ದಾವಣಗೆರೆ: ಕೊರೊನಾ ಕಾರಣ ನೆಲಕಚ್ಚಿದ್ದ ಜಿಲ್ಲೆಯ ಗೃಹ ಕೈಗಾರಿಕೆಗಳು ಕೆಲವು ತಿಂಗಳುಗಳಿಂದ ಚೇತರಿಕೆಯ ಹಾದಿಯಲ್ಲಿವೆ.

ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆಯ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದ ಅಗರಬತ್ತಿ, ಮಸಾಲ ಪದಾರ್ಥಗಳ ತಯಾರಿಕೆ, ಫ್ಲೋರ್ ಮಿಲ್, ಶ್ಯಾವಿಗೆ, ರೊಟ್ಟಿ, ಕಾಂಡಿಮೆಂಟ್ಸ್ ಇತರೆ ಗೃಹ ಕೈಗಾರಿಕೆಗಳು ಲಾಕ್ಡೌನ್ನಿಂದಾಗಿ ತೀವ್ರ ನಷ್ಟ ಅನುಭವಿಸಬೇಕಾಯಿತು. ಉದ್ಯಮ ಆರಂಭಿಸಲು ಮಾಡಿದ ಸಾಲ ತೀರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಲಾಕ್ಡೌನ್ ತೆರವುಗೊಳಿಸಿದ ನಂತರದಲ್ಲಿ ಸುಧಾರಣೆ ಕಂಡುಬರುತ್ತಿದೆ.

ನಗರದಲ್ಲಿ ಹೆಸರುವಾಸಿ ಶ್ಯಾವಿಗೆ ನಾಗಪ್ಪ: ದಾವಣಗೆರೆಯ ಕೆಟಿಜೆ ನಗರದಲ್ಲಿ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜರಾಜೇಶ್ವರಿ ಹೋಂ ಇಂಡಸ್ಟ್ರೀಸ್ನ ಶ್ಯಾವಿಗೆ ಜಿಲ್ಲೆಯಲ್ಲಿ ಹೆಸರುವಾಸಿ. ಗ್ರಾಮೀಣ ಪ್ರದೇಶಗಳ ಬಹುತೇಕರು ಇಲ್ಲಿಗೇ ಬಂದು ಕೊಂಡುಕೊಳ್ಳುತ್ತಾರೆ.

‘ನಮ್ಮ ತಂದೆಯವರು ಶ್ಯಾವಿಗೆ ನಾಗಪ್ಪ ಎಂದೇ ಪ್ರಖ್ಯಾತರು. ಆಗ ಶ್ಯಾವಿಗೆ ತಯಾರಿಸಿ ಹಳ್ಳಿ ಹಳ್ಳಿಗೆ ಹೊತ್ತುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅವರು ಆರಂಭಿಸಿದ್ದ ಉದ್ಯಮವನ್ನು ಇಂದಿಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ರಾಗಿ, ಗೋಧಿ, ರವೆ, ಅಕ್ಕಿಯಿಂದ ಶ್ಯಾವಿಗೆ ತಯಾರಿಸುತ್ತೇವೆ. ಮೂರು ಯಂತ್ರಗಳಿದ್ದು, ಮೂರು ಮಂದಿ ಕಾರ್ಯನಿರ್ವಹಿಸುತ್ತಾರೆ. ಡಿಸೆಂಬರ್ನಿಂದ ಮೇವರೆಗೆ ಬಿಸಿಲಿನ ವಾತಾವರಣ ಇರುವುದರಿಂದ ದಿನಕ್ಕೆ ಕ್ವಿಂಟಲ್ವರೆಗೂ ಶ್ಯಾವಿಗೆ ತಯಾರಿಸುತ್ತೇವೆ. ಮತ್ತೆ ಇದನ್ನು ಒಣಗಿಸಲು ಮೂರು ಗಂಟೆಗಳು ಹಿಡಿಯುತ್ತದೆ. ಮಳೆಗಾಲದಲ್ಲಿ ದಿನಕ್ಕೆ 50 ಕೆ.ಜಿ. ತಯಾರಿಸಿದರೆ ಹೆಚ್ಚು. ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಾರ ಇಲ್ಲದಂತಾಗಿತ್ತು. ನಾಲ್ಕು ತಿಂಗಳುಗಳಿಂದ ಸ್ವಲ್ಪ ಚೇತರಿಕೆ ಕಾಣುತ್ತಿದ್ದೇವೆ’ ಎನ್ನುತ್ತಾರೆ ರಾಜರಾಜೇಶ್ವರಿ ಹೋಂ ಇಂಡಸ್ಟ್ರೀಸ್ ಮಾಲೀಕ ಗಣೇಶ್.

‘ನಮ್ಮ ಬಡಾವಣೆಯಲ್ಲಿ ಹಿಟ್ಟಿನ ಗಿರಣಿ ಇರಲಿಲ್ಲ. ಇದನ್ನು ಮನಗಂಡು ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ಏನಾದರೂ ಮಾಡೋಣವೆಂದು ಮೂರು ವರ್ಷಗಳ ಹಿಂದೆ ಹಿಟ್ಟಿನ ಗಿರಣಿ ಆರಂಭಿಸಿದೆ. ಕೆಲವೇ ತಿಂಗಳುಗಳಲ್ಲಿ ಕೊರೊನಾ ಸೋಂಕಿನ ಕಾರಣ ಗಿರಣಿಯನ್ನು ಬಂದ್ ಮಾಡಬೇಕಾಯಿತು. ಗಿರಣಿ ತೆರೆದಿರಲು ಸಿಕ್ಕಿದ್ದ ಕಾಲಾವಕಾಶದಲ್ಲಿ ಅಂತರ ಕಾಯ್ದುಕೊಂಡು ಎಲ್ಲರಿಗೂ ಹಿಟ್ಟನ್ನು ಬೀಸಿಕೊಡುವುದು ಸವಾಲಾಗಿತ್ತು. ಪರಿಣಾಮವಾಗಿ ಉದ್ಯಮ ಆರಂಭಕ್ಕೆ ಮಾಡಿದ್ದ ಸಾಲ ತೀರಿಸಲು ಹೆಣಗಾಡಬೇಕಾಯಿತು. ಇದೀಗ ಚೆನ್ನಾಗಿ ನಡೆಯುತ್ತಿದೆ. ಆದರೆ, ಕೊರೊನಾ ವ್ಯಾಪಿಸಿದರೆ ಮತ್ತೆ ಎಂದು ಬಂದ್ ಮಾಡಬೇಕಾಗುತ್ತದೋ ಎಂಬ ಆತಂಕವೂ ಇದೆ’ ಎನ್ನುತ್ತಾರೆ ಶಕ್ತಿನಗರದಲ್ಲಿರುವ ಬನಶಂಕರಿ ಹಿಟ್ಟಿನ ಗಿರಣಿ ಮಾಲೀಕರಾದ ಯಶೋದಾ.

‘ನಾನು ಊದುಬತ್ತಿ ತಯಾರಿಕಾ ಘಟಕವನ್ನು ಆರಂಭಿಸಿದ್ದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ನಷ್ಟ ಅನುಭವಿಸಿದ್ದರಿಂದ ಬಂದ್ ಮಾಡಬೇಕಾಯಿತು. ನ್ಯಾಪ್ಕಿನ್ ತಯಾರಿಕಾ ಘಟಕವನ್ನು ಆರಂಭಿಸುವ ವೇಳೆಗೆ ಲಾಕ್ಡೌನ್ ಘೋಷಣೆಯಾಯಿತು. ಈಗ ಮೂರು ತಿಂಗಳುಗಳಿಂದ ಘಟಕವನ್ನು ನಡೆಸುತ್ತಿದ್ದೇವೆ. ನಾವು ತಯಾರಿಸುವ ‘ಸ್ತ್ರೀ ರಕ್ಷಾ’ ನ್ಯಾಪ್ಕಿನ್ ಪರಿಸರಸ್ನೇಹಿಯಾಗಿದ್ದು, ಸ್ಥಳೀಯ ಅಂಗಡಿಗಳು, ಮೆಡಿಕಲ್ ಸ್ಟೋರ್ಗಳಿಗೆ ನೀಡುತ್ತಿದ್ದೇವೆ. ಶಾಲಾ–ಕಾಲೇಜುಗಳು, ವಿದ್ಯಾರ್ಥಿನಿ ನಿಲಯಗಳು, ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಖರೀದಿಸುವಂತೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಹರಿಹರ ನಿವಾಸಿ ತಿಪ್ಪೇಸ್ವಾಮಿ.

ತೋಳಹುಣಸೆಯಲ್ಲಿ ರೊಟ್ಟಿ ಉದ್ಯಮ: ‘ಆಹಾರ ಉತ್ಪನ್ನಕ್ಕೆ ಎಂದಿಗೂ ಬೇಡಿಕೆ ಇರುತ್ತದೆ ಎಂದೆಣಿಸಿ ನಾನು ಮತ್ತು ನನ್ನ ಸಂಬಂಧಿ ಲತಾಬಾಯಿ ಅವರು ಸೇರಿಕೊಂಡು ಮನೆಯೊಂದನ್ನು ಬಾಡಿಗೆ ಪಡೆದು ರೊಟ್ಟಿ ಉದ್ಯಮ ಆರಂಭಿಸಿದೆವು. ಕೊರೊನಾ ಕಾರಣ ವ್ಯಾಪಾರಕ್ಕೆ ಕೊಂಚ ಹಿನ್ನಡೆಯಾಯಿತು. ಇದೀಗ ಚೆನ್ನಾಗಿ ನಡೆಯುತ್ತಿದೆ. ಸ್ಥಳೀಯರು ಹೆಚ್ಚಾಗಿ ಕೊಂಡುಕೊಳ್ಳುತ್ತಾರೆ. ಇತರೆ ಅಂಗಡಿಗಳು ಮತ್ತು ಬೇಕರಿಗಳಿಗೆ ಸರಬರಾಜು ಮಾಡುತ್ತೇವೆ. ಸಾಲ ತೀರಿದ ನಂತರದಲ್ಲಿ ಇನ್ನಷ್ಟು ದೊಡ್ಡಮಟ್ಟದಲ್ಲಿ ಉದ್ಯಮ ಬೆಳೆಸುವ ಗುರಿ ಹೊಂದಿದ್ದೇನೆ’ ಎನ್ನುತ್ತಾರೆ ತೋಳಹುಣಸೆ ಗ್ರಾಮದ ಮಾಣಿಕ್ಯ ರೊಟ್ಟಿ ತಯಾರಿಕಾ ಘಟಕದ ಕುಸುಮಾ ವೈ.ಕೆ.

ಹೆಚ್ಚಿದ ಪ್ಲಾಸ್ಟಿಕ್ ಬಳಕೆ: ವಿನಾಶದಂಚಿಗೆ ಗುಡಿ ಕೈಗಾರಿಕೆಗಳು
ಹರಪನಹಳ್ಳಿ: ಜಾಗತೀಕರಣದ ಪರಿಣಾಮ ಪ್ಲಾಸ್ಟಿಕ್ ಬಳಕೆ ಹೆಚ್ಚಿರುವ ಕಾರಣ ಗುಡಿ ಕೈಗಾರಿಕೆಗಳು ವಿನಾಶದಂಚಿಗೆ ತಲುಪಿವೆ. ಗುಡಿ ಕೈಗಾರಿಕೆ ನಂಬಿದ್ದ ಕುಟುಂಬಗಳು ಪರ್ಯಾಯ ವೃತ್ತಿಯತ್ತ ಮುಖ ಮಾಡುತ್ತಿವೆ.

ದಿನಬಳಕೆಗೆ ಬೇಕಾಗುವ ಮೊರ, ಚಿಬ್ಲಿ, ರೊಟ್ಟಿ ಬುಟ್ಟಿ, ಗೋಪಾಳ, ಪಡ್ಲಗಿ, ಪರಶುರಾಮ್, ತರಕಾರಿ ಬುಟ್ಟಿ, ಬಿದಿರಿನ ತಟ್ಟೆಗಳನ್ನು ಮೇದಾರ ಸಮುದಾಯದವರು ತಯಾರಿಸಿ ತಲೆಮೇಲೆ ಹೊತ್ತು ಹಳ್ಳಿ ಹಳ್ಳಿಗೂ ತೆರಳಿ ಮಾರಾಟ ಮಾಡುತ್ತಿದ್ದರು. ಆದರೀಗ ಈ ಎಲ್ಲ ಸಾಮಗ್ರಿಗಳು ಪ್ಲಾಸ್ಟಿಕ್ಮಯವಾಗಿರುವ ಕಾರಣ ಮೇದಾರ ಬುಟ್ಟಿಗಳಿಗೆ ಬೇಡಿಕೆ ಕುಸಿದಿದೆ.

‘ಗ್ರಾಮೀಣ ಸಂಸ್ಕೃತಿಯನ್ನು ಪಾಲಿಸುವ ಕೆಲವರು ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಮಗ್ರಿ ಖರೀದಿಸುತ್ತಾರೆ. ರಾಣೆಬೆನ್ನೂರು, ಹಾವೇರಿ, ಹೊಸಪೇಟೆ, ಆಂಧ್ರದಿಂದ ಬಿದಿರು ತಂದು ಮಾಡುವುದು ಕಷ್ಟವಾಗಿದೆ. ಅದರ ನಡುವೆಯೂ ಸಾಮಗ್ರಿಗಳನ್ನು ತಯಾರಿಸುತ್ತಿದ್ದೇವೆ. ಆದರೆ, ಮಾರಾಟವಾಗುತ್ತಿಲ್ಲ’ ಎಂದು ಮೇದಾರ ನಾಗರಾಜ್ ತಿಳಿಸಿದರು.

‘40 ವರ್ಷಗಳಿಂದ ಮದುವೆ ಕಾರ್ಯಕ್ರಮಕ್ಕೆ ಅಗತ್ಯ ಬಿದಿರಿನ ಬುಟ್ಟಿ ಬಾಸಿಂಗ ಪಟ್ಟಿ, ನೆಟ್ಟಗೆ ಪುಟ್ಟಿ, ಬುಟ್ಟಿಗಳನ್ನು ಮಾಡಿಕೊಡುತ್ತಿದ್ದೇವೆ. ನಮ್ಮ ಕುಲಕಸುಬನ್ನು ನಂಬಿ ಜೀವನ ನಡೆಸುವುದು ಕಷ್ಟಕರವಾಗಿದೆ’ ಎಂದು ಮೇದಾರ ನರಸಮ್ಮ ಮತ್ತು ಪುತ್ರ ಮಾರುತಿ ಬೇಸರವ್ಯಕ್ತಪಡಿಸಿದರು.

‘ಗಾಜಿಕೇರಿಯಲ್ಲಿ ತಾಮ್ರ, ಹಿತ್ತಾಳೆಯಲ್ಲಿ ಪೂಜಾ ಬಿಂದಿಗೆ, ಹಂಡೆವು ತಯಾರಿಸುವ ಟಂಕಸಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ದೂರದ ನಗರಗಳಿಂದ ಮುಂಗಡ ಬುಕ್ಕಿಂಗ್ ಮಾಡಿ ಸಾಮಾನು ಪಡೆಯುತ್ತಿದ್ದಾರೆ. ಗಂಗಾವತಿಯಿಂದ ಕೆ.ಜಿ.ಗೆ ₹ 900 ಕೊಟ್ಟು ತಾಮ್ರ ತಂದು ಸಾಮಗ್ರಿ ತಯಾರಿಸುತ್ತೇವೆ’ ಎಂದು ತಯಾರಕ ಉಸ್ಮಾನ್ ತಿಳಿಸಿದರು.

ನ್ಯಾಮತಿಯ ಶ್ಯಾವಿಗೆಗೆ ಬೇಡಿಕೆ
ನ್ಯಾಮತಿ: ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಈ ಹಿಂದೆ ಮನೆಗೆ ಬೇಕಾಗುವಷ್ಟು ಶ್ಯಾವಿಗೆಯನ್ನು ತಯಾರಿಸಿ ಇಟ್ಟುಕೊಳ್ಳುತ್ತಿದ್ದರು. ಆದರೆ, ಈಚಿನ ದಿನಗಳಲ್ಲಿ ಶ್ಯಾವಿಗೆ ತಯಾರಿಕೆ ಉದ್ಯಮವಾಗಿದೆ. ನ್ಯಾಮತಿ ಮತ್ತು ಸುರಹೊನ್ನೆ ಗ್ರಾಮಗಳಲ್ಲಿ 10 ಶ್ಯಾವಿಗೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ವರ್ಷದಲ್ಲಿ 4 ತಿಂಗಳು ಮಾತ್ರ ಶ್ಯಾವಿಗೆ ತಯಾರಿಸಲು ಉತ್ತಮ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಶ್ಯಾವಿಗೆಗೆ ಬಹಳ ಬೇಡಿಕೆ ಇರುತ್ತದೆ. ಗ್ರಾಹಕರು ಸಹ ಮನೆಯಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುತ್ತಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಶ್ಯಾವಿಗೆ ಘಟಕವನ್ನು ಮುಚ್ಚಲಾಗಿತ್ತು. ನಂತರ ಆಹಾರ ತಯಾರಿಕೆ ಎಂದು ಅನುಮತಿ ನೀಡಿದರು ಎನ್ನುತ್ತಾರೆ ಸುರಹೊನ್ನೆ ಗ್ರಾಮದ ಅನ್ನಪೂರ್ಣೆಶ್ವರಿ ಹೋಮ್ ಇಂಡಸ್ಟ್ರೀಸ್ ಮಾಲೀಕರಾದ ಎಚ್. ಕುಮಾರ್ ಮತ್ತು ಶೋಭಾ ದಂಪತಿ.

‘ಉದ್ಯಮ ಆರಂಭಿಸಲು ₹ 12 ಲಕ್ಷ ವೆಚ್ಚ ಮಾಡಿದ್ದೇವೆ. ಹಗಲು ಮತ್ತು ರಾತ್ರಿ ಪಾಳಿಯಲ್ಲಿ 15 ಮಂದಿ ಕೆಲಸ ಮಾಡುತ್ತಾರೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಾಗಲಕೋಟೆಯಲ್ಲಿ ನಮ್ಮ ಶ್ಯಾವಿಗೆ ಮಾರಾಟ ವ್ಯವಸ್ಥೆ ಇದೆ. ಕೆಲವರು ಇಲ್ಲಿಗೇ ಬಂದು ಖರೀದಿಸುತ್ತಾರೆ. ಉಳಿದಂತೆ ನಾವೇ ಸರಬರಾಜು ಮಾಡುತ್ತೇವೆ. ಶ್ರಮಕ್ಕೆ ತಕ್ಕ ಲಾಭಾಂಶ ಇದೆ’ ಎನ್ನುತ್ತಾರೆ ಅವರು.

ಮುಚ್ಚಿದ ಕೈಗಾರಿಕೆ ಪುನಶ್ಚೇತನಕ್ಕೆ ಒತ್ತು
ಚನ್ನಗಿರಿ: ತಾಲ್ಲೂಕಿನಲ್ಲಿ ಅಡಿಕೆ ಹಾಳೆ ತಯಾರಿಕೆ, ಗೊಂಬೆ, ಮೇಣದ ಬತ್ತಿ, ಸಾಂಬಾರು ಪದಾರ್ಥಗಳ ತಯಾರಿಕೆ ಮುಂತಾದವು ನೆಲಕಚ್ಚಿವೆ.

ಇದನ್ನು ಮನಗಂಡು ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆ ಅಡಿ ತಾಲ್ಲೂಕಿನ ಮಹಿಳಾ ಸ್ವ–ಸಹಾಯ ಸಂಘಗಳಿಗೆ ಬಂಡವಾಳ ಯೋಜನೆಯ ಮೂಲಕ ಕೈಗಾರಿಕೆಗಳನ್ನು ಕೈಗೊಳ್ಳಲು ಸಾಲ ವಿತರಣೆ ಕಾರ್ಯ ನಡೆಯುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಗಳಿಗೆ ₹ 1.25 ಲಕ್ಷ ಹಾಗೂ ಸಾಮಾನ್ಯ ವರ್ಗದ ಸಂಘಗಳಿಗೆ ₹ 1 ಲಕ್ಷ ಸಾಲ ನೀಡುವ ಮೂಲಕ ಮುಚ್ಚಿ ಹೋಗಿರುವ ಕೈಗಾರಿಕೆಗಳನ್ನು ಮತ್ತೆ ಪ್ರಾರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.

ಪ್ರಸ್ತುತ ಕಾರಿಗನೂರು ಗ್ರಾಮದಲ್ಲಿ ನ್ಯಾಪ್ಕಿನ್ ತಯಾರಿಕೆ, ಗೋಪನಾಳ್ ಗ್ರಾಮದಲ್ಲಿ ಬೊಂಬೆ, ಹೇರ್ ಆಯಿಲ್, ಸರ ತಯಾರಿಕೆ ಹಾಗೂ ನೀತಿಗೆರೆ ಗ್ರಾಮದಲ್ಲಿ ಸಾಂಬಾರು ಪದಾರ್ಥಗಳ ತಯಾರಿಕೆ ಕಾರ್ಯವನ್ನು ಅಲ್ಲಿನ ಮಹಿಳಾ ಸಂಘಗಳ ಮಹಿಳೆಯರು ಮಾಡುತ್ತಿದ್ದಾರೆ. ಕೆಲವು ಕಡೆ ರೊಟ್ಟಿ, ಚಟ್ನಿ ಪುಡಿ ತಯಾರಿಕೆ ನಡೆದಿದೆ. ಮಹಿಳಾ ಸಂಘಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ತಾಲ್ಲೂಕು ಪಂಚಾಯಿತಿಯಿಂದ ಮಹಿಳೆಯರು ಇಚ್ಛಿಸುವ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ನಾವೇ ಮಾಡುತ್ತಿದ್ದೇವೆ ಎಂದು ನೋಡಲ್ ಅಧಿಕಾರಿ ವಿಜಯ ಕುಮಾರ್ ತಿಳಿಸಿದರು.

ಕೊರೊನಾ ಕಾರಣ ಗೃಹ, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ತೀವ್ರ ಪೆಟ್ಟು ಬಿದ್ದಿತು. ಕೊಳ್ಳುವವರು ಇಲ್ಲದೆ, ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಬೇಕಾಯಿತು. ಬ್ಯಾಂಕ್ ಸಾಲ ತೀರಿಸುವ ಅವಧಿಯನ್ನು ವಿಸ್ತರಿಸಲಾಯಿತು. ಉತ್ಪನ್ನಗಳ ಮಾರಾಟಕ್ಕೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲದಿರುವುದರಿಂದ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ಆದ್ಯತೆ ಮೇರೆಗೆ ಸ್ಟಾಲ್ ಕಲ್ಪಿಸಲಾಗುತ್ತಿದೆ.
-ಬಿ. ಆನಂದ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.