ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ, ಹೋರಾಟದಲ್ಲಿ ಎಚ್‌ಕೆಆರ್‌ ಜೀವಂತ

ರಾಮಚಂದ್ರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್
Last Updated 25 ಅಕ್ಟೋಬರ್ 2021, 3:57 IST
ಅಕ್ಷರ ಗಾತ್ರ

ದಾವಣಗೆರೆ: ಬಹಳಮಂದಿ ಬದುಕಿರುವಾಗಲೇ ಸತ್ತಂತಿರುತ್ತಾರೆ. ಕೆಲವರು ಬದುಕಿರುವಾಗ ಇವರು ಬದುಕಿದ್ದಾರೆ ಎಂದನ್ನಿಸುತ್ತದೆ. ಕೆಲವೇ ಕೆಲವು ಮಂದಿ ಸತ್ತ ಮೇಲೂ ಬದುಕಿರುತ್ತಾರೆ. ಆ ಸಾಲಿಗೆ ಎಚ್‌.ಕೆ. ರಾಮಚಂದ್ರಪ್ಪ ಸೇರಿದ್ದಾರೆ. ಎಲ್ಲ ಚಳವಳಿ, ಹೋರಾಟಗಳಲ್ಲಿ ಅವರು ಜೀವಂತವಾಗಿರುತ್ತಾರೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಅಭಿಪ್ರಾಯಪಟ್ಟರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಜಿಲ್ಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಚ್.ಕೆ .ರಾಮಚಂದ್ರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ನರೇಂದ್ರ ಮೋದಿ ಹಾಗೂ ಸಾಮಾನ್ಯ ಜನರ ಮಧ್ಯೆ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ಜನರ ಮೇಲೆ ಮೋದಿ ದಿನಕ್ಕೊಂದು ಬಾಂಬ್ ಹಾಕುತ್ತಿದ್ದಾರೆ. ನೋಟು ರದ್ದು ಎಂಬ ಬಾಂಬ್‌ನಿಂದ ಭಾರಿ ಸಂಖ್ಯೆಯಲ್ಲಿ ಜನ ಉದ್ಯೋಗ ಕಳೆದುಕೊಂಡರು. ಬೆಲೆ ಏರಿಕೆ ಎಂಬ ಇನ್ನೊಂದು ಬಾಂಬ್‌ನಿಂದ ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಪೆಟ್ರೋಲ್‌ನಿಂದ ಹಿಡಿದು ಎಲ್ಲ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಮನುಷ್ಯನ ಜೀವದ ಬೆಲೆ ಮಾತ್ರ ಕಡಿಮೆಯಾಗಿದೆ. ಜನರು ಬದುಕುವ ಆಸೆಯನ್ನೇ ಕೈಬಿಟ್ಟು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಜನವಿರೋಧಿ ಆಡಳಿತದ ವಿರುದ್ಧ ರೈತ-ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕು ಎಂದು ತಿಳಿಸಿದರು.

ರೈಲ್ವೆ ನಿಲ್ದಾಣ, ಏರ್ ಪೋರ್ಟ್, ಕಲ್ಲಿದ್ದಲು ಗಣಿ, ಬ್ಯಾಂಕ್, ಎಲ್‍ಐಸಿಯಂತಹ ಸಂಸ್ಥೆಗಳನ್ನು ನರೇಂದ್ರ ಮೋದಿ ಖಾಸಗಿಯವರಿಗೆ ಮಾರುತ್ತಿದ್ದಾರೆ. ಕಳೆದೊಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದರೂ ಪ್ರಧಾನಿಗಳು ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಏಳು ವರ್ಷಗಳಿಂದ ಇವರೇ ಆಡಳಿತದಲ್ಲಿ ಇದ್ದರೂ ಎಲ್ಲ ಸಮಸ್ಯೆಗಳಿಗೂ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಹೊಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ, ‘ಎಚ್‌ಕೆಆರ್ ಹಿಡಿದ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಟ್ಟವರಲ್ಲ. ಭಾರತದ ಜನರನ್ನು ಶೋಷಿಸುತ್ತಿದ್ದ ಬ್ರಿಟಿಷರ ವಿರುದ್ಧ ದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿದ್ದ ವರ್ಷ ಅಂದರೆ 1942ರಲ್ಲಿ ಎಚ್‌ಕೆಆರ್‌ ಹುಟ್ಟಿದ್ದರು. ಈಗ ಮತ್ತೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದೇವೆ’ ಎಂದರು.

ಕೊರೊನಾ ಕಾಲದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರೆ ಆಗರ್ಭ ಶ್ರೀಮಂತರ ಸಂಖ್ಯೆ 100 ಇದ್ದಿದ್ದು 140ಕ್ಕೆ ಏರಿತ್ತು. ಅಂಬಾನಿ, ಅದಾನಿಯಂತಹ ಉದ್ಯಮಪತಿಗಳ ಆಸ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.

ಸಿಪಿಐ ರಾಜ್ಯ ಮುಖಂಡರಾದ ಡಾ.ಸಿದ್ದನಗೌಡ ಪಾಟೀಲ, ‘ಹಿಂದೆ ಕೆಂಬಾವುಟ ಹಿಡಿದ ಕೈಗಳನ್ನೇ ಕಡಿಯುವ ಪರಿಸ್ಥಿತಿ ಇತ್ತು. ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದ ಸುರೇಶ್‌ ಶೇಖರಪ್ಪ ಅವರ ಕೊಲೆಯೇ ನಡೆದಿತ್ತು. ಹೋರಾಟದ ಕಾರಣಕ್ಕೆ ಎಚ್‌ಕೆಆರ್‌ ಐದು ವರ್ಷ ಜೈಲು ಅನುಭವಿಸಿದ್ದರು. ಅಂಥ ಕಾಲದಲ್ಲಿ ಹೋರಾಟ ಮಾಡಿದ್ದರು.ಈಗ ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ತೋರಿಸಿ ನಾವು ಅತ್ತ ನೋಡುವಾಗ ಇತ್ತ ನಮ್ಮ ಜೇಬಿಗೇ ಕನ್ನ ಹಾಕುತ್ತಿದೆ. ಇದರ ವಿರುದ್ಧ ಹೋರಾಟ ಸಂಘಟಿಸಬೇಕು. ಅದಕ್ಕೆ ಎಚ್‌ಕೆಆರ್‌ ಅವರ ಹೋರಾಟಗಳು ಸ್ಫೂರ್ತಿಯಾಗಬೇಕು’ ಎಂದರು.

ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ರಾಜ್ಯ ಮುಖಂಡರಾದ ಪಿ.ವಿ. ಲೋಕೇಶ, ಎನ್.ಶಿವಣ್ಣ, ಡಾ.ಕೆ.ಎಸ್.ಜನಾರ್ದನ್, ಎಚ್‌ಕೆಆರ್ ಪುತ್ರ ರವಿ, ಜಿಲ್ಲಾ ನಾಯಕರಾದ ಆವರಗೆರೆ ಚಂದ್ರು, ಎಚ್.ಜಿ. ಉಮೇಶ, ಐರಣಿ ಚಂದ್ರು, ಆವರಗೆರೆ ವಾಸು, ಟಿ.ಎಸ್. ನಾಗರಾಜ, ಕೆ. ರಾಘವೇಂದ್ರ ನಾಯರಿ, ಜಯಪ್ಪ, ಎಂ.ಬಿ. ಶಾರದಮ್ಮ, ಸರೋಜ, ಲಕ್ಷ್ಮಣ, ಬಿ. ಆನಂದಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT