ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ತಂತ್ರಜ್ಞಾನ ರಫ್ತು ರಾಷ್ಟ್ರವಾಗಿ ಭಾರತ: ರಾಜೀವ್ ಚಂದ್ರಶೇಖರ್

ಮಧ್ಯ ಕರ್ನಾಟಕದ ಮೊದಲ ಎಸ್.ಟಿ.ಪಿ.ಐ ಕೇಂದ್ರಕ್ಕೆ ಚಾಲನೆ
Last Updated 26 ನವೆಂಬರ್ 2022, 4:15 IST
ಅಕ್ಷರ ಗಾತ್ರ

ದಾವಣಗೆರೆ: 2023ರ ಜಿ–20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಭಾರತ ವಹಿಸಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಜಾಗತಿಕ ಪಾಲುದಾರಿಕೆಯಲ್ಲೂ ಅಧ್ಯಕ್ಷ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಕೇಂದ್ರದಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ(ಎಸ್‌ಟಿಪಿಐ) ದಾವಣಗೆರೆ ಕೇಂದ್ರವನ್ನು ಶುಕ್ರವಾರ ವರ್ಚ್ಯುಯಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಯುವಕರು ಸ್ಟಾರ್ಟ್ ಅಪ್‌ಗಳ ಆರಂಭ, ಸಂಶೋಧನೆ, ಸಾಮರ್ಥ್ಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬೇರೆ ರಾಷ್ಟ್ರಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಕೆಯ ರಾಷ್ಟ್ರವಾಗಿ ಇಂದು ಭಾರತ ಉಳಿದಿಲ್ಲ. ಬದಲಾಗಿ ಯುವಕರ ಆವಿಷ್ಕಾರಗಳ ಫಲವಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ರಾಷ್ಟ್ರವಾಗಿ ಬದಲಾಗಿದೆ’
ಎಂದರು.

‘ಸಣ್ಣಪುಟ್ಟ ನಗರಗಳ ಯುವಕರಿಗೂ ತಂತ್ರಜ್ಞಾನದ ಲಾಭ ಲಭಿಸಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಆಶಯವಾಗಿದ್ದು, ಇದರ ಸಾಕಾರಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ‘ಬಿಯಾಂಡ್ ಬೆಂಗಳೂರು’ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರವೂ ಇದಕ್ಕೆ ಬೆಂಬಲ ನೀಡುತ್ತಿದೆ. ಬೆಂಗಳೂರು, ಚನ್ನೈಯಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ತಂತ್ರಜ್ಞಾನವನ್ನು ಎರಡು ಮತ್ತು ಮೂರನೇ ದರ್ಜೆಯ ನಗರಗಳಿಗೂ ವಿಸ್ತರಿಸುವ ಉದ್ದೇಶದಿಂದ ಹೊಸ ಸ್ಟಾರ್ಟ್ ಅಪ್ ಇನ್‍ಕ್ಯುಬೇಷನ್ ಸೆಂಟರ್‌ಗಳನ್ನು ತೆರೆಯಲಾಗುವುದು’ ಎಂದು ಹೇಳಿದರು.

‘ನಾಲ್ಕೈದು ವರ್ಷಗಳಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, 75 ಸಾವಿರ ಸ್ಟಾರ್ಟ್‌ಅಪ್‌ಗಳು ಆರಂಭವಾಗಿವೆ. ದೇಶದಲ್ಲಿ ಡಿಜಿಟಲ್ ಉದ್ದಿಮೆಗಳು ಇನ್ನೂ ಹೆಚ್ಚಾಗಲಿವೆ. 2014ರಲ್ಲಿ ಶೇ 92ರಷ್ಟು ಮೊಬೈಲ್‍ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಪ್ರಸ್ತುತ ಶೇ 97ರಷ್ಟು ಮೊಬೈಲ್‍ಗಳು ಉತ್ಪಾದನೆ ಮಾಡುತ್ತಿದೆ. ₹ 72 ಸಾವಿರ ಕೋಟಿ ಮೌಲ್ಯದ ಮೊಬೈಲ್‌ಗಳನ್ನು ಯೂರೋಪ್, ಅಮೆರಿಕಾ, ಆಫ್ರಿಕಾ ಹಾಗೂ ಏಷ್ಯಾದ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ’ ಎಂದರು.

‘ದಾವಣಗೆರೆಯಲ್ಲಿ ಎಸ್‌ಟಿಪಿಐ ಕೇಂದ್ರ ಸ್ಥಾಪನೆಗೆ 2015ರಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‍ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. 2018ರಲ್ಲಿ ಅನುಮೋದನೆ ಸಿಕ್ಕಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಈ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಜಾಗ ನೀಡಲು ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಸಮ್ಮತಿಸಿದರು. ಶಾಶ್ವತ ಕಟ್ಟಡಕ್ಕೆ ದಾವಣಗೆರೆ ಹರಿಹರ ಮಧ್ಯೆ ದೊಗ್ಗಳ್ಳಿ ರೈಲ್ವೆ ಜಂಕ್ಷನ್ ಬಳಿ 2 ಎಕರೆ ಜಮೀನು ಗುರುತಿಸಿದ್ದು, ಶೀಫ್ರ ಜಮೀನು ಮಂಜೂರಾಗಲಿದೆ. ಕೇಂದ್ರ ಸಚಿವರು ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.

ಐಟಿ, ಬಿಟಿ, ಕೌಶಲಾಭಿವೃದ್ಧಿ ಮತ್ತು ತರಬೇತಿ, ಕೈಗಾರಿಕೆ ವಾಣಿಜ್ಯ ಇಲಾಖೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ವರ್ಚ್ಯುಯಲ್ ಮೂಲಕ ಮಾತನಾಡಿ, ‘ಭಾರತದಲ್ಲಿ 62 ಕಡೆ ಎಸ್‌ಟಿಪಿಐ ಕೇಂದ್ರಗಳು ಇದ್ದು, 2021–22 ಎಸ್‌ಟಿಪಿಐ ಮೂಲಕ ಐಟಿ ರಫ್ತು ₹52 ಕೋಟಿಯಷ್ಟು ಇದ್ದಿದ್ದು, 6.37 ಲಕ್ಷ ಕೋಟಿಯಾಗಿದೆ. ರಾಜ್ಯದಲ್ಲಿ ಮೈಸೂರು, ಹುಬ್ಬಳ್ಳಿ, ಮಂಗಳೂರು ಹಾಗೂ ಮಣಿಪಾಲ್‌ನಲ್ಲಿ ಕೇಂದ್ರಗಳು ಇದ್ದು, 5ನೆಯದಾಗಿ ದಾವಣಗೆರೆಯಲ್ಲಿ ಆರಂಭವಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ವರ್ಚುಯಲ್ ಆಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಗರದ ಮೂರು ಸ್ಟಾರ್ಟ್ ಅಪ್ ಕಂಪನಿಗಳಿಗೆ ಎಸ್‌ಟಿಪಿಐ ಇನ್‌ಕ್ಯುಬಿಷೇನ್‌ ಸೆಂಟರ್‌ನ ಅಲಾಟ್‌ಮೆಂಟ್ ಪತ್ರಗಳನ್ನು ವಿತರಿಸಲಾಯಿತು. ಶಾಸಕ ಎಸ್.ಎ. ರವೀಂದ್ರನಾಥ್, ಮಹಾನಗರ ಪಾಲಿಕೆ ಮೇಯರ್ ಆರ್. ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯಿತ್ರಿಬಾಯಿ ಖಂಡೋಜಿರಾವ್, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಇದ್ದರು. ಅರವಿಂದ ಕುಮಾರ್ ಸ್ವಾಗತಿಸಿದರು.

*
ಶೈಕ್ಷಣಿಕವಾಗಿ ಬೆಳೆಯುತ್ತಿರುವ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಇಕೊ–ಸಿಸ್ಟಮ್ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸುವ ಉದ್ದೇಶವಿದೆ.
-ನಾಗರಾಜರೆಡ್ಡಿ, ಇನ್ವೆಸ್ಟ್ ದಾವಣಗೆರೆ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT