ಸದಾಶಿವ ವರದಿ ಜಾರಿಗೆ ಆಗ್ರಹ

ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಹೋರಾಟ: ಹರಿಹರದಿಂದ ಬೆಂಗಳೂರಿಗೆ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಒಳಮೀಸಲಾತಿ ವರ್ಗೀಕರಣದ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮುಖಂಡರು ಸೋಮವಾರ ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದರು.

ರಾಜ್ಯ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಜಾರಿ ಹೋರಾಟ ಸಮಿತಿಯ ಸೂಚನೆ ಮೇರೆಗೆ ಬಂದಿದ್ದ ಮುಖಂಡರು ಇಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಗೆ ಪುಷ್ಪಾರ್ಪಣೆ ಮಾಡಿ ಕ್ರಾಂತಿ ಗೀತೆ ಹಾಡಿ ಪಾದಯಾತ್ರೆ ಆರಂಭಿಸಿದರು.

‘ಪ್ರತಿ ಚುನಾವಣೆ ಸಂದರ್ಭ ಒಳ ಮೀಸಲಾತಿ ಜಾರಿಯ ಸುಳ್ಳು ಭರವಸೆ ನೀಡುವ ರಾಜಕೀಯ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಪರಿಶಿಷ್ಟ ಜಾತಿಯವರ ಮತಗಳನ್ನು ಪಡೆಯುತ್ತ ಬಂದಿದ್ದಾರೆ. ಅಂಥವರನ್ನು ಇನ್ನು ಮುಂದೆ ನಂಬುವುದಿಲ್ಲ’ ಎಂದು ಪಾದಯಾತ್ರಿಗಳು ಹೇಳಿದರು.

‘ಡಿ. 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ದಲಿತರ ಹಕ್ಕನ್ನು ನೀಡದ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ವೇಳೆ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ
ಎಂ. ಗುರುಮೂರ್ತಿ, ರಾಜ್ಯ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ಮಾರೆಪ್ಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರೊ.ಸಿ.ಕೆ. ಮಹೇಶ್, ಎಚ್. ಮಲ್ಲೇಶ್, ಹೆಣ್ಣೂರು ಶ್ರೀನಿವಾಸ, ಅಂಬಣ್ಣ ಆರೋಲಿಕರ್, ಶಿವರಾಯ ಅಕ್ಕರಕಿ, ಕುಂದುವಾಡ ಮಂಜುನಾಥ, ಪಿ.ಜೆ. ಮಹಾಂತೇಶ್, ಹೆಗ್ಗೆರೆ ರಂಗಪ್ಪ, ಡಿ. ಹನುಮಂತಪ್ಪ, ಎಸ್. ಕೇಶವ, ಎಲ್. ನಿರಂಜನಮೂರ್ತಿ, ರಾಯಚೂರು ಹನುಮಂತಪ್ಪ ಕಕ್ಕರಗಲ್, ಬಿ.ಎನ್. ಗಂಗಾಧರ ಚಿಕ್ಕಬಳ್ಳಾಪುರ, ಮುಂಡಗೋಡು ಫಕೀರಪ್ಪ, ಎ.ಹನುಮಂತಪ್ಪ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು