ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.3ಕ್ಕೆ ದಾವಣಗೆರೆ ಸುಸಜ್ಜಿತ ರೈಲುನಿಲ್ದಾಣ ಉದ್ಘಾಟನೆ?

₹18.45 ಕೋಟಿ ವೆಚ್ಚದಲ್ಲಿ ನಿರ್ಮಾಣ l ಪ್ರಯಾಣಿಕರ ಸುರಕ್ಷತೆಗೆ ಒತ್ತು
Last Updated 23 ಮಾರ್ಚ್ 2021, 2:36 IST
ಅಕ್ಷರ ಗಾತ್ರ

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ರೈಲುನಿಲ್ದಾಣ ಐದು ದಶಕಗಳ ನಂತರ ₹18.45 ಕೋಟಿ ವೆಚ್ಚದಲ್ಲಿ ನವೀಕೃತಗೊಂಡಿದ್ದು, ಏಪ್ರಿಲ್ 3ರಂದು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

ದಾವಣಗೆರೆ ರೈಲ್ವೆನಿಲ್ದಾಣವು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣವಾಗಿದೆ. ಕೋವಿಡ್‌ಗೆ ಮುಂಚೆ ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲು ಸೇರಿ ಪ್ರತಿ ದಿನವೂ 44 ರೈಲುಗಳು ಇಲ್ಲಿಂದ ಸಂಚರಿಸುತ್ತಿದ್ದವು. ಇದೀಗ 22 ರೈಲುಗಳು ಸಂಚರಿಸುತ್ತಿವೆ. ಏಪ್ರಿಲ್ 1ರಿಂದ ಶೇ 90ರಷ್ಟು ಅಂದರೆ ಅಂದಾಜು 36 ರೈಲುಗಳು ಈ ನಿಲ್ದಾಣದಿಂದ ಸಂಚರಿಸಲಿದ್ದು, 8 ಸಾವಿರದಿಂದ 10 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

ಸ್ವಾತಂತ್ರ್ಯಪೂರ್ವದಲ್ಲಿ ನಿ‌ರ್ಮಾಣಗೊಂಡಿರುವ ಈ ರೈಲುನಿಲ್ದಾಣ ಆಧುನಿಕ ಸ್ಪರ್ಶದೊಂದಿಗೆ ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ. ಭದ್ರತಾ ದೃಷ್ಟಿ ಯಿಂದ ಪ್ರತಿಯೊಬ್ಬ ಪ್ರಯಾಣಿಕರ ಮುಖಚರ್ಯೆ ದಾಖಲಿಸುವ ಅತ್ಯಾಧು ನಿಕ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ಎಸ್ಕಲೇಟರ್ ಸೌಲಭ್ಯ

ಎಸ್ಕಲೇಟರ್ ಸೌಲಭ್ಯ ಹೊಂದಿರುವ ರಾಜ್ಯದ 5 ನಿಲ್ದಾಣಗಳ ಪೈಕಿ ದಾವಣಗೆರೆ ನಿಲ್ದಾಣವೂ ಒಂದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ಎಸ್ಕಲೇಟರ್ ಸೌಲಭ್ಯವಿದೆ.

₹18.45 ಕೋಟಿ ವೆಚ್ಚ

ನಿಲ್ದಾಣದ ಮುಖ್ಯ ಕಟ್ಟಡ, ಪಾರ್ಕಿಂಗ್ ಆವರಣ, ಲಿಫ್ಟ್, ನಿಲ್ದಾಣದ ಎರಡು ಕಡೆ ಎಸ್ಕಲೇಟರ್ ವ್ಯವಸ್ಥೆ, ಮುಖ್ಯದ್ವಾರದಲ್ಲಿ ದೀಪಾಲಂಕಾರ ವ್ಯವಸ್ಥೆ, ಗಡಿಯಾರ ಕಂಬದ ಮತ್ತೊಂದು ದ್ವಾರ, ಟಿಕೆಟ್ ವಿತರಣಾ ಕೊಠಡಿಗಳು ಸೇರಿವೆ.

23 ಕೊಠಡಿ

‌ರೈಲ್ವೆನಿಲ್ದಾಣದ ಮೊದಲ ಮಹಡಿಯಲ್ಲಿ ಪಾರ್ಸೆಲ್ ಆಫೀಸ್‌ ರೂಂ, ಗಣ್ಯವ್ಯಕ್ತಿಗಳ ವಿಶ್ರಾಂತಿ ಕೊಠಡಿ, ಸ್ಟೇಷನ್ ಮಾಸ್ಟರ್ ಆಫೀಸ್, ಚೀಫ್ ಟಿಕೆಟ್ ಇನ್‌ಸ್ಪೆಕ್ಟರ್ ಕೊಠಡಿ, ಬುಕ್ಕಿಂಗ್ ಆಫೀಸ್, ಬುಕ್ ಸ್ಟೋರ್, ಕೆಫೆಟೇರಿಯಾ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಮುಂಗಡ ಬುಕ್ಕಿಂಗ್ ಕೊಠಡಿಗಳು ನಿರ್ಮಾಣವಾಗಿವೆ.

2ನೇ ಮಹಡಿಯಲ್ಲಿ ವಿಶ್ರಾಂತಿ ಕೊಠಡಿಗಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಡಾರ್ಮಿಟರಿ, ಗ್ರೂಪ್ ಡಿ ರೆಸ್ಟ್ ರೂಂ, ಕೇರ್‌ ಟೇಕರ್ ರೂಂ, ಎಸ್‌ಎಸ್‌ಇ, ಸಿಗ್ನಲ್ ಆಫೀಸ್, ಸೂಪರ್‌ವೈಸರ್ ವಿಶ್ರಾಂತಿ ಕೊಠಡಿ ಇದೆ.

'ಐ ಲವ್ ಯು ಡಿವಿಜಿ'

ರೈಲ್ವೆ ನಿಲ್ದಾಣದಲ್ಲಿ ಮುಖ್ಯ ಆಕರ್ಷಣೆಯೆಂದರೆ ‘ಐ ಲವ್‌ ಯು ಡಿವಿಜಿ’ ಎಂದು ಕೆಂಪು ಬಣ್ಣದಲ್ಲಿ ಬರೆದಿದ್ದು, ಎಲ್ಲರನ್ನೂ ಆಕರ್ಷಿಸಲಿದೆ. ಲವ್ ಸಿಂಬಲ್‌ ಅನ್ನು ಚಿತ್ರಿಸಲಾಗುವುದು. 100 ಅಡಿ ಎತ್ತರದ ತ್ರಿವರ್ಣ ಧ್ವಜ ಸ್ತಂಭ, ವರ್ಣರಂಜಿತ ದೀಪಾಲಂಕಾರ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT