ಗುರುವಾರ , ಮಾರ್ಚ್ 23, 2023
32 °C
ಗಾಜಿನ ಮನೆ ಆವರಣದಲ್ಲಿ ಸಿನಿಮಾ, ಧಾರಾವಾಹಿ, ಪ್ರಿವೆಡ್ಡಿಂಗ್ ಶೂಟಿಂಗ್‌ಗೆ ಅವಕಾಶ

ದಾವಣಗೆರೆ: ಸೆಪ್ಟೆಂಬರ್‌ನಲ್ಲಿ ಲೇಸರ್ ಶೋ ವೀಕ್ಷಣೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ವೇಳೆಗೆ ಬೆಣ್ಣೆದೋಸೆ ನಗರಿಯ ಜನರಿಗೆ ಸಂಗೀತ ಕೇಳುತ್ತ ಲೇಸರ್ ಶೋ ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ. ಸ್ಮಾರ್ಟ್‌ ಸಿಟಿಯಿಂದ ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲೇಸರ್ ಶೋ ಕಾಮಗಾರಿಗೆ ಬುಧವಾರ ಚಾಲನೆ ಸಿಕ್ಕಿದ್ದು, ಈಗಾಗಲೇ ಶೇ 50ರಷ್ಟು ಕಾಮಗಾರಿಗಳು ಮುಗಿದಿವೆ. ಬೋನ್ಸಾಯ್ ಗಿಡಗಳ ಕೆಳಗಿನ ಬೆಂಚುಗಳ ಮೇಲೆ ಕುಳಿತು ಸಂಗೀತ ಆಲಿಸುತ್ತ ಲೇಸರ್ ಶೋ ವೀಕ್ಷಿಸಬಹುದು.

‘ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಮಾದರಿ ಇಲ್ಲವೇ ಅದಕ್ಕಿಂತಲೂ ಚೆನ್ನಾಗಿ ಗಾಜಿನ ಮನೆಯಲ್ಲಿ ಲೇಸರ್ ಶೋ ಅನ್ನು ವೀಕ್ಷಿಸಬಹುದಾಗಿದ್ದು,  ಮುಂದಿನ ದಸರಾ ಹಬ್ಬದ ವೇಳೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ. ಆ ವೇಳೆಗೆ ಬಣ್ಣದ ಬೆಳಕಿನಲ್ಲಿ ಜನರು ಕಾರಂಜಿಯನ್ನು ವೀಕ್ಷಿಸಬಹುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್‌, ‘ಪ್ರಜಾವಾಣಿ’ಗೆ ತಿಳಿಸಿದರು.

ಸಿನಿಮಾ ಶೂಟಿಂಗ್‌ಗೆ ಅವಕಾಶ: ಕೋವಿಡ್ ಎರಡನೇ ಅಲೆಯಿಂದಾಗಿ ಮುಚ್ಚಿದ್ದ ಗಾಜಿನ ಮನೆ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ. ಸಿನಿಮಾ, ಧಾರಾವಾಹಿ, ಪ್ರೀವೆಡ್ಡಿಂಗ್‌ ಶೂಟಿಂಗ್ ಹಾಗೂ ಫೋಟೊ ತೆಗೆಯಲು ಅವಕಾಶ ಕಲ್ಪಿಸಲಾಗಿದೆ.

‘ಗಾಜಿನ ಮನೆಯಲ್ಲಿ ‘ನೋಟಗಾರ’ ಚಿತ್ರೀಕರಣಗೊಂಡ ಮೊದಲ ಸಿನಿಮಾ ಆಗಿದ್ದು, ಆ ಬಳಿಕ ಕೊರೊನಾ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ’ ಎಂದು ಬೋಮ್ಮನ್ನಾರ್‌ ಹೇಳುತ್ತಾರೆ.

ನನೆಗುದಿಗೆ ಬಿದ್ದ ಅಕ್ವೇರಿಯಂ: ಗಾಜಿನ ಮನೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಅಕ್ವೇರಿಯಂ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ಏಷ್ಯಾದಲ್ಲೇ ಅತಿ ದೊಡ್ಡದಾದ ಅಕ್ವೇರಿಯಂ ನಿರ್ಮಾಣ ಕಾಮಗಾರಿ ಮಾಡುವ ಪ್ರಸ್ತಾವವಿತ್ತು. ಹಣಕಾಸಿನ ಕೊರತೆಯಿಂದಾಗಿ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಗಾಜಿನ ಮನೆಗೆ ಬೇಕು ಹಲವು ಸೌಲಭ್ಯ: ಪ್ರವಾಸಿ ತಾಣವಾದ ಗಾಜಿನ ಮನೆಗೆ ಹೋಗಲು ಸೂಕ್ತ ರಸ್ತೆಗಳಿಲ್ಲ. ಮಣ್ಣಿನ ರಸ್ತೆಗಳು ಇದ್ದು, ಮಳೆ ಬಂದರೆ ಕೆಸರು ತುಂಬಿಕೊಳ್ಳುತ್ತದೆ. ಇದರಿಂದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕಿದೆ. ಇದಲ್ಲದೇ ಗಾಜಿನ ಮನೆಗೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಹೆಚ್ಚಿನ ವೆಚ್ಚ ತಗುಲುತ್ತದೆ. ಸೋಲಾರ್ ವಿದ್ಯುತ್ ದೀಪಗಳೂ ಬೇಕಾಗಿವೆ. ಅಲ್ಲದೇ ಬರುವ ಪ್ರವಾಸಿಗರಿಗೆ ಕ್ಯಾಂಟೀನ್ ವ್ಯವಸ್ಥೆ ಹಾಗೂ ನಾಮಫಲಕಗಳನ್ನು ಅಳವಡಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.