ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಬರದೆ ಬದಲಾವಣೆ ಸಾಧ್ಯವಿಲ್ಲ: ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ

Last Updated 31 ಅಕ್ಟೋಬರ್ 2019, 15:08 IST
ಅಕ್ಷರ ಗಾತ್ರ

ದಾವಣಗೆರೆ: ನಾವು ಎಲ್ಲಿಯವರೆಗೆ ಮುಸ್ಲಿಂ, ಹಿಂದೂ ಎಂದು ಬೇದ ಮಾಡುತ್ತೇವೆಯೋ ಅಲ್ಲಿಯವರೆಗೆ ಆರ್‌ಎಸ್‌ಎಸ್‌, ಬಿಜೆಪಿ ನಮ್ಮ ಮೇಲೆ ಸವಾರಿ ಮಾಡುತ್ತವೆ. ನಾವು ಮನುಷ್ಯರು ಎಂಬ ಭಾವನೆ ಬರುವುದಿಲ್ಲವೋ ಅಲ್ಲಿಯವರೆಗೆ ಬದಲಾವಣೆ ಸಾಧ್ಯವಿಲ್ಲ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.

ಗುರುವಾರ ನಗರದ ರೋಟರಿ ಭಾಲಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಶೇ 70 ರಷ್ಟು ಚುನಾವಣೆ ಆಗುವ ಕಡೆ ಶೇ 32 ಮತದಾನವಾಗಿದೆ. ಜನರು ರಾಜಕೀಯದತ್ತ ನಿರಾಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಆರ್ಥಿಕತೆ ಹಿಂಜರಿತ ಇದೆ. ಜನರು ಬ್ಯಾಂಕಿನಲ್ಲಿ ಹಾಕಿದ ಹಣ ವಾಪಸ್‌ ಬರುತ್ತದೆಯೋ ಎಂಬ ನಿರೀಕ್ಷೆ ಕಳೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 10 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆಟೊಮೊಬೈಲ್‌ ಕ್ಷೇತ್ರದಲ್ಲೂ ಹಿಂಜರಿಕೆ ಇದೆ. ಆರ್ಥಿಕ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ವಿರೋಧಪಕ್ಷಗಳೂ ವರ್ಚಸ್ಸು ಕಳೆದುಕೊಳ್ಳುತ್ತಿವೆ. ನಾಯಕರನ್ನು ಕಳ್ಳರಂತೆ ಜೈಲಿಗೆ ಕಳುಹಿಸಲಾಗುತ್ತಿದೆ. ಬುದ್ಧಿಜೀವಿಗಳು, ಚಳವಳಿಗಾರರ ಮೇಲೆ ಮೊಕದ್ದಮೆ ದಾಖಲಾಗುತ್ತಿದೆ. ಪ್ರಧಾನಿ ಮೇಲೂ ಬೇಹುಗಾರಿಕೆ ನಡೆದಿತ್ತು. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂಬುದನ್ನು ಚಿಂತಿಸಬೇಕಿದೆ’ ಎಂದು ಹೇಳಿದರು.

ಯುಗ ಯುಗದವರೆಗೆ ಒಂದೇ ಪಕ್ಷ ಇರಲು ಸಾಧ್ಯವಿಲ್ಲ. ಬದಲಾವಣೆ ಆಗಲೇಬೇಕು. ವಾಸ್ತವ ಬೇರೆ ಕಲ್ಪನೆ ಬೇರೆ. ವಾಸ್ತವ ಬದಲಾಯಿಸಲು ಸಾಧ್ಯವಿಲ್ಲ. ಹೊಸ ಸವಾಲುಗಳಿಂದ ಆಂದೋಲನ ರೂಪಿಸುವ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.

‘ಪ್ರತಿಷ್ಠೆ ತೊರೆದಾಗ ಬದಲಾವಣೆ ಸಾಧ್ಯ’

ಶಿಕ್ಷಣ, ಆರೋಗ್ಯ, ಉದ್ಯೋಗ, ಅಪೌಷ್ಟಿಕತೆ ವಿಷಯದ ಮೇಲೆ ಹೋರಾಡುವ ಒಂದೇ ಒಂದು ಸಂಘಟನೆ ದೇಶದಲ್ಲಿ ಇಲ್ಲ. 5 ಜನ ದಲಿತ ನಾಯಕರು ಒಟ್ಟಾಗಿ ಬಂದರೆ ದೇಶದಲ್ಲಿ ದೊಡ್ಡ ದಲಿತ ಪಕ್ಷ ಕಟ್ಟಲು ಸಾಧ್ಯ. ದೊಡ್ಡ ಆಂದೋಲನ ಆಗಲು ಸಾಧ್ಯ. ಆದರೆ ನಮ್ಮಲ್ಲಿನ ಪ್ರತಿಷ್ಠೆ, ಅಹಂನಿಂದ ಅದು ಆಗುತ್ತಿಲ್ಲ ಎಂದು ಜಿಗ್ನೇಶ್‌ ಮೇವಾನಿ ಹೇಳಿದರು.

ಆರ್‌ಎಸ್‌ಎಸ್‌, ಬಿಜೆಪಿ ಶ್ರೇಣಿಕೃತ ವ್ಯವಸ್ಥೆಯಿಂದ ಕೆಲಸ ಮಾಡಿ ಈ ಹಂತಕ್ಕೆ ಬಂದಿದೆ. ಆದರೆ ಉಳಿದ ಪಕ್ಷಗಳು, ದಲಿತ ಸಂಘಟನೆಗಳು ಈ ಬಗ್ಗೆ ಯೋಚಿಸುತ್ತಿಲ್ಲ. ದೇಶದಲ್ಲಿ ಶ್ರಮಿಕ ವರ್ಗದವರಿಗೆ ಬೆಲೆಯೇ ಇಲ್ಲ. ಅವರನ್ನು ಸರ್ಕಾರಗಳೂ ಕಡೆಗಣಿಸಿವೆ. 6 ಗಂಟೆ ದುಡಿಯುವ ಕಾರ್ಮಿಕರು ಕೇವಲ ₹ 20 ಪಡೆಯುವ ಸ್ಥಿತಿ ಇದೆ. ದೇಶದಲ್ಲಿ ₹ 5 ಸಾವಿರಕ್ಕಿಂತ ಕಡಿಮೆ ಆದಾಯ ಪಡೆಯುವ ಕೋಟಿ ಜನರು ಇದ್ದಾರೆ. ಈ ಸ್ಥಿತಿ ಬದಲಾಗಬೇಕು ಎಂದು ಹೇಳಿದರು.

ಬಿಜೆಪಿ, ಆರ್‌ಎಸ್‌ಎಸ್‌ ಮಂದಿರ, ಮಸೀದಿ ಹೆಸರಿನಲ್ಲಿ ಜನರಲ್ಲಿ ಕಿಚ್ಚು ಹಚ್ಚುತ್ತಿವೆ. ಆದರೆ ದಲಿತರ ಮೇಲೆ ಮತ್ತೊಂದು ದೌರ್ಜನ್ಯ ಆಗುವವರೆಗೆ ದಲಿತ ಸಂಘಟನೆಗಳು ಬೀದಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT