ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಂದು ಕಲಿವೀರ ಚಿತ್ರ ಬಿಡುಗಡೆ

Last Updated 4 ಆಗಸ್ಟ್ 2021, 5:19 IST
ಅಕ್ಷರ ಗಾತ್ರ

ದಾವಣಗೆರೆ: ಬುಡಕಟ್ಟು ಜನಾಂಗದ ಹಕ್ಕಿನ ಹೋರಾಟದ ವಿಚಾರ ಕುರಿತು ನಿರ್ಮಾಣಗೊಂಡಿರುವ ಚಲನಚಿತ್ರ ಕಲಿವೀರ ಆ.6ರಂದು ರಾಜ್ಯದ 66 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಶ್ರೀನಿವಾಸ್‌ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅನಾಥಾಶ್ರಮದಲ್ಲಿ ಬೆಳೆದು, ಮಠದಲ್ಲಿದ್ದುಕೊಂಡು ವಿದ್ಯೆ ಕಲಿತಿರುವ ಏಕಲವ್ಯ ಚಂದ್ರು ಕಳರಿಪಯಟ್ಟು, ಕರಾಟೆ, ಕತ್ತಿವರಸೆ, ನೃತ್ಯ, ಯೋಗಾಸನ ಹೀಗೆ ಅನೇಕ ಪ್ರತಿಭೆಗಳನ್ನು ಹೊಂದಿದ್ದಾರೆ. ಅಂಥ ಪ್ರತಿಭೆ ಕಮರಿ ಹೋಗಬಾರದು ಎಂಬ ಕಾರಣಕ್ಕೆ ನಾವು ನಾಲ್ವರು ನಿರ್ಮಾಪಕರು ಸೇರಿಕೊಂಡು ಚಿತ್ರನಿರ್ಮಿಸಲು ನಿರ್ಧಾರ ಮಾಡಿದೆವು’ ಎಂದು ತಿಳಿಸಿದರು.

‘ಒಂದೂವರೆ ವರ್ಷದ ಹಿಂದೆಯೇ ಈ ಚಿತ್ರ ಬಿಡುಗಡೆಗೊಳ್ಳಬೇಕಿತ್ತು. ಆದರೆ ಕೊರೊನಾ ಬಂದಿದ್ದರಿಂದ ಬಹಳ ವಿಳಂಬವಾಯಿತು. ಎಲ್ಲ ಚಿತ್ರಮಂದಿರಗಳು ಮುಚ್ಚಿದ್ದವು. ಈಗ ಶೇ 50 ಆಸನಗಳನ್ನು ಭರ್ತಿ ಮಾಡಿಕೊಂಡು ಸಿನಿಮಾ ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ಇನ್ನು ತಡ ಮಾಡೋದು ಬೇಡ ಎಂದು ಪ್ರಕೇಕ್ಷಕರನ್ನು ನಂಬಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

ಶತಮಾನಗಳ ಕಾಲದಿಂದಲೂ ನಿರಂತರವಾಗಿ ಆದಿವಾಸಿ ಜನಾಂಗದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ದೌರ್ಜನ್ಯ ಎಸಗುವ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಂತು ಆದಿವಾಸಿ ಕಲಿ ವೀರಾವೇಶದಿಂದ ಹೋರಾಡುವ ರೋಚಕ ದೃಶ್ಯಾವಳಿಗಳು ಚಿತ್ರದಲ್ಲಿ ಮೂಡಿಬಂದಿದೆ ಎಂದು ನಿರ್ವಾಹಕ ಮಧುಗಿರಿ ಪ್ರಕಾಶ್‌ ತಿಳಿಸಿದರು.

ಜ್ಯೋತಿ ಆಟ್ರ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಏಕಲವ್ಯ, ನಾಯಕಿ ನಟಿಯರಾಗಿ
ಪಾವನಗೌಡ ಹಾಗೂ ಚಿರಶ್ರೀ ಅಂಚನ್ ನಟಿಸಿದ್ದಾರೆ. ವಿ. ಮನೋಹರ್ ಗೀತೆ ಸಂಯೋಜನೆ ಮಾಡಿದ್ದು, ಅವಿಯವರು ನಿರ್ದೇಶನ ಮಾಡಿದ್ದಾರೆ. ಸಾಹಸ ಸಂಯೋಜನೆಯನ್ನು ಡಿಫರೆಂಟ್ ಡ್ಯಾನಿ, ವಿ. ರಾಘವೇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ನೃತ್ಯ ಸಂಯೋಜನೆಯನ್ನು ಮುರುಳಿ ನಿರ್ವಹಿಸಿದ್ದಾರೆ. ತಬಲ ನಾಣಿ, ಟಿ.ಎಸ್. ನಾಗಭರಣ, ನೀನಾಸಂನ ಅಶ್ವತ್ಥ್, ರಮೇಶ್ ಪಂಡಿತ್, ಉಮೇಶ್ ಪುಂಗ, ಅನಿತಾ ಭಟ್, ಡ್ಯಾನಿ ಕುಟ್ಟಪ್ಪ ಮುನಿ, ಸುರೇಶ್ ಚಂದ್ರ, ಸೂರ್ಯನಾರಾಯಣ್ ನಟಿಸಿದ್ದಾರೆ ಎಂದರು.

ಕೊರೊನಾ ಬಗ್ಗೆಯೇ ಚಿಂತೆ ಮಾಡಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಜನರಿಗೆ ಈ ಚಿತ್ರ ವೀಕ್ಷಿಸುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು. ಮಾಸ್ಕ್‌ ಹಾಕಿಕೊಂಡು, ಅಂತರ ಕಾಪಾಡಿಕೊಂಡು ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಮೇಯರ್ ಎಸ್. ಟಿ. ವೀರೇಶ್ ಸಲಹೆ ನೀಡಿದರು.

ನಾಯಕನಟ ಏಕಲವ್ಯ ಚಂದ್ರು, ‘ನನ್ನ ಬಾಲ್ಯ ಮಲ್ಲಾಡಿಹಳ್ಳಿಯಲ್ಲಿ ಅನಾಥಾಶ್ರಮದಲ್ಲಿ ಕಳೆಯಿತು. ಬಳಿಕ ಆಟೊ ಚಾಲಕನಾಗಿ, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ರಂಗಾಯಣ, ನೀನಾಸಂನಲ್ಲಿ ರಂಗಭೂಮಿ ಅಧ್ಯಯನ ಮಾಡಿದೆ. ಕೊರಿಯಾಗ್ರಫಿ ಮೂಲಕ ಬದುಕು ರೂಪಿಸಿಕೊಂಡ ನನ್ನನ್ನು ಗುರುತಿಸಿ ನಾಯಕನಾಗಿ ಅಭಿನಯಿಸಲು ನಿರ್ಮಾಪಕರು ಅವಕಾಶ ನೀಡಿದ್ದಾರೆ’ ಎಂದು ಹೇಳಿಕೊಂಡರು.

ನಟಿ ಚಿರಶ್ರೀ ಅಂಚನ್, ‘ಫಾಲ್ಸ್ ನಂತಹ ರಮಣೀಯ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ್, ರಾಜು ಪೂಜಾರ್, ಚಂದ್ರಶೇಖರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT