ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕುಮುಕ್ತ ವಲಯ ನಾಮಫಲಕ ಅಳವಡಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್

Published 23 ಡಿಸೆಂಬರ್ 2023, 6:11 IST
Last Updated 23 ಡಿಸೆಂಬರ್ 2023, 6:11 IST
ಅಕ್ಷರ ಗಾತ್ರ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಯುವಕರು ಗುಟ್ಕಾ, ತಂಬಾಕು ಹಾಗೂ ಮಾದಕ ವ್ಯಸನಗಳಿಗೆ ಹೆಚ್ಚಾಗಿ ಒಳಗಾಗುತ್ತಿದ್ದು, ಇದರ ದುಷ್ಪರಿಣಾಮಗಳ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸುವುದರ ಮೂಲಕ ತಂಬಾಕು ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಪ್ರತಿದಿನ 293 ಮಕ್ಕಳು ತಂಬಾಕಿಗೆ ಆಕರ್ಷಿತರಾಗುತ್ತಿದ್ದು, ಶಾಲಾ –ಕಾಲೇಜುಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ತಂಬಾಕುಮುಕ್ತ ವಲಯ ನಾಮಫಲಕಗಳನ್ನು ಅಳವಡಿಸಬೇಕು’ ಎಂದು ಹೇಳಿದರು.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ಅಂಗಡಿಗಳಿದ್ದು, ಅವುಗಳಲ್ಲಿ ಕೇವಲ 1500 ಮಾತ್ರ ಲೈಸೆನ್ಸ್ ಪಡೆದು ತಂಬಾಕು ಮಾರಾಟ ಮಾಡುತ್ತಿದ್ದು, ಉಳಿದ ಅಂಗಡಿ ಮಾಲೀಕರಿಗೂ ಪರವಾನಗಿ ನೀಡಲು ಕ್ರಮವಹಿಸಬೇಕು. ಲೈಸೆನ್ಸ್ ಪಡೆಯದೇ ತಂಬಾಕು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

‘ತಂಬಾಕು ನಿಯಂತ್ರಣ ತನಿಖಾ ದಳದ ಸದಸ್ಯರೊಂದಿಗೆ ತಾಲ್ಲೂಕು ಮಟ್ಟದಲ್ಲಿ ಕಡ್ಡಾಯವಾಗಿ ತಿಂಗಳಿಗೆ ಒಂದು ತಂಬಾಕು ದಾಳಿಯನ್ನು ಕೈಗೊಳ್ಳಬೇಕು ಹಾಗೂ ತ್ರೈಮಾಸಿಕ ಸಭೆಯನ್ನು ಏರ್ಪಡಿಸಬೇಕು. ಎನ್.ಎಸ್.ಎಸ್ ಕ್ಯಾಂಪ್‍ಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಡೆ ಬರಹಗಳನ್ನು ಬರೆಸಬೇಕು. ದಾವಣಗೆರೆ ವಿಶ್ವವಿದ್ಯಾನಿಲಯ ಸುತ್ತಮುತ್ತ ಮದ್ಯ ಹಾಗೂ ತಂಬಾಕು ಅಕ್ರಮವಾಗಿ ಮಾರಾಟವಾಗುತ್ತಿರುವುದು ಕೇಳಿಬರುತ್ತಿದ್ದು ಪೋಲೀಸ್ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್‌, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಷಣ್ಮುಖಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ನಾಗೇಂದ್ರಪ್ಪ, ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಎನ್.ಟಿ.ಸಿ.ಪಿ ಕಾರ್ಯಾಲಯ ಅಧಿಕಾರಿ ಡಾ. ಜಿ.ಡಿ. ರಾಘವನ್, ಚನ್ನಗಿರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ಆರ್.ಟಿ.ಒ ಕಚೇರಿ ಅಧೀಕ್ಷಕ ಶಶಿಧರ.ಪಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT