ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕಾರ ನಿರ್ಣಯ ಕೈಬಿಟ್ಟ ಕಣಿವಿಹಳ್ಳಿ ಗ್ರಾಮಸ್ಥರು

ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು
Last Updated 11 ಏಪ್ರಿಲ್ 2019, 16:29 IST
ಅಕ್ಷರ ಗಾತ್ರ

ಹರಪನಹಳ್ಳಿ: ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದ ತಾಲ್ಲೂಕಿನ ಕಣವಿಹಳ್ಳಿ ಗ್ರಾಮಸ್ಥರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ನಂದಿಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣವಿಹಳ್ಳಿ ಗ್ರಾಮ 500 ಮನೆ, 3000 ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಒಟ್ಟು 1904 ಮತದಾರರು ಇದ್ದಾರೆ. ಆದರೆ ಮತದಾರರ ಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಸದಸ್ಯರಿಲ್ಲ ಎಂಬುದು ಗ್ರಾಮಸ್ಥರ ದೂರು. ಹೀಗಾಗಿ 2015ರ ಚುನಾವಣೆಯಿಂದ ಇಲ್ಲಿಯವರಿಗೆ ಏಳು ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಈಗ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೂ ಮುಂದಾಗಿದ್ದರು.

ಬೇಡಿಕೆ ಈಡೇರಿಕೆಗಾಗಿ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ ಸೇರಿ ವಿವಿಧ ಹಂತದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಗುರುವಾರ ಕಣವಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ತಹಶೀಲ್ದಾರ್ ಪ್ರಸಾದ ಹಾಗೂ ಅಧಿಕಾರಿಗಳ ತಂಡ ಗ್ರಾಮದ ಮುಖಂಡರ ಸಭೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.

‘ಸದ್ಯದ ಹಂತದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಲು ಆಗುವುದಿಲ್ಲ. 2020ರ ಗ್ರಾಮ ಪಂಚಾಯಿತಿ ಚುನಾವಣೆಗೆ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತಿದ್ದೇವೆ. ಹೀಗಾಗಿ ಚುನಾವಣೆ ಬಹಿಷ್ಕಾರ ನಿರ್ಧಾರ ಕೈ ಬಿಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದೆವು. ಇದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ತಿಳಿಸಿದರು.

ಬಹಿಷ್ಕಾರಕ್ಕೆ ಕಾರಣ:ನಂದಿಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನಾಲ್ಕು ಹಳ್ಳಿಗಳು ಸೇರಿವೆ. ವಾರ್ಡ್ ವಿಂಗಡಣೆ ನಂತರ ಆರು ಸ್ಥಾನವಿದ್ದ ನಂದಿಬೇವೂರ ಗ್ರಾಮಕ್ಕೆ ಹತ್ತು ಸ್ಥಾನ, ಮೂರು ಸ್ಥಾನ ಹೊಂದಿದ್ದ ನಂದಿಬೇವೂರು ತಾಂಡಾಗೆ ನಾಲ್ಕು ಸ್ಥಾನ, ನಾಲ್ಕು ಸ್ಥಾನ ಹೊಂದಿದ್ದ ಕೊಂಗಣಹೊಸೂರು ಗ್ರಾಮಕ್ಕೆ 5 ಸದಸ್ಯ ಸ್ಥಾನ ಸಿಕ್ಕಿದ್ದವು. ಆದರೆ ಇದೇ ಗ್ರಾಮ ಪಂಚಾಯಿತಿಗೆ ಒಳಪಡುವ ಕಣವಿಹಳ್ಳಿ ಗ್ರಾಮ 1904 ಮತದಾರರನ್ನು ಹೊಂದಿದ್ದರೂ ಹೆಚ್ಚುವರಿ ಸ್ಥಾನಗಳು ದೊರೆತಿರಲಿಲ್ಲ. ಇದ್ದ ಐದು ಸದಸ್ಯ ಸ್ಥಾನಗಳಲ್ಲೇ ಒಂದನ್ನು ಕಡಿತಗೊಳಿಸಿ ನಾಲ್ಕಕ್ಕೆ ಸೀಮಿತಗೊಳಿಸಿದ್ದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT