ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 21ಕ್ಕೆ ಮನೆಯಲ್ಲೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಪತ್ರಕರ್ತರಿಗೆ ಆಯುಷ್ ಕಿಟ್ ವಿತರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 18 ಜೂನ್ 2021, 5:23 IST
ಅಕ್ಷರ ಗಾತ್ರ

ದಾವಣಗೆರೆ: ಜೂನ್‌ 21ರಂದು ಅಂತರರಾಷ್ಟ್ರೀಯ ಯೋಗದಿನವನ್ನು ನಮ್ಮ ನಮ್ಮ ಮನೆಗಳಲ್ಲೇ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

‘ಯೋಗಭ್ಯಾಸದೊಂದಿಗೆ ಇರಿ-ಮನೆಯಲ್ಲಿಯೇ ಇರಿ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಬೆಂಗಳೂರಿನ ಚನ್ನಬಸವಣ್ಣ ಸ್ವಾಮೀಜಿ ಆನ್ಲೈನ್ ಮೂಲಕ ಯೋಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 6ರಿಂದ 8ರ ವರೆಗೆ ಮನೆಯಲ್ಲಿಯೇ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯೋಗ ದಿನದ ಅಂಗವಾಗಿ ಜೂನ್‌ 18ರ ಬೆಳಿಗ್ಗೆ 10.30ಕ್ಕೆ ರಿಂಗ್ ರಸ್ತೆ, ಶಾರದಾಂಬಾ ದೇವಸ್ಥಾನದ ಸಮೀಪದ ಕರ್ನಾಟಕ ಹಿಮೋಫಿಲಿಯ ಸೊಸೈಟಿಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಕ್ತದಾನ ಮಾಡಿದವರಿಗೆ ಜೂನ್‌ 21ರಂದು ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುವುದು. ಜೂನ್ 19ರಂದು ಬೆಳಿಗ್ಗೆ 9ಕ್ಕೆ ಪೊಲೀಸರಿಗೆ ಹಬೆಯಂತ್ರ ವಿತರಣೆ ಮಾಡಲಾಗುವುದು. ಮಧ್ಯಾಹ್ನ 12 ರಿಂದ ಸಂಜೆ 5ರ ವರೆಗೆ 8 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಆನ್‍ಲೈನ್ ಯೋಗ ಸ್ಪರ್ಧೆ ಏರ್ಪಡಿಸಲಾಗಿದೆ. ಯೋಗ ಸ್ಪರ್ಧೆಯ ಆನ್‍ಲೈನ್ ಲಿಂಕ್ https://meet.google.com/kjv-vomk-phj ಬಳಸಿ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಿದರು.

ಜೂನ್‌ 20ರ ಬೆಳಿಗ್ಗೆ 6ಕ್ಕೆ ಶಿರಮಗೊಂಡನಹಳ್ಳಿಯಲ್ಲಿರುವ ತರಳಬಾಳು ಕೋವಿಡ್ ಕೇರ್ ಸೆಂಟರ್, ಜೆ.ಎಚ್. ಪಟೇಲ್ ಬಡಾವಣೆ ಮತ್ತು ತಾಜ್ ಪ್ಯಾಲೇಸ್ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಆರೋಗ್ಯ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಂತೆ ಜೂನ್‌ 21ರಂದು ಮನೆಯಲ್ಲಿಯೇ ಯೋಗ ದಿನಾಚರಣೆ ನಡೆಯಲಿದೆ ಎಂದು ವಿವರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಮತ್ತು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ನಗರದ ಮಾಧ್ಯಮ ಪ್ರತಿನಿಧಿಗಳಿಗೆ ಇದೇ ಸಂದರ್ಭದಲ್ಲಿ ಆಯುಷ್ ಕಿಟ್ ವಿತರಿಸಲಾಯಿತು.

ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ‘ಚ್ಯವನ್‍ಪ್ರಾಶ್ ಸೇವನೆಯಿಂದ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರಿಂದ ದೇಹಕ್ಕೆ ಬರುವ ಯಾವುದೇ ವೈರಸ್ ತಡೆಗಟ್ಟಲು ಬೇಕಾದ ಸಾಮಥ್ರ್ಯ ನಮ್ಮಲ್ಲಿರುತ್ತದೆ. ಹೀಗಾಗಿ ಇದರ ಸದುಪಯೋಗಪಡಿಸಿಕೊಳ್ಳಿ’ ಎಂದು ತಿಳಿಸಿದರು.

ಪ್ರತಿಯೊಬ್ಬರು ತಮಗೆ ಬರುವ ಯಾವುದೇ ಯೋಗದ, ಸೂರ್ಯ ನಮಸ್ಕಾರ, ವ್ಯಾಯಾಮಗಳನ್ನು ವೈಯಕ್ತಿಕ, ಕುಟುಂಬ ಅಥವಾ ಗ್ರೂಪ್‍ನಲ್ಲಿ ರೆಕಾರ್ಡ್ ಮಾಡಿ 1 ನಿಮಿಷದ ವಿಡಿಯೊವನ್ನು ಜೂನ್‌ 21ರಂದು 9480051462, 9844443119, 9916331671, 900873573 ಈ ನಂಬರಿಗೆ ಕಳುಹಿ‌ಸಿಕೊಡಬೇಕು. ಆಯ್ದ 100 ವಿಡಿಯೋವನ್ನು ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ಬಿತ್ತರಿಸಲಾಗುವುದು. ಆಯ್ದ 10 ವಿಡಿಯೊಗಳಿಗೆ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT