ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು | ನೀರಾವರಿ ಯೋಜನೆ: ಬಿಜೆಪಿ ಸಾಧನೆ

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಾಲನೆ ನೀಡಿದ ಎಸ್.ವಿ. ರಾಮಚಂದ್ರ
Last Updated 19 ಮಾರ್ಚ್ 2023, 6:33 IST
ಅಕ್ಷರ ಗಾತ್ರ

ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಐದು ವರ್ಷಗಳಲ್ಲಿ ₹ 3,500 ಕೋಟಿ ಅನುದಾನದಲ್ಲಿ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಶಕಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯಡಿ ₹ 1,260 ಕೋಟಿ ವೆಚ್ಚದಲ್ಲಿ ಕನಸಿನ ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಾಲನೆ ಸಿಕ್ಕಿದೆ‌. ಸಿರಿಗೆರೆಶ್ರೀಗಳ ಆಶೀರ್ವಾದದಿಂದ ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದ್ದು, ಶೀಘ್ರವೇ ಎಲ್ಲಾ ಕೆರೆಗಳು ಶೀಘ್ರ ಭರ್ತಿಯಾಗಲಿವೆ. ₹ 350 ಕೋಟಿ ವೆಚ್ಚದಲ್ಲಿ ಅನೇಕ ಸಮುದಾಯ ಭವನಗಳು,ಹಳ್ಳಿಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

₹ 2 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ದಿ, ₹ 4 ಕೋಟಿ ವೆಚ್ಚದಲ್ಲಿ ಪಟ್ಟಣದ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗಿದೆ. ₹ 482 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ 164 ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ, ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.

‘ನನಗೆ ಆರೋಗ್ಯ ಸರಿಯಿಲ್ಲ ಎಂಬ ವಿರೋಧ ಪಕ್ಷದವರ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ನಾನು ದೈಹಿಕವಾಗಿ ಸದೃಢನಾಗಿದ್ದು, ಇನ್ನೂ ಎರಡು ಚುನಾವಣೆ ಎದುರಿಸುವ ಸಾಮರ್ಥ್ಯ ನನ್ನಲ್ಲಿದೆ. ನಿಮ್ಮೆಲ್ಲರ ಮನೆಮಗನಾಗಿ ಸೇವೆ ಮಾಡಲು ಸದಾ ಸಿದ್ಧ’ ಎಂದರು.

‘ಬರದನಾಡಿಗೆ ₹ 2,300 ಕೋಟಿ ನೀರಾವರಿ ಯೋಜನೆಗಳ ಅನುದಾನ ತಂದಿರುವ ಕೀರ್ತಿ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಸಲ್ಲುತ್ತದೆ. ಇದರಿಂದಾಗಿ ನೀರಾವರಿ ವಂಚಿತ ಬರದನಾಡು ಹಸಿರುನಾಡಾಗಲಿದೆ’ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್. ನಾಗರಾಜ್, ಎಸ್.ಕೆ.ಮಂಜುನಾಥ್, ಮುಖಂಡರಾದ ಬಿಸ್ತುವಳ್ಳಿ ಬಾಬು, ವೇಣುಗೋಪಾಲರೆಡ್ಡಿ, ಮಂಜುನಾಥಯ್ಯ,ಅಜಯ್ ಬಣಕಾರ್, ಗಡಿಮಾಕುಂಟೆ ಸಿದ್ದೇಶ್, ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ಅಧಿಕಾರಿಗಳಾದ ಸಾದಿಕ್ ಉಲ್ಲಾಖಾನ್, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT