ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯ

ಕಾರಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿಯಲ್ಲಿ ಕೊಳಚೆ ಹೊಂಡ
Published 14 ಅಕ್ಟೋಬರ್ 2023, 6:04 IST
Last Updated 14 ಅಕ್ಟೋಬರ್ 2023, 6:04 IST
ಅಕ್ಷರ ಗಾತ್ರ

ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯಸೊಳ್ಳೆ ಮತ್ತು ನೊಣಗಳ ಹಾವಳಿಯಿಂದಾಗಿ ಈ ಗ್ರಾಮದ ಜನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ದುರ್ವಾಸನೆ ಕಾರಣ ಮೂಗು ಮುಚ್ಚಿಕೊಂಡು ತಿರುಗಾಡಬೇಕದ ಸ್ಥಿತಿ ಈ ಊರಲ್ಲಿದೆ.

ಸಮೀಪದ ಕಾರಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ದುಃಸ್ಥಿತಿ ಇದು. ಗ್ರಾಮದ ನಡುವೆಯೇ ಹೊಂಡವಿದ್ದು, ಮನೆಗಳ ಬಚ್ಚಲಿನ ನೀರು ಹೊಂಡ ಸೇರುತ್ತಿರುವುದರಿಂದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ದುರ್ವಾಸನೆ ಜೊತೆಗೆ ಸೊಳ್ಳೆ, ನೊಣಗಳ ಹಾವಳಿಯಿಂದಾಗಿ ಜನರು ಹೈರಾಣಾಗಿದ್ದಾರೆ.

ಹೊಂಡ ನೂರಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ಹಿಂದೆ ದನಕರುಗಳಿಗೆ ಆಶ್ರಯವಾಗಿತ್ತು. ನೀರು ಕುಡಿಯುತ್ತಿದ್ದವು. ಗ್ರಾಮಸ್ಥರು ಸ್ನಾನ ಮಾಡುತ್ತಿದ್ದರು. ಬಟ್ಟೆ ತೊಳೆಯುತ್ತಿದ್ದರು. ಆದರೀಗ ಗ್ರಾಮದ ಸ್ನಾನದ ಮನೆಯ ನೀರು ಚರಂಡಿಯ ಮೂಲಕ ಹೊಂಡಕ್ಕೆ ಸೇರುತ್ತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಗ್ರಾಮಸ್ಥರು ಒಂದು ತಿಂಗಳಿನಿಂದ ವೀಪರೀತ ಜ್ವರ, ಮೈ-ಕೈ ನೋವು, ಶೀತ, ಸೇರಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಗ್ರಾಮದಲ್ಲಿ ಶೇ 60ರಷ್ಟು ಕೂಲಿ ಕಾರ್ಮಿಕರಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಮಾರಿಹಬ್ಬ ಮಾಡದಿರುವುದು ಕಾರಣ ಎಂದು ಹಬ್ಬ ಮಾಡಲು ನಿರ್ಧರಿಸಿದ್ದಾರೆ. ಗ್ರಾಮದ ಮಧ್ಯೆಯೇ ಇರುವ ಹೊಂಡ ಸ್ವಚ್ಛಗೊಳಿಸಲು ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವ ಬಗ್ಗೆ ಯೋಚಿಸುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹೊಂಡದ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಎಸ್. ಇಂದ್ರನಾಯ್ಕ ಆಗ್ರಹಿಸಿದರು.

ಗ್ರಾಮದ ಪ್ರತಿ ಮನೆಯಲ್ಲೂ ಜ್ವರ, ಮೈ-ಕೈ ನೋವು, ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯ ಪ್ರಕರಣಗಳು ವರದಿಯಾಗಿವೆ. ಅನೇಕರು ಸರಿಯಾಗಿ ನಡೆದಾಡಲು ಕಷ್ಟಪಡುತ್ತಿದ್ದಾರೆ. ಆದರೆ, ಅಧಿಕಾರಿಗಳಾಗಲೀ, ಆರೋಗ್ಯ ಇಲಾಖೆ ಸಿಬ್ಬಂದಿಯಾಗಲೀ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿಲ್ಲ. ಚಿಕೂನ್‌ಗುನ್ಯದಿಂದಾಗಿ ಕುಂತರೆ ನಿಲ್ಲುವುದು ಕಷ್ಟ. ನಿಂತರೆ ಕೂರುವುದು ಕಷ್ಟ ಎಂದು ಜನ ಅಳಲು ತೋಡಿಕೊಂಡಿದ್ದಾರೆ.

ಗ್ರಾಮದ ನಡುವಿನ ಹೊಂಡದಿಂದಲೇ ಸಮಸ್ಯೆ ಉದ್ಭವವಾಗಿದ್ದು, ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಜಗದೀಶ್ ಒತ್ತಾಯಿಸಿದರು.

ಹೊಂಡದ ಸಮಸ್ಯೆ ಬಗ್ಗೆ ವಾರ್ಡ್ ಸಭೆಯಲ್ಲಿ ಚರ್ಚೆಯಾಗಿದೆ. ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು
ಚೇತನ್ ಕುಮಾರ್, ಅರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
ಹೊಂಡ ಮುಚ್ಚಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ಹಣಕಾಸು ವರ್ಷದಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿ ಕಾಮಗಾರಿ ನಡೆಸಲಾಗುವುದು. ನೀರು ಹರಿಯುವಂತೆ ತಾತ್ಕಾಲಿಕವಾಗಿ ಕ್ರಮ ವಹಿಸಲಾಗುವುದು.
-ಗೋಪಲಕೃಷ್ಣ, ಪಿಡಿಒ ಕಾರಿಗನೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT