ಶುಕ್ರವಾರ, ಡಿಸೆಂಬರ್ 2, 2022
22 °C

ಕೆಂಚಿಕೊಪ್ಪ: ಶಿಕ್ಷಣ ಪ್ರೇಮಿ ಕೆಂಚಿಕೊಪ್ಪ ಭರ‍್ಮಗೌಡ

ಡಿ.ಎಂ. ಹಾಲಾರಾಧ್ಯ Updated:

ಅಕ್ಷರ ಗಾತ್ರ : | |

Prajavani

ಕೆಂಚಿಕೊಪ್ಪ (ನ್ಯಾಮತಿ): ಪ್ರತಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮೂರಿನ ಮಕ್ಕಳಿಗೆ ಪಠ್ಯ ಸಾಮಗ್ರಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಶಿಕ್ಷಣ ಪ್ರೇಮಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದ ಕರಿಗೌಡರ ಭರ‍್ಮಗೌಡ (64).

ಬಡತನದ ನಡುವೆಯೇ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವ ಗೌಡರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಕುಟುಂಬ ವಿಭಜನೆ ನಂತರ ಕೂಲಿ ಮಾಡಿ ಜೀವನ ಮಾಡಬೇಕಾದ ಅನಿವಾರ್ಯತೆ ಎದುರಾದ್ದರಿಂದ ಅವರ ಮಕ್ಕಳು ಓದುವ ಆಸಕ್ತಿ ಕಳೆದುಕೊಂಡರು. ಮೊದಲ ಮಗ ಕಷ್ಟಪಟ್ಟು ಓದಿ ಪ್ರೌಢಶಾಲಾ ಶಿಕ್ಷಕನಾಗಿದ್ದಾರೆ. 2ನೇ ಮಗ ಎಸ್ಸೆಸ್ಸೆಲ್ಸಿ ಓದುತ್ತಿರುವಾಗ ಶುಲ್ಕ ಪಾವತಿಸಲು ಸಾಧ್ಯವಾಗದೇ ವಿದ್ಯಾಭ್ಯಾಸ ಸ್ಥಗಿತಗೊಂಡು ಮನೆಯಲ್ಲಿ ರೈತಾಪಿ ಕೆಲಸ ಮಾಡುತ್ತಿದ್ದಾರೆ.

‘ಒಬ್ಬ ಮಗ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ್ದಕ್ಕೆ ಬಹಳ ನೋವಾಯಿತು. ಕೃಷಿಗೆ ಕೈ ಹಾಕಿದ ನಂತರ ಆರ್ಥಿಕ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡುಬಂದಿತು. ನನ್ನ ಮಗನಂತೆ ಬೇರೆಯವರ ಮಕ್ಕಳು ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಪ್ರತಿವರ್ಷ ಆಗಸ್ಟ್ 15ರಂದು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೆನ್ನು, ಪೆನ್ಸಿಲ್, ಮೆಂಡರ್‌, ಇಂಗ್ಲಿಷ್ ನಿಘಂಟು ಪುಸ್ತಕ, ಸ್ಕೇಲ್ ನೀಡುತ್ತಾ ಬಂದಿದ್ದೇನೆ. ಈ ವರ್ಷ 105 ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ನೀಡಿದ್ದೇನೆ. ಕಡುಬಡತನದ ಕೆಲ ವಿದ್ಯಾರ್ಥಿಗಳಿಗೆ ಕೆಲಮೊಮ್ಮೆ ಶುಲ್ಕವನ್ನೂ ಪಾವತಿಸಿರುವೆ’ ಎನ್ನುತ್ತಾರೆ
ಭರ‍್ಮಗೌಡ.

‘ನನ್ನ ಹಿರಿಯ ಪುತ್ರ ತುಮಕೂರಿನಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವರ್ಷದಲ್ಲಿ ಒಂದು ತಿಂಗಳ ವೇತನವನ್ನು ನೀಡುತ್ತಾನೆ. ನನ್ನ ಕಾರ್ಯಕ್ಕೆ ಮಗ ಬೆಂಬಲವಾಗಿ ನಿಂತಿದ್ದಾನೆ’ ಎಂದು ಗೌಡರು ಸಂತಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು