ಭಾನುವಾರ, ಮೇ 22, 2022
21 °C

ವೈಫಲ್ಯ, ಬೆಲೆ ಏರಿಕೆಯಿಂದ ಪಾರಾಗಲು ಧರ್ಮದ ಹೆಸರಲ್ಲಿ ದಾಂದಲೆ: ಎಚ್‌ಡಿಕೆ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಅಭಿವೃದ್ಧಿಯಲ್ಲಿ ವೈಫಲ್ಯ ಹಾಗೂ ಬೆಲೆ ಏರಿಕೆಯಿಂದ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯದ ಬಿಜೆಪಿ ಸರ್ಕಾರ ಹಿಂದೂಪರ ಸಂಘಟನೆಗಳಿಂದ ಅಶಾಂತಿ ಸೃಷ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಬುಧವಾರ ಗ್ರಾಮದೇವತೆ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೂರದೃಷ್ಟಿಯಿಲ್ಲದ ಆಡಳಿತದಿಂದ ರಾಜ್ಯವು ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ. ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಜನ ಬೇಸತ್ತು ಬಿಜೆಪಿ ಸರ್ಕಾರವನ್ನು ಶಪಿಸುತ್ತಿದ್ದಾರೆ. ಜನರ ಆಕ್ರೋಶದಿಂದ ಉಳಿಯಲು ಈ ಬಿಜೆಪಿ ಸರ್ಕಾರವು ಹಿಜಾಬ್, ಹಲಾಲ್, ಮಸೀದಿ ಮೈಕ್, ಜಾತ್ರೆಯಲ್ಲಿ ವ್ಯಾಪಾರ ಮಾಡುವ ವಿಷಯಗಳನ್ನಿಟ್ಟುಕೊಂಡು ರಾಜ್ಯವನ್ನು ಹೊಡಿ, ಬಡಿ ರಾಜ್ಯವನ್ನಾಗಿ ಪರಿವರ್ತಿಸಿದೆ. ಕುವೆಂಪುರವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ರಾಜ್ಯವನ್ನು ಹಿಂಸೆಯ ಪ್ರತಿರೂಪವಾಗಲು ಬಿಡುವುದಿಲ್ಲ ಎಂದು ಹೇಳಿದರು.

‘ನಾನು ಎರಡು ಬಾರಿ ಮುಖ್ಯಂತ್ರಿಯಾಗಿದ್ದಾಗ, ರೈತರ ಸಾಲ ಮನ್ನಾ ಮಾಡಿ, ಅವರ ಕಷ್ಟಗಳಿಗೆ ಸ್ಪಂದಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದೆ. ಎಲ್ಲ ಧರ್ಮೀಯರ ನಡುವೆ ಸಾಮರಸ್ಯ ಕಾಪಾಡಲಾಗಿತ್ತು ಬೆಲೆ ಏರಿಕೆ ತಡೆದಿದ್ದೆ ಒಟ್ಟಾರೆ ನನ್ನ ಅವಧಿಯಲ್ಲಿ ರಾಜ್ಯದ ಜನತೆ ಸುಖ, ಶಾಂತಿಯಿಂದ ಇದ್ದರು’ ಎಂದರು.

‘ಸಿರಿಗೆರೆ ಮಠಾಧೀಶರ ಆಶಯದಂತೆ ನನ್ನ ಅವಧಿಯಲ್ಲಿ ಹರಿಹರದಿಂದ ಜಗಳೂರಿಗೆ ನೀರು ಹರಿಸುವ ಯೋಜನೆಗೆ, ಅಪ್ಪರ್ ಭದ್ರಾ ಯೋಜನೆ ಮಂಜೂರಾತಿ ನೀಡಲಾಯಿತು. ಆದರೆ ಕೆಲವರು ಈ ಯೋಜನೆಗಳನ್ನು ತಾವು ಮಾಡಿದ್ದೆಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ನಾವು ಮಾಡಿದ ಕೆಲಸ ಜನ ಮಾನಸದಲ್ಲಿದೆ’ ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ‘ಮತ್ತೆ ಕುಮಾರಣ್ಣ ಮುಖ್ಯಮಂತ್ರಿ ಆಗುವ ಮುನ್ಸೂಚನೆ ಕಾಣುತ್ತಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇಂದಿನ ಹಿಂಸೆ, ಧರ್ಮಗಳ ಮಧ್ಯೆ ಕಂದಕ ಸೃಷ್ಟಿಯ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದರೂ ಅವರಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ. ನನ್ನ ಅವಧಿಯಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ₹ 400 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಅಡಿಪಾಯ ಹಾಕಿದೆ. ಜೆಡಿಯು ಮತ್ತು ಜೆಡಿಎಸ್ ಪಕ್ಷ ಒಂದಾಗುವ ಮೂಲಕ ಮತ್ತೆ ಜನತಾ ಪರಿವಾರಕ್ಕೆ ಅಧಿಕಾರ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಚೌಡಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮುಖಂಡರಾದ ಎಚ್.ಎಸ್. ಅರವಿಂದ, ಅಮಾನುಲ್ಲಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೀಲಾ ಕುಮಾರಿ, ಮಾಜಿ ಮೇಯರ್‌ ಅಜಯ್ ಕುಮಾರ್ ಬಿ.ಜಿ., ಬಸವರಾಜ್, ಪರಮೇಶ್ವರ ಗೌಡ್ರು ಸುಬಾಷ್, ಮರಿಸಿದ್ದಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು