ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಹುಲ್ಲಿಗೆ ಭಾರಿ ಬೇಡಿಕೆ

ಚನ್ನಗಿರಿ ತಾಲ್ಲೂಕಿನಲ್ಲಿ 1,000 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿ
Last Updated 18 ನವೆಂಬರ್ 2022, 5:10 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನ ಭತ್ತದ ಬೆಳೆಯ ಕೊಯ್ಲು ಕಾರ್ಯ ಒಂದು ವಾರದಿಂದ ಭರದಿಂದ ಸಾಗಿದ್ದು, ಈ ಬಾರಿ ಒಣ ಭತ್ತದ ಹುಲ್ಲಿಗೆ ಭಾರಿ ಬೇಡಿಕೆ ಬಂದಿದೆ. ತಾಲ್ಲೂಕಿನ ಭದ್ರಾ ನಾಲೆ ಹಾದು ಹೋಗಿರುವ ಗ್ರಾಮಗಳಲ್ಲಿ ಈಗಾಗಲೇ ಶೇ 25ರಷ್ಟು ಭತ್ತದ ಕೊಯ್ಲು ಕಾರ್ಯ ಮುಗಿದಿದೆ.

ಮುಂಗಾರು ಹಾಗೂ ಹಿಂಗಾರು ಮಳೆ ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಿದ್ದ ಪರಿಣಾಮ ತಾಲ್ಲೂಕಿನಲ್ಲಿ 4,081 ಹೆಕ್ಟೇರ್ ಮೆಕ್ಕೆಜೋಳ ಹಾಗೂ 1,000 ಹೆಕ್ಟೇರ್‌ಗಳಷ್ಟು ಭತ್ತದ ಬೆಳೆ ಹಾನಿಯಾಗಿತ್ತು. ಈ ಕಾರಣದಿಂದ ಒಣ ಭತ್ತದ ಹುಲ್ಲಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿದೆ. ಜಾನುವಾರುಗಳ ಮೇವಿಗೆ ಅಗತ್ಯವಾದ ಭತ್ತದ ಹುಲ್ಲನ್ನು ರೈತರು ಭತ್ತದ ಗದ್ದೆ ಇರುವ ರೈತರಿಂದ ಖರೀದಿಸಿಕೊಂಡು ಟ್ರ್ಯಾಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗಿ ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ನಲ್ಲೂರು, ಅರಿಶಿನಘಟ್ಟ, ಸೋಮಶೆಟ್ಟಿಹಳ್ಳಿ–ಸಿದ್ದಾಪುರ, ಸೂಳೆಕೆರೆ, ಕೆರೆಬಿಳಚಿ, ಬಸವಾಪಟ್ಟಣ, ತ್ಯಾವಣಿಗೆ, ನಲ್ಕುದುರೆ, ಹಿರೇಕೋಗಲೂರು, ಚಿಕ್ಕಕೋಗಲೂರು, ಕಾರಿಗನೂರು, ಕತ್ತಲಗೆರೆ, ಅಶೋಕ್ ನಗರ ಕ್ಯಾಂಪ್, ಸಾಗರಪೇಟೆ, ಕಣಿವೆಬಿಳಚಿ, ಚಿರಡೋಣಿ, ಕರೆಕಟ್ಟೆ, ನವಿಲೇಹಾಳ್, ಕಬ್ಬಳ, ದೊಡ್ಡಘಟ್ಟ, ಮೀಯಾಪುರ, ಕದರನ ಹಳ್ಳಿ, ಬೆಳ್ಳಿಗನೂಡು, ಗೊಲ್ಲರಹಳ್ಳಿ, ಸೋಮಲಾಪುರ, ಹೊಸೂರು, ತಣಿಗೆರೆ, ಮೆದಿಕೆರೆ, ಉಪ ನಾಯಕನಹಳ್ಳಿ, ಮಂಗೇನಹಳ್ಳಿ, ಗೆದ್ದಲಹಟ್ಟಿ, ಸಂತೇಬೆನ್ನೂರು ಭಾಗಗಳಲ್ಲಿ ಭದ್ರಾ ನಾಲೆ ಹಾದು ಹೋಗಿದ್ದು, 12,000 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಭತ್ತದ ಬೆಳೆಯನ್ನು ನಾಟಿ ಮಾಡಲಾಗಿತ್ತು.

‘ಅಧಿಕ ಮಳೆಯಿಂದಾಗಿ ಭತ್ತದ ಇಳುವರಿ ಕೂಡ ಈ ಬಾರಿ ಕುಸಿದಿದೆ. ಕಳೆದ ಸಾಲಿನಲ್ಲಿ ಎಕರೆಗೆ 35ರಿಂದ 40 ಚೀಲ ಇಳುವರಿ ಬಂದಿದೆ. ಈ ಬಾರಿ ಎಕರೆಗೆ 30ರಿಂದ 35 ಚೀಲ ಬಂದಿದೆ. 8 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ನಾಟಿ ಮಾಡಲಾಗಿತ್ತು. 8 ಎಕರೆಯಿಂದ 280 ಚೀಲ ಭತ್ತ ಇಳುವರಿ ಬಂದಿದೆ. ಕ್ವಿಂಟಲ್‌ಗೆ
₹ 2,100ರಂತೆ ಮಾರಾಟ ಮಾಡಲಾಗಿದೆ. ಪ್ರಸ್ತುತ 1 ಕ್ವಿಂಟಲ್ ಭತ್ತದ ದರ ₹ 2,100ರಿಂದ
₹ 2,200 ಇದೆ. ಭತ್ತದ ಇಳುವರಿ ಕುಸಿತದಿಂದಾಗಿ ರೈತರು ಭತ್ತದ ಒಣ ಹುಲ್ಲನ್ನು ಕೂಡ ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರಸ್ತಕ ಸಾಲಿನಲ್ಲಿ 1 ಟ್ರ್ಯಾಕ್ಟರ್ ಭತ್ತದ ಹುಲ್ಲು
₹ 7000ದಿಂದ ₹ 9000ಕ್ಕೆ
ಮಾರಾಟ ಆಗುತ್ತಿದೆ. ತಾಲ್ಲೂಕಿನ ಬಯಲುಸೀಮೆ ಪ್ರದೇಶಗಳ ರೈತರು ಜಾನುವಾರುಗಳ ಮೇವಿಗಾಗಿ ಭತ್ತದ ಹುಲ್ಲನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಚಿತ್ರದುರ್ಗ
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರೈತರು ಕೂಡ ಭತ್ತದ ಹುಲ್ಲನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಚಿಕ್ಕಕೋಗಲೂರು ಗ್ರಾಮದ ಭತ್ತದ ಬೆಳೆಗಾರ ಬಿ. ಉಮೇಶ್ ಕುಮಾರ್
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT